For the best experience, open
https://m.samyuktakarnataka.in
on your mobile browser.

ತಾಳಿ ಕಟ್ಟಲು ನಿರಾಕರಿಸಿದ ವಧು - ಮುರಿದು ಬಿದ್ದ ಮದುವೆ

06:14 PM Apr 27, 2024 IST | Samyukta Karnataka
ತಾಳಿ ಕಟ್ಟಲು ನಿರಾಕರಿಸಿದ ವಧು   ಮುರಿದು ಬಿದ್ದ ಮದುವೆ

ಮಂಗಳೂರು: ವರ ಇನ್ನೇನು ವಧುವಿನ ಕತ್ತಿಗೆ ತಾಳಿ ಕಟ್ಟಬೇಕೆನ್ನುವಾಗಲೇ ವಿವಾಹವೊಂದು ಮುರಿದು ಬಿದ್ದಿದೆ.
ಕೊನೆ ಕ್ಷಣದಲ್ಲಿ ವಧು ತಾಳಿ ಕಟ್ಟಿಸಿಕೊಳ್ಳಲು ನಿರಾಕರಿಸಿ ಮದುವೆ ಮುರಿದು ಬಿದ್ದ ಘಟನೆ ದಕ್ಷಿಣ ಕನ್ನಡದ ಕಡಬ ತಾಲೂಕಿನ ಕೊಣಾಲು ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಕೊಣಾಲು ಗ್ರಾಮದ ಉಮೇಶ ಅವರ ವಿವಾಹ ಬಂಟ್ವಾಳ ತಾಲೂಕು ಕುಳದ ಸರಸ್ವತಿ ಅವರೊಂದಿಗೆ ನಿಗದಿಯಾಗಿತ್ತು. ಬೆಳಗ್ಗೆ ೧೧.೩೫ರ ಮುಹೂರ್ತದಲ್ಲಿ ಕಾಂಚನ ಪೆರ್ಲದ ಶ್ರೀ ಷಣ್ಮುಖ ದೇವಸ್ಥಾನದಲ್ಲಿ ವಿವಾಹ ನಿಗದಿಯಾಗಿದ್ದು. ವರ ಹಾಗೂ ವಧುವಿನ ಕಡೆಯವರು ದೇವಸ್ಥಾನಕ್ಕೆ ಮದುವೆ ದಿಬ್ಬಣದಲ್ಲಿ ಬಂದಿದ್ದರು. ಮದುವೆ ವಿಧಿಗಳು ನಡೆದು ವಧು - ವರ ಉಮೇಶ ಹೂಮಾಲೆ ಹಾಕಿಸಿಕೊಂಡಿದ್ದರು. ಇವರ ಉಮೇಶ ತಾಳಿ ಕಟ್ಟಲು ಮುಂದಾಗುತ್ತಿದ್ದಂತೆ ವಧು ಸರಸ್ವತಿ ಈ ಮದುವೆ ನನಗೆ ಇಷ್ಟ ಇಲ್ಲ ಎಂದು ಹೇಳಿ ತಾಳಿ ಕಟ್ಟಲು ಅವಕಾಶ ನೀಡಲಿಲ್ಲ. ಇದರಿಂದ ಎರಡೂ ಕಡೆಯವರೂ ವಿಚಲಿತಗೊಂಡು ಈ ವೇಳೆ ಹಿರಿಯರು ವಧುವಿನ ಮನವೊಲಿಕೆಗೆ ಮುಂದಾದರೂ ವಧು ತಾಳಿ ಕಟ್ಟಿಸಿಕೊಳ್ಳಲು ನಿರಾಕರಿಸಿರುವುದರಿಂದ ಬಳಿಕ ಎರಡೂ ಕಡೆಯವರೂ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ತೆರಳಿದರು. ಪೊಲೀಸ್ ಠಾಣೆಯಲ್ಲಿ ನಡೆದ ಮಾತುಕತೆ ವೇಳೆ ವಧು ಸರಸ್ವತಿ ಆಗಿರುವ ಅಚಾತುರ್ಯಕ್ಕೆ ಪಶ್ಚಾತ್ತಾಪ ಪಟ್ಟು ಉಮೇಶ ಅವರನ್ನು ಮದುವೆಯಾಗಲು ಒಪ್ಪಿಗೆ ಸೂಚಿಸಿದರು. ಆದರೆ ಆಗ ವರ ಉಮೇಶ್ ಅವರು ಮದುವೆಯಾಗಲು ನಿರಾಕರಿಸಿದರು. ಇದರಿಂದಾಗಿ ಎರಡೂ ಕಡೆಯವರು ಠಾಣೆಯಲ್ಲಿ ಮುಚ್ಚಳಿಕೆ ಬರೆಯಿಸಿಕೊಂಡು ತಮ್ಮ ತಮ್ಮ ಮನೆಗಳಿಗೆ ತೆರಳಿದರು. ಮದುವೆ ಮುರಿದು ಬಿತ್ತು.