For the best experience, open
https://m.samyuktakarnataka.in
on your mobile browser.

ಚುನಾವಣಾ ಬಾಂಡ್: ಬಿಜೆಪಿ ಖಾತೆ ಜಪ್ತಿ ಮಾಡಿ

04:01 PM Mar 15, 2024 IST | Samyukta Karnataka
ಚುನಾವಣಾ ಬಾಂಡ್  ಬಿಜೆಪಿ ಖಾತೆ ಜಪ್ತಿ ಮಾಡಿ

ಬೆಂಗಳೂರು: ಚುನಾವಣಾ ಬಾಂಡ್ ಮೂಲಕ ದೇಣಿಗೆ ಪಡೆದುಕೊಂಡ ವಿಚಾರವಾಗಿ ಸುಪ್ರೀಂ ಕೋರ್ಟ್ ನೇತೃತ್ವದಲ್ಲಿ ಉನ್ನತ ಮಟ್ಟದ ತನಿಖೆ ನಡೆಯಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದರು. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,
ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಗಳಲ್ಲಿ ಇಟ್ಟಿದ್ದ್‌ 300 ಕೋಟಿ ಫ್ರೀಝ್ ಮಾಡಿದ್ದಾರೆ, ನಾವು ಹೇಗೆ ಚುನಾವಣೆ ನಡೆಸಲು ಸಾಧ್ಯ? 6000 ಕೋಟಿ ಚುನಾವಣಾ ಬಾಂಡ್ ಬಿಜೆಪಿಗೆ ಸಿಕ್ಕಿದೆ. ಆದರೆ ಬಿಜೆಪಿಯ ಬ್ಯಾಂಕ್ ಖಾತೆಗಳು ಮಾತ್ರ ಎಂದಿನಂತೆ ಕಾರ್ಯ ನಿರ್ವಹಿಸುತ್ತಿವೆ. ಲೆವೆಲ್ ಪ್ಲೇಯಿಂಗ್ ಗ್ರೌಂಡ್ ಎಲ್ಲಿದೆ? ಈ ಬಗ್ಗೆ ಉನ್ನತ ಮಟ್ಟದ ತನಿಖೆಗೆ ನಾನು ಒತ್ತಾಯಿಸುತ್ತೇನೆ. ಸತ್ಯ ಹೊರಬರದ ಹೊರತು ಅವರ ಖಾತೆಗಳನ್ನು ಸಹ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದರು.
ಸುಪ್ರೀಂ ಕೋರ್ಟ್ ಆದೇಶದಂತೆ ಭಾರತದ ಚುನಾವಣಾ ಆಯೋಗ ಎಸ್‌ಬಿಐ ಯಿಂದ ಪಡೆದ ಚುನಾವಣಾ ಬಾಂಡ್‌ ಗಳ ಮಾಹಿತಿಯು ಭಾರತೀಯ ಜನತಾ ಪಕ್ಷದ ಮುಖವಾಡವನ್ನು ಕಳಚಿದೆ. ಬಿಜೆಪಿಯು ಇ.ಡಿ. ಮತ್ತು ಐಟಿಗಳ ಮೂಲಕ ಬೆದರಿಕೆ ಒಡ್ಡಿ ದೇಣಿಗೆ ಸಂಗ್ರಹ ಮಾಡಿರುವುದು‌ ಸ್ಪಷ್ಟವಾಗಿದೆ. ಈ ಬಗ್ಗೆ ಸಮಗ್ರ ತನಿಖೆಗೆ ಆದೇಶ ನೀಡಬೇಕು. ಇವತ್ತು ಒಂದು ಮಹತ್ವದ ವಿಷಯ ದೇಶದ ಮುಂದೆ ಬಂದಿದೆ. ಎಷ್ಟೇ ತೊಂದರೆ ಆದರೂ ಸರಿ ಜನರಿಗೆ ಅದರ ಹಿಂದಿನ ಸತ್ಯ ತಿಳಿಸಬೇಕು ಎಂದು ಬಂದಿದ್ದೇವೆ. ಪ್ರಧಾನಮಂತ್ರಿ ನಾನು ತಿನ್ನಲ್ಲ, ತಿನ್ನಲು ಬಿಡುವುದಿಲ್ಲ ಎಂದು ಹೇಳುತ್ತಿದ್ದರು. ಆದರೆ, ಇವತ್ತು ಸುಪ್ರೀಂ ಕೋರ್ಟ್ ನಿಂದ ಎಲ್ಲವೂ ಬಹಿರಂಗವಾಗಿದೆ. ಬಿಜೆಪಿ ಹೇಗೆ ಹಣ ಮಾಡಿದೆ ಎಂಬುದು ಚುನಾವಣಾ ಬಾಂಡ್ ನಿಂದ ಬಯಲಾಗಿದೆ ಎಂದು ಖರ್ಗೆ ಹೇಳಿದರು.