ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಚಂದ್ರಶೇಖರ್ ಸಾವಿನ ಹಿಂದಿದೆ ರತ್ನಾಕರ ರಹಸ್ಯ

06:00 AM May 30, 2024 IST | Samyukta Karnataka

ಶಿವಕುಮಾರ್ ಮೆಣಸಿನಕಾಯಿ
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತಲ್ಲಣ ಉಂಟು ಮಾಡಿದ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ನಿಯಮಿತದ ಲೆಕ್ಕ ಅಧೀಕ್ಷಕ ಪಿ.ಚಂದ್ರಶೇಖರ್ ಆತ್ಮಹತ್ಯೆಗೆ ಆಂಧ್ರಪ್ರದೇಶದ ಹೈದರಾಬಾದ್ ಮೂಲದ ಐವರು ಖಾಸಗಿ ವ್ಯಕ್ತಿಗಳು ಒತ್ತಡ ಹಾಕಿರುವುದೇ ಕಾರಣ ಎಂಬ ಶಂಕೆ ವ್ಯಕ್ತವಾಗಿದೆ. ಹೈದರಾಬಾದ್‌ನಲ್ಲಿರುವ ವ್ಯಕ್ತಿಗಳು ಎಸ್.ಟಿ. ನಿಗಮದ ಅಧಿಕೃತ ಬ್ಯಾಂಕ್ ಖಾತೆಗಳ ಚೆಕ್‌ಬುಕ್‌ಗಳನ್ನು ಲೆಕ್ಕ ಅಧೀಕ್ಷಕರಿಂದ ಕಿತ್ತುಕೊಂಡಿದ್ದರು ಎಂಬುದು ಇಡೀ ಘಟನೆಯ ಮೂಲ ಎಂದು ಖಚಿತ ಮೂಲಗಳು ತಿಳಿಸಿವೆ.
ಈ ಮಾಹಿತಿಯ ಜಾಡು ಹಿಡಿದು ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳ ತಂಡ ಹೈದರಾಬಾದ್‌ಗೆ ತೆರಳಲಿದೆ ಎಂದು ಸರಕಾರದ ಉನ್ನತ ಮೂಲಗಳು `ಸಂಯುಕ್ತ ಕರ್ನಾಟಕ'ಕ್ಕೆ ತಿಳಿಸಿವೆ. ಆದರೆ ಈ ಖಾಸಗಿ ವ್ಯಕ್ತಿಗಳಿಗೂ ನಿಗಮದ ಅಧಿಕಾರಿಗಳು ಏನು ನಂಟು? ಯಾವ ಕಾರಣಕ್ಕೆ ನಿಗಮದ ಚೆಕ್‌ಬುಕ್‌ಗಳು ಖಾಸಗಿ ವ್ಯಕ್ತಿಗಳ ಕೈ ಸೇರಿವೆ ಎಂಬುದನ್ನು ಬೇಧಿಸಿದರೆ ಮಾತ್ರ ಚಂದ್ರಶೇಖರ್ ಅವರ ಆತ್ಮಹತ್ಯೆಯ ಕಾರಣ ಬೆಳಕಿಗೆ ಬರಲಿದೆ. ಆದರೆ ಇಡೀ ಹಗರಣದಲ್ಲಿ ರಾಜ್ಯ ಸರಕಾರದ ಉನ್ನತ ಅಧಿಕಾರಿಗಳು, ಬ್ಯಾಂಕ್ ಅಧಿಕಾರಿಗಳು ಮತ್ತು ಖಾಸಗಿ ವ್ಯಕ್ತಿಗಳ ನಡುವೆ ದೊಡ್ಡ ಪ್ರಮಾಣದ ವ್ಯವಹಾರ ನಡೆದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಹೈದರಾಬಾದ್‌ನ ಖಾಸಗಿ ವ್ಯಕ್ತಿಗಳು ಲೆಕ್ಕ ಅಧೀಕ್ಷಕ ಚಂದ್ರಶೇಖರ್ ಅವರಿಂದ ನಿಗಮದ ಚೆಕ್‌ಬುಕ್‌ಗಳನ್ನು ಹೇಗೆ ಪಡೆದುಕೊಂಡರು ಎಂಬುದೇ ಭಾರಿ ನಿಗೂಢವಾಗಿದೆ.

ಬ್ಯಾಂಕ್ ಖಾತೆ ಸ್ಥಳಾಂತರದ ಗುಟ್ಟೇನು?
ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ನಿಯಮಿತ ೨೦೦೭ರಲ್ಲಿ ರಾಜ್ಯ ಪ.ಜಾ., ಪ.ಪಂ. ಅಭಿವೃದ್ಧಿ ನಿಗಮದಿಂದ ಪ್ರತ್ಯೇಕಗೊಂಡಿದೆ. ಅದಾದ ಬಳಿಕ ನಿಗಮವು ತನ್ನ ಖಾತೆಯನ್ನು ನಿಗಮದ ಮುಖ್ಯ ಕಚೇರಿ ಸಮೀಪದಲ್ಲಿರುವ ವಸಂತ ನಗರದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ಹೊಂದಿದೆ. ಆದರೆ ಏಕಾಏಕಿ ಕಳೆದ ಫೆಬ್ರವರಿ ೧೯ರಂದು ಈ ಶಾಖೆಯಲ್ಲಿದ್ದ ಬ್ಯಾಂಕ್ ಖಾತೆಗಳನ್ನು ಎಂ.ಜಿ.ರಸ್ತೆಯಲ್ಲಿರುವ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಗೆ ಸ್ಥಳಾಂತರ ಮಾಡಲಾಗಿದೆ.
ಒಂದು ಶಾಖೆಯಿಂದ ಮತ್ತೊಂದು ಶಾಖೆಗೆ ಬ್ಯಾಂಕ್ ಖಾತೆ ಸ್ಥಳಾಂತರಗೊಂಡ ಬಳಿಕ ಸಹಜವಾಗಿಯೇ ಹೊಸ ಪಾಸ್‌ಬುಕ್, ಚೆಕ್‌ಬುಕ್ ಮತ್ತಿತರ ದಾಖಲೆಗಳು ಬದಲಾಗುತ್ತವೆ. ಬದಲಾದ ಶಾಖೆಯಿಂದ ನಿಗಮದ ಅಧಿಕಾರಿಗಳಿಗೆ ಯಾವುದೇ ಪಾಸ್‌ಬುಕ್, ಚೆಕ್‌ಬುಕ್‌ಗಳು ಬಂದಿಲ್ಲ. ಆದರೆ ಎಂ.ಜಿ.ರಸ್ತೆಯ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಿಂದ ಪಾಸ್‌ಬುಕ್, ಚೆಕ್‌ಬುಕ್ ಸೇರಿದಂತೆ, ಪಾಸ್‌ವರ್ಡ್ ಸೇರಿದಂತೆ ಎಲ್ಲ ದಾಖಲೆಗಳು ಕೋರಿಯರ್ ಮೂಲಕ ರವಾನೆ ಆಗಿವೆ. ಈ ಎಲ್ಲ ದಾಖಲೆಗಳು ಎಲ್ಲಿಗೆ ಮತ್ತು ಯಾರಿಗೆ ರವಾನೆ ಆಗಿವೆ ಎಂಬ ಮಾಹಿತಿ ಈಗ ನಿಗಮದಲ್ಲೂ ಇಲ್ಲ, ಬ್ಯಾಂಕ್‌ನಲ್ಲೂ ಇಲ್ಲ.
ಖಾತೆ ಬದಲಾದ ನಂತರ ಹೊಸ ಖಾತೆಗೆ ಬೇರೆ ಬ್ಯಾಂಕ್ ಮತ್ತು ಖಜಾನೆ-೨ರಿಂದ ಒಟ್ಟು ೧೮೭.೩೩ ಕೋಟಿ ರೂ.ಗಳು ಜಮಾ ಆಗಿದೆ. ಅದಾದ ನಂತರ ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿದ್ದರಿಂದ ನಿಗಮದಿಂದ ಅಧಿಕೃತವಾಗಿ ಹಣದ ವ್ಯವಹಾರ ನಡೆದಿಲ್ಲ. ಆದರೆ ೯೪,೭೩,೦೮,೫೦೦ ರೂ.ಗಳು ನಿಗಮದ ಖಾತೆಯಿಂದ ಖಾಸಗಿ ವ್ಯಕ್ತಿಗಳ ಖಾತೆಗೆ ಪಾವತಿ ಆಗಿದೆ. ನಿಗಮದ ಅಧಿಕೃತ ಆದೇಶವಿಲ್ಲದೇ ಕೇವಲ ಚೆಕ್‌ಬುಕ್ ಆಧರಿಸಿ ೯೪.೭೩ ಕೋಟಿ ರೂ.ಗಳನ್ನು ಬ್ಯಾಂಕ್ ಅಧಿಕಾರಿಗಳು ಪಾವತಿಸಿದ್ದಾರೆ. ಇದು ಅನೈಸರ್ಗಿಕವಾಗಿ ಮೇಲ್ನೋಟಕ್ಕೆ ಕಂಡುಬಂದರೂ ಬ್ಯಾಂಕ್ ಅಧಿಕಾರಿಗಳು ನಿಗಮದ ಅಧಿಕಾರಿಗಳ ಜತೆ ಚರ್ಚೆಯನ್ನೇ ಮಾಡದಿರುವುದು ನಿಗೂಢವಾಗಿದೆ.

