For the best experience, open
https://m.samyuktakarnataka.in
on your mobile browser.

ದೇವೇಗೌಡರು CBI ಅನ್ನು ಚೋರ್‌ ಬಚಾವೋ ಸಂಸ್ಥೆ ಎಂದು ಕರೆದಿದ್ದರು

01:22 PM May 10, 2024 IST | Samyukta Karnataka
ದೇವೇಗೌಡರು cbi ಅನ್ನು ಚೋರ್‌ ಬಚಾವೋ ಸಂಸ್ಥೆ ಎಂದು ಕರೆದಿದ್ದರು

ಮೈಸೂರು: ಪ್ರಜ್ವಲ್‌ ರೇವಣ್ಣ ಪ್ರಕರಣವನ್ನು ಸಿಬಿಐಗೆ ವಹಿಸುವ ಅಗತ್ಯವಿಲ್ಲ. ನನಗೆ ನಮ್ಮ ಪೊಲೀಸರ ಬಗ್ಗೆ ವಿಶ್ವಾಸವಿದೆ. ಅವರು ಕಾನೂನು ರೀತ್ಯ ತನಿಖೆ ನಡೆಸಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಅವರು ಇಂದು ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಪ್ರಜ್ವಲ್‌ ರೇವಣ್ಣ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ರಾಜ್ಯಪಾಲರಿಗೆ ಮನವಿ ಮಾಡಿರುವ ಕುರಿತಾಗಿ ಮಾಧ್ಯಮದವರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ನನಗೆ ನಮ್ಮ ಪೊಲೀಸರ ಬಗ್ಗೆ ವಿಶ್ವಾಸ ನಂಬಿಕೆ ಇದೆ. ಅವರು ಕಾನೂನು ರೀತ್ಯಾ ತನಿಖೆ ನಡೆಸಲಿದ್ದಾರೆ ಎಂದು ತಿಳಿಸಿದರು.
ಬಿಜೆಪಿಯವರು ಯಾವತ್ತೂ ಸಿಬಿಐಗೆ ಒಂದು ಪ್ರಕರಣವಾದರೂ ಕೊಟ್ಟಿದ್ದಾರಾ? ಹಿಂದೆ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಡಿ.ಕೆ. ರವಿ ಪ್ರಕರಣ, ಲಾಟರಿ ಪ್ರಕರಣ, ಸಚಿವರಾದ ಕೆ.ಜೆ. ಜಾರ್ಜ್‌ ಅವರ ಮೇಲಿನ ಆರೋಪ, ಪರೇಶ್‌ ಮೇಸ್ತಾ ಪ್ರಕರಣಗಳನ್ನು ಸಿಬಿಐಗೆ ವಹಿಸಲಾಯಿತು. ಈ ಪ್ರಕರಣಗಳಲ್ಲಿ ಯಾರಿಗಾದರೂ ಶಿಕ್ಷೆಯಾಗಿದೆಯೇ ಎಂದು ಪ್ರಶ್ನಿಸಿದರು.
ಹಿಂದೆ ಬಿಜೆಪಿಯವರೇ ಸಿಬಿಐಯನ್ನು ಕರಪ್ಷನ್‌ ಬ್ಯೂರೋ ಆಫ್‌ ಇನ್ವೆಸ್ಟಿಗೇಷನ್ ಎಂದು ಬಣ್ಣಿಸಿದ್ದಾರೆ. ದೇವೇಗೌಡರು ಚೋರ್‌ ಬಚಾವೋ ಸಂಸ್ಥೇ ಎಂದು ಹೇಳಿದ್ದರು. ಈಗ ಸಿಬಿಐ ಮೇಲೆ ವಿಶ್ವಾಸ ಬಂತಾ? ನನಗೆ ಸಿಬಿಐ ಮೇಲೆ ವಿಶ್ವಾಸವಿದೆ. ಆದರೆ, ನಮ್ಮ ಪೊಲೀಸರ ಬಗ್ಗೆ ನಂಬಿಕೆ ಇದೆ. ಅದಕ್ಕಾಗಿ ವಿಶೇಷ ತನಿಖಾ ತಂಡ ರಚನೆ ಮಾಡಿದ್ದೇವೆ ಎಂದು ವಿವರಿಸಿದರು.
ನಮ್ಮ ಸರ್ಕಾರ ಕಾನೂನು ರೀತ್ಯ ನಡೆಯುತ್ತಿರುವ ಕೆಲಸದಲ್ಲಿ, ತನಿಖೆಯಲ್ಲಾಗಲಿ ಮಧ್ಯಪ್ರವೇಶ ಮಾಡುವುದಿಲ್ಲ. ಅವರು ಸರಿಯಾದ ರೀತಿಯಲ್ಲಿ ಕೆಲಸ ಮಾಡುವ ನಂಬಿಕೆ ಇದೆ. ನಾನು ಯಾವತ್ತೂ ಕಾನೂನಿಗೆ ವಿರುದ್ಧವಾಗಿ ಕೆಲಸ ಮಾಡಿ ಎಂದು ಹೇಳಿಲ್ಲ. ಅಂತರರಾಷ್ಟ್ರೀಯ ಮಟ್ಟದ ತನಿಖೆಯ ಅಗತ್ಯವಿಲ್ಲ. ನಮ್ಮ ಪೊಲೀಸರ ಮೇಲೆ ನಂಬಿಕೆ ಇಟ್ಟಿರಬೇಕಲ್ಲ. ಎಲ್ಲ ಅಪರಾಧ ಪ್ರಕರಣಗಳ ತನಿಖೆ ಯಾರು ಮಾಡುತ್ತಾರೆ? ನಮ್ಮ ಪೊಲೀಸರಲ್ಲವೇ? ಅವರದ್ದೇ ವಿಶೇಷ ತನಿಖಾದಳ ರಚಿಸಿರುವುದಲ್ಲವೇ? ನಮ್ಮ ಪೊಲೀಸರನ್ನು ನಂಬಬೇಕಲ್ಲವೆ ಎಂದು ಪ್ರಶ್ನಿಸಿದರು.
ಈ ಪ್ರಕರಣದಲ್ಲಿ ನಾನಾಗಲೀ, ಡಿ.ಕೆ.ಶಿವಕುಮಾರ್‌ ಆಗಲೀ, ಯಾರೂ ಭಾಗಿಯಾಗಿಲ್ಲ ಎಂದು ಸ್ಪಷ್ಟಪಡಿಸಿದ ಮುಖ್ಯಮಂತ್ರಿಗಳು, ನನಗೆ ಎಸ್ಐಟಿ ಮೇಲೆ ವಿಶ್ವಾಸವಿದೆ. ಸತ್ಯಾಸತ್ಯತೆ ಹೊರಬರುವ ನಂಬಿಕೆ ಇದೆ ಎಂದು ತಿಳಿಸಿದರು.
ರೇವಣ್ಣ ಬಂಧನದಲ್ಲಿ ರಾಜಕೀಯ ಹಸ್ತಕ್ಷೇಪ ಇಲ್ಲ
ರೇವಣ್ಣ ಅವರ ಬಂಧನದಲ್ಲಿ ರಾಜಕೀಯ ಹಸ್ತಕ್ಷೇಪವಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಅವರ ಮೇಲಿನ ಆರೋಪದಲ್ಲಿ ಹುರುಳೇ ಇಲ್ಲದಿದ್ದರೆ ನಿರೀಕ್ಷಣಾ ಜಾಮೀನು ಕೋರಿದ್ದೇಕೆ? ನಿರೀಕ್ಷಣಾ ಜಾಮೀನು ಅರ್ಜಿ ಯಾಕೆ ತಿರಸ್ಕೃತವಾಯಿತು ಎಂದು ಪ್ರಶ್ನಿಸಿದರು.