ತುಳುನಾಡಿನ ವಿಶಿಷ್ಟ "ಕಂಡೇವು" ಮೀನು ಹಿಡಿಯೋ ಜಾತ್ರೆ
ಮಂಗಳೂರು: ಸುರತ್ಕಲ್ ಚೇಳ್ಯಾರು ಖಂಡಿಗೆ ಧರ್ಮರಸು ಶ್ರೀ ಉಳ್ಳಾಯ ದೈವಸ್ಥಾನದಲ್ಲಿ ಮೇ ೧೩ರಿಂದ ೧೫ರವರೆಗೆ ಕಂಡೇವು ಆಯನ ಹಿನ್ನೆಲೆಯಲ್ಲಿ ಇಂದು ಮೀನು ಹಿಡಿಯುವ ವಿಶಿಷ್ಟ ಆಚರಣೆ ನಡೆಯಿತು.
ಕಂಡೇವು ಜಾತ್ರೆ ಎಂದೇ ಕರೆಯಲ್ಪಡುವ ಈ ಆಚರಣೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸಿ ನಂದಿನಿ ನದಿಯ ಮೀನು ಹಿಡಿದು ಸಂಭ್ರಮಿಸಿದರು. ಹಿಡಿದ ಮೀನುಗಳನ್ನು ಕೆಲವರು ಅಲ್ಲೆ ಮಾರಾಟ ಮಾಡಿದರೆ ಮತ್ತು ಕೆಲವರು ಮನೆಗೆ ಕೊಂಡೊಯ್ಯುತ್ತಾರೆ. ಈ ವಿಶಿಷ್ಟ ಆಚರಣೆ ತಲೆ ತಲಾಂತರಗಳಿಂದ ನಡೆದುಕೊಂಡು ಬಂದಿದೆ. ಮೀನು ಹಿಡಿಯಲು ಊರ ಪರವೂರ ಜನರು ಆಗಮಿಸುವುದು ಇಲ್ಲಿಯ ವಾಡಿಕೆ.
ಹಿನ್ನೆಲೆ…
ಇತಿಹಾಸ ಪ್ರಸಿದ್ಧ ಎರ್ಮಾಳು ಜಪ್ಪು ಖಂಡೇವು ಅಡೆಪು ಎಂಬ ನಾಣ್ಣುಡಿಯಂತೆ ಖಂಡಿಗೆ ಜಾತ್ರೆ ಪ್ರಾರಂಭವಾಗಿದೆ. ಒಂದು ತಿಂಗಳ ಹಿಂದೆ ಉಳ್ಳಾಯ ದೈವಸ್ಥಾನದ ಪ್ರಸಾದವನ್ನು ನದಿಗೆ ಹಾಕಿ ಪ್ರಸಾದ ಹಾಕಿದ ದಿನದಿಂದ ನದಿಯಲ್ಲಿ ಮೀನು ಹಿಡಿಯುವಂತಿಲ್ಲ. ನಂತರ ಸುಡುಮದ್ದು (ಪಟಾಕಿ)ಬಿಟ್ಟಾಗ ಭಕ್ತರೆಲ್ಲರೂ ಒಟ್ಟಿಗೆ ನದಿಗಿಳಿಯುತ್ತಾರೆ. ಇದು ಜಾತ್ರೆಯ ಪ್ರಥಮ ದಿನ. ನಂದಿನಿ ನದಿಯಲ್ಲಿ ಮೀನು ಹಿಡಿಯುವುದು ಎಂಬುದು ಹಿಂದಿನಿಂದಲೂ ನಡೆದು ಬಂದು ಅಚರಣೆಯಾಗಿದ್ದು ಸಾವಿರಕ್ಕೂ ಮಿಕ್ಕಿ ಜನರು ಬಂದು ಮೀನು ಹಿಡಿಯುತ್ತಿದ್ದರು. ಪ್ರತಿಯೊಂದು ಮನೆಯವರು ಮೀನು ಹಿಡಿದು ಮನೆಯಲ್ಲಿ ಪದಾರ್ಥ ಮಾಡಿ ಬಡಿಸುವ ಕ್ರಮ ಇದೆ. ಇಲ್ಲಿ ಮೀನು ಹಿಡಿಯಲು ಬರುವವರು ಎಲ್ಲರೂ ಮೀನುಗಾರರು ಅಲ್ಲ. ಈ ದೈವಸ್ಥಾನದ ಭಕ್ತರು. ತಾವು ಹಿಡಿದ ಮೀನನ್ನು ದೇವರ ಪ್ರಸಾದವನ್ನಾಗಿ ಸ್ವೀಕರಿಸುತ್ತಾರೆ.
ಮಕ್ಕಳು, ಮದುಕರೆನ್ನದೆ ಎಲ್ಲರೂ ನೀರಿಗಿಳಿದು ಮೀನಿನ ಬೇಟೆ ಆರಂಭಿಸುತ್ತಾರೆ. ತಾವೇ ತಂದಿರುವ ವಿವಿಧ ರೀತಿಯ ಬಲೆಗಳನ್ನು ಹಾಕಿ ಮೀನುಗಳನ್ನು ಹಿಡಿಯುತ್ತಾರೆ. ದೈವದ ಅನುಗ್ರಹದಿಂದ ಅಂದು ಹೆಚ್ಚಿನ ಮೀನುಗಳು ಇರುತ್ತದೆ ಎಂಬುದು ಭಕ್ತರ ನಂಬಿಕೆ. ಹೀಗಾಗಿ ನದಿಗಿಳಿದ ಪ್ರತಿಯೊಬ್ಬರಿಗೂ ಪದಾರ್ಥಕ್ಕೆ ಬೇಕಾಗುವಷ್ಟು ಮೀನು ಸಿಗುತ್ತದೆ. ಹಿಂದಿನ ದಿನಗಳಲ್ಲಿ ಭಕ್ತರು ತಾವು ಹಿಡಿದ ಮೀನನ್ನು ಇತರರಿಗೆ ಹಂಚಿ ತಿನ್ನುತ್ತಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಮೀನು ಹಿಡಿದವರು ಮಾರಾಟ ಮಾಡುವ ಮೂಲಕ ಇತರ ಭಕ್ತರಿಗೆ ಪ್ರಸಾದ ರೂಪವಾಗಿ ನೀಡುತ್ತಾರೆ. ಎಷ್ಟೇ ಹಣವಾದರೂ ಇಲ್ಲಿಗೆ ಬರುವ ಭಕ್ತರು ಭಕ್ತಿಯಿಂದ ಈ ಮೀನುಗಳನ್ನು ಖರೀದಿಸುತ್ತಾರೆ. ಮನೆಗೆ ಕೊಂಡೊಯ್ದು ದೇವರ ಪ್ರಸಾದವಾದ ಮೀನಿನ ಭೋಜನ ಮಾಡುತ್ತಾರೆ. ಈ ಜಾತ್ರೆಯ ಮೀನನ್ನು ತಿಂದರೆ ದೇವರು ಪ್ರಸನ್ನಗೊಳ್ಳುತ್ತಾರೆ. ಜೊತೆಗೆ ವರ್ಷವಿಡೀ ಯಾವುದೇ ರೋಗರುಜಿನಗಳು ಬರುವುದಿಲ್ಲ ಎಂಬ ನಂಬಿಕೆ.
ಇತ್ತೀಚಿಗಿನ ಮೂರು ನಾಲ್ಕು ವರ್ಷಗಳಿಂದ ಈ ಆಚರಣೆಗೆ ಧಕ್ಕೆಯಾಗುತ್ತಿದೆ ಕಾರಣಿಕ ಕ್ಷೇತ್ರ ಉಳ್ಳಾಯ ದೈವಸ್ಥಾನದ ನಂದಿನಿ ನದಿ ತ್ಯಾಜ್ಯ, ಕಸ ಮತ್ತು ಹೂಳು ತುಂಬಿ ಮೀನು ಹಿಡಿಯುವುದು ಕಷ್ಟ ಸಾಧ್ಯವಾಗಿದೆ. ಈಗ ಮೀನು ಹಿಡಿಯುವವರ ಸಂಖ್ಯೆ ತೀರಾ ಕಡಿಮೆಯಾಗಿದೆ ನದಿಯ ನೀರು ಖಾಸಗಿ ಆಸ್ಪತ್ರೆಯ ತ್ಯಾಜ್ಯ ನೀರಿನಿಂದ ನದಿಯು ಪೂರ್ತಿ ಕಲುಷಿತಗೊಂಡಿದೆ.
- ಸುಧಾಕರ ಶೆಟ್ಟಿ ಖಂಡಿಗೆ,
ಉಳ್ಳಾಯ ದೈವಸ್ಥಾನದ ಆಡಳಿತ ಸಮಿತಿ ಕೋಶಾಧಿಕಾರಿ