ಹೈದರಾಬಾದ್‌ನಲ್ಲಿ ಚೆಕ್‌ಬುಕ್!
ವಿಚಿತ್ರವೆಂದರೆ, ಬೆಂಗಳೂರಿನ ಎಂ.ಜಿ.ರಸ್ತೆಯಲ್ಲಿರುವ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಶಾಖೆಯ ನಿಗಮದ ಖಾತೆಯಲ್ಲಿರುವ ೯೪.೭೩ ಕೋಟಿ ರೂ.ಗಳನ್ನು ಆಂಧ್ರಪ್ರದೇಶದ ಹೈದರಾಬಾದ್ ಮೂಲದ ವ್ಯಕ್ತಿಗಳು `ರತ್ನಾಕರ ಬ್ಯಾಂಕ್' ಖಾತೆಗೆ ಚೆಕ್ ಮೂಲಕ ವರ್ಗಾವಣೆ ಮಾಡಿಕೊಂಡಿದ್ದಾರೆ. ಈ ರತ್ನಾಕರ ಬ್ಯಾಂಕ್ ಖಾತೆಗಳು ಯಾರಿಗೆ ಸೇರಿದ್ದವು? ನಿಗಮದ ಚೆಕ್‌ಬುಕ್‌ಗಳು ಹೈದರಾಬಾದ್ ಮೂಲದ ವ್ಯಕ್ತಿಗಳಿಗೆ ತಲುಪಿಸಿದ್ದು ಏಕೆ? ಈ ಸಂಬಂಧ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಆತ್ಮಹತ್ಯೆಗೆ ಶರಣಾದ ಪಿ.ಚಂದ್ರಶೇಖರ್ ಅವರನ್ನು ವಿಚಾರಣೆ ಮಾಡಿದ್ದು ಏಕೆ? ತಿಂಗಳುಗಟ್ಟಲೆ ಚೆಕ್‌ಬುಕ್ ಇಲ್ಲದಿದ್ದರೂ ಎಂ.ಡಿ. ಗಮನಕ್ಕೆ ಈ ವಿಷಯ ಬರಲಿಲ್ಲವೇ? ಎಂಬ ಪ್ರಶ್ನೆಗಳಿಗೆ ಸಿಐಡಿ ತನಿಖೆ ಉತ್ತರ ನೀಡಬೇಕಿದೆ. ಹೈದರಾಬಾದ್ ವ್ಯಕ್ತಿಗಳು ನಿಗಮದಲ್ಲಿರುವ ಹಿರಿಯ ಅಧಿಕಾರಿಗಳು ಹಾಗೂ ರಾಜಕಾರಣಿಗಳ ಜತೆ ನೇರ ಸಂಬಂಧ ಹೊಂದಿದ್ದಾರೆಯೇ? ಇಷ್ಟು ದೊಡ್ಡ ಪ್ರಮಾಣದ ಹಣಕಾಸು ವಹಿವಾಟು ನಡೆಸಲು ಖಾಸಗಿ ವ್ಯಕ್ತಿಗಳಿಗೆ ಬೆನ್ನೆಲುಬಾಗಿ ನಿಂತಿರುವ ಶಕ್ತಿ ಯಾವುದು? ಎಂಬುದು ಈಗ ಸರಕಾರದ ಮಟ್ಟದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಎಂ.ಡಿ. ತಲೆದಂಡ
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲಾಖೆ ತನಿಖೆಯನ್ನು ಕಾಯ್ದಿರಿಸಿ ಎಂಡಿ ಜೆ.ಜಿ.ಪದ್ಮನಾಭ ಮತ್ತು ಲೆಕ್ಕಾಧಿಕಾರಿ ಪರಶುರಾಮ್ ದುಗ್ಗಣ್ಣನವರ್ ಇಬ್ಬರನ್ನೂ ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತುಗೊಳಿಸಿ ಸರ್ಕಾರ ಆದೇಶಿಸಿದೆ. ಇನ್ನೊಂದೆಡೆ ನಿಗಮದ ದೂರಿನನ್ವಯ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಎಂಡಿ, ಸಿಇಒ ಸೇರಿದಂತೆ ಆರು ಅಧಿಕಾರಿಗಳ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

Next Article