ಚಿರಸ್ಮರಣೀಯ ಸನ್ಮಾನ ನಾಡಿನ 7 ಕೋಟಿ ಕನ್ನಡಿಗರಿಗೆ ಅರ್ಪನೆ
ಶರಣರು ಸಂಸ್ಕೃತವನ್ನು ಸಾರಾಸಗಟಾಗಿ ತಿರಸ್ಕರಿಸಿ ಮೊದಲ ಬಾರಿಗೆ ಜನರ ಭಾಷೆಯಲ್ಲಿ, ಜನರಾಡುವ ಭಾಷೆಯಲ್ಲಿ ಧರ್ಮದ ಮೌಲ್ಯಗಳನ್ನು ಸಾರಿದರು, ದಯೆಯೆ ಧರ್ಮದ ಮೂಲ ಎನ್ನುವ ಮಾತು ಎಷ್ಟು ಸರಳವಾಗಿದೆ. ಇದೇ ಜನರ ಭಾಷೆ.
ಬೀದರ್: ಚಿರಸ್ಮರಣೀಯ ಸನ್ಮಾನವನ್ನು ನಾಡಿನ 7 ಕೋಟಿ ಕನ್ನಡಿಗರಿಗೆ ಅರ್ಪಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕನೆಂದು ಘೋಷಿಸಿದ ಚಾರಿತ್ರಿಕ ನಿರ್ಣಯಕ್ಕಾಗಿ ಇಂದು ಬಸವ ಕಲ್ಯಾಣದಲ್ಲಿ ನಡೆದ ಸಮಾರಂಭದಲ್ಲಿ ಅವರು 160 ಮಂದಿ ಶರಣ ಸ್ವಾಮೀಜಿಗಳು, ಗುರುಗಳು ಹಾಗೂ ವೀರಶೈವ- ಲಿಂಗಾಯತ ಮಠಾಧೀಶರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿರುವ ಅವರು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸುವ ಅವಕಾಶ ಸಿಕ್ಕಿದ್ದೇ ನನ್ನ ಸೌಭಾಗ್ಯ. ನನಗೆ ಸಿಕ್ಕ ಈ ಚಿರಸ್ಮರಣೀಯ ಸನ್ಮಾನವನ್ನು ನಾಡಿನ 7 ಕೋಟಿ ಕನ್ನಡಿಗರಿಗೆ ಅರ್ಪಿಸುತ್ತೇನೆ.
ಸಮಸ್ತ ಕನ್ನಡಿಗರು, ಸಮಸ್ತ ಭಾರತೀಯರ ಅಭಿಮಾನದ ಸಂಕೇತವಾಗಿ ಬಸವಣ್ಣನವರನ್ನು ನಾಡಿನ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ್ದೇವೆ. ಜಾತಿ, ವರ್ಗ, ಅಸಮಾನತೆ ಇಲ್ಲದ ಮನುಷ್ಯತ್ವದ ಸಮಾಜ ನಿರ್ಮಾಣ ಬಸವಣ್ಣರ ಗುರಿಯಾಗಿತ್ತು. ಹೀಗಾಗಿ ಬುದ್ದ, ಬಸವ, ಅಂಬೇಡ್ಕರ್ ನನಗೆ ಮಾರ್ಗದರ್ಶಕರು. ಇವರ ವಿಚಾರಗಳು ಇಂದು, ನಾಳೆ ಮಾತ್ರವಲ್ಲ ಯಾವತ್ತೂ ಶಾಶ್ವತ.
ಇಡೀ ಜಗತ್ತಿಗೆ ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವವನ್ನು ಪರಿಚಯಿಸಿದ್ದು ಬಸವಾದಿ ಶರಣರು. ಅಂಬೇಡ್ಕರ್ ಅವರ ಸಂವಿಧಾನದಲ್ಲಿ ಇರುವ ಮೌಲ್ಯಗಳಲ್ಲೆವೂ ಬಸವಾದಿ ಶರಣರ ಆಶಯಗಳಲ್ಲಿವೆ. ಕಾಯಕ, ಉತ್ಪಾದನೆ, ದಾಸೋಹ ಬಸವಾದಿ ಶರಣರ ಆಶಯ. ಈ ಮೂಲಕ ಸಮಬಾಳು, ಸಮಪಾಲು ಎನ್ನುವುದನ್ನು 12ನೇ ಶತಮಾನದಲ್ಲೇ ಸಾರಿದ್ದಾರೆ.
ಬಸವಣ್ಣ ಈ ಮಣ್ಣಿನ ಸಾಂಸ್ಕೃತಿಕ ಸ್ಫೂರ್ತಿ ಆಗಿರುವುದರಿಂದ ಸರ್ಕಾರಿ ಕಚೇರಿ ಮತ್ತು ಶಾಲಾ ಕಾಲೇಜುಗಳಲ್ಲಿ ಬಸವಣ್ಣರ ಭಾವಚಿತ್ರ ಕಡ್ಡಾಯಗೊಳಿಸಿ ಆದೇಶಿಸಿದ್ದೆ. ಲಕ್ಷಾಂತರ ಕನ್ನಡಿಗರ ಸಾಕ್ಷಿಯಾಗಿ ನಾನು ಬಸವ ಜಯಂತಿಯಂದೇ ಮೊದಲ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದೆ. ಬಸವಾದಿ ಶರಣರ ತತ್ವಗಳಿಗೆ ವಿರುದ್ಧವಾಗಿ ಇವತ್ತಿನ ವಿದ್ಯಾವಂತರು ಕಂದಾಚಾರಗಳನ್ನು ಆಚರಿಸುತ್ತಿದ್ದಾರೆ. ಆತ್ಮಸಾಕ್ಷಿ ವಿರುದ್ಧವಾಗಿ ನಡೆದುಕೊಳ್ಳಬಾರದು ಎನ್ನುವುದು ವಚನಗಳ ಆಶಯ.
"ಎಲವೋ ಎಂದರೆ ನರಕ, ಅಯ್ಯಾ ಎಂದರೆ ಸ್ವರ್ಗ" ಎಂದು ಶರಣರು ಹೇಳಿದ್ದಾರೆ. ದಯೆ ಇಲ್ಲದ ಧರ್ಮ ಯಾವುದಯ್ಯ ಎನ್ನುವ ಮೂಲಕ ನಿಜವಾದ ಧರ್ಮ ಎಂದರೆ ಏನು ಎನ್ನುವುದನ್ನು ತಿಳಿಸಿದ್ದಾರೆ.
ಶರಣರು ಸಂಸ್ಕೃತವನ್ನು ಸಾರಾಸಗಟಾಗಿ ತಿರಸ್ಕರಿಸಿ ಮೊದಲ ಬಾರಿಗೆ ಜನರ ಭಾಷೆಯಲ್ಲಿ, ಜನರಾಡುವ ಭಾಷೆಯಲ್ಲಿ ಧರ್ಮದ ಮೌಲ್ಯಗಳನ್ನು ಸಾರಿದರು. ದಯೆಯೆ ಧರ್ಮದ ಮೂಲ ಎನ್ನುವ ಮಾತು ಎಷ್ಟು ಸರಳವಾಗಿದೆ. ಇದೇ ಜನರ ಭಾಷೆ. ಬಸವಾದಿ ಶರಣರು ನುಡಿದಂತೆ ನಡೆದರು. ನಡೆದಂತೆ ನುಡಿದರು. ಇದೇ ನಮ್ಮ ಸರ್ಕಾರಕ್ಕೆ ಮಾದರಿ. ನಾವು ಚುನಾವಣೆ ವೇಳೆಯಲ್ಲಿ ಕೊಟ್ಟ ಆಶ್ವಾಸನೆಗಳನ್ನು ಅಧಿಕಾರಕ್ಕೆ ಬಂದ ಎಂಟು ತಿಂಗಳಲ್ಲಿ ಈಡೇರಿಸಿ, ನಿಮ್ಮ ಮತಕ್ಕೆ ಗೌರವ ನೀಡಿ ಮತ್ತೆ ನಿಮ್ಮ ಮುಂದೆ ಬಂದು ತಲೆಎತ್ತಿ ನಿಂತಿದ್ದೇವೆ ಎಂದರು.