ತತ್ವ, ಸಿದ್ಧಾಂತ ನೀತಿ ಮೇಲೆ ಕೆಲಸ ಮಾಡಿ
ಮಂಗಳೂರು: ರಾಜಕಾರಣದಲ್ಲಿ ಯಾರು ಯಾವುದೇ ನಿರ್ಧಾರ ಮಾಡಿಕೊಳ್ಳಲಿ. ಯಾರೇ ಒಂದಾಗಲಿ, ನಾವು ಚಿಂತೆ ಮಾಡುವುದು ಬೇಡ. ನಮ್ಮ ಸಿದ್ಧಾಂತ, ನಂಬಿಕೆ, ತತ್ವ, ನೀತಿ ಮೇಲೆ ಕೆಲಸ ಮಾಡೋಣ. ಮರಕ್ಕೆ ಬೇರು ಎಷ್ಟು ಮುಖ್ಯವೋ ಮನುಷ್ಯನಿಗೆ ನಂಬಿಕೆ ಅಷ್ಟೇ ಮುಖ್ಯ. ಎಲ್ಲಾ ವರ್ಗದವರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಕಾಂಗ್ರೆಸ್ ಸಿದ್ಧಾಂತ ನಾವು ಉಳಿಸಿಕೊಳ್ಳಬೇಕು ಎಂದು ಕೆಪಿಸಿಸಿ ಅಧ್ಯಕ್ಷ, ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಹೇಳಿದ್ದಾರೆ.
ಮಂಗಳೂರಿಗೆ ಹೊರವಲಯದ ಅಡ್ಯಾರ್ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜು ಮೈದಾನದಲ್ಲಿ ಶನಿವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ರಾಜ್ಯಮಟ್ಟದ ಬೃಹತ್ ಸಮಾವೇಶದಲ್ಲಿ ಪ್ರಸ್ತಾವಿಕವಾಗಿ ಮಾತನಾಡಿದ ಅವರು, ಈಗ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿರುವುದೇಕೆ? ಈ ಹಿಂದೆ ದೇವೇಗೌಡರು, ಮೋದಿ ಪ್ರಧಾನಮಂತ್ರಿಯಾದರೆ ದೇಶಬಿಟ್ಟು ಹೋಗುತ್ತೇವೆ ಎಂದಿದ್ದರು. ಅದಕ್ಕೆ ಮೋದಿ ಅವರು ನಮ್ಮ ಮನೆಗೆ ಬನ್ನಿ ಜಾಗ ಕೊಡುತ್ತೇನೆ ಎಂದಿದ್ದರು. ಆದರೆ ಇಂದು ದೇವೇಗೌಡರು, ನಾನೇ ನನ್ನ ಮಗನನ್ನು ಬಿಜೆಪಿ ಜತೆ ಹೋಗಲು ಹೇಳಿದ್ದೇನೆ ಎನ್ನುತ್ತಿದ್ದಾರೆ ಎಂದರು.
ಪ್ರಧಾನಮಂತ್ರಿಗಳು ೩೭೦ ಸೀಟು ಗೆಲ್ಲುತ್ತೇವೆ ಎಂದು ಹೇಳಬಹುದು. ಆದರೆ ಅದು ಸಾಧ್ಯವಿಲ್ಲ. ರಾಹುಲ್ ಗಾಂಧಿ ಅವರು ದೇಶ ಒಗ್ಗೂಡಿಸಲು ಭಾರತ ಜೋಡೋ ಯಾತ್ರೆ ಮಾಡುತ್ತಿದ್ದಾರೆ. ದೇಶ ಹೊಸ ನಾಯಕತ್ವ ಬದಲಾವಣೆ ಮಾಡುವ ಚಿಂತನೆಯಲ್ಲಿದೆ. ನಮ್ಮ ರಾಜ್ಯದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು ಮಹಾತ್ಮಾ ಗಾಂಧಿ, ಇಂದಿರಾ ಗಾಂಧಿ, ಸೋನಿಯಾ ಗಾಂಧಿ ಅವರು ಕೂತಿದ್ದ ಸ್ಥಾನದಲ್ಲಿ ಕೂತು ದೇಶದಲ್ಲಿ ಪಕ್ಷವನ್ನು ಮುನ್ನಡೆಸುತ್ತಿದ್ದಾರೆ. ಅವರ ನಾಯಕತ್ವದಲ್ಲಿ ರಾಜ್ಯದಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದಿದೆ ಎಂದರು.
ನಮ್ಮ ಗ್ಯಾರಂಟಿ ಯೋಜನೆಗಳಿಂದ ಕರಾವಳಿ, ಮಲೆನಾಡಿನ ಮಹಿಳೆಯರು ಕಾಂಗ್ರೆಸ್ ಪಕ್ಷದ ಕೈ ಹಿಡಿಯಲಿದ್ದಾರೆ. ನಮ್ಮ ಜನಪರ ಕಾರ್ಯಕ್ರಮಗಳಿಂದ ಲೋಕಸಭೆ ಚುನಾವಣೆಯಲ್ಲಿ ನಮ್ಮ ಪಕ್ಷ ರಾಜ್ಯದಲ್ಲಿ ಕನಿಷ್ಠ ೨೦ ಕ್ಷೇತ್ರಗಳಲ್ಲಿ ಗೆಲವು ಸಾಧಿಸುವ ವಿಶ್ವಾಸವಿದೆ ಎಂದರು.