For the best experience, open
https://m.samyuktakarnataka.in
on your mobile browser.

ಧಾರವಾಡಕ್ಕೆ ಪಾಲಿಕೆ ಘೋಷಣೆಯ `ಪೇಡಾ'

04:29 AM Dec 13, 2023 IST | Samyukta Karnataka
ಧಾರವಾಡಕ್ಕೆ ಪಾಲಿಕೆ ಘೋಷಣೆಯ  ಪೇಡಾ
  • ಬಿ.ಅರವಿಂದ
    ಹುಬ್ಬಳ್ಳಿ: ಹುಬ್ಬಳ್ಳಿಯ ನೆರಳಿನಿಂದ ಆಡಳಿತಾತ್ಮಕವಾಗಿ ಹೊರಬರಬೇಕು ಎಂಬ ಧಾರವಾಡದ ಆಸೆ ಈಡೇರಿದೆ. ಎಲ್ಲವೂ ಅಂದುಕೊಂಡಂತೆಯೇ ನಡೆದರೆ, ಅಧಿವೇಶನ ಕೊನೆಗೊಳ್ಳುವುದಕ್ಕೆ ಮೊದಲೇ ಮಹಾನಗರ ಪಾಲಿಕೆಯಾಗಿ ಧಾರವಾಡ ಘೋಷಿತವಾಗಲಿದೆ. ಶಾಸಕ ಅರವಿಂದ ಬೆಲ್ಲದ ಹಾಗೂ ಪ್ರತ್ಯೇಕ ಪಾಲಿಕೆ ಹೋರಾಟ ಸಮಿತಿ ನಡೆಸುತ್ತಿದ್ದ ಹೋರಾಟಕ್ಕೆ ಲಭಿಸಿರುವ ಈ ಜಯ ಧಾರವಾಡದ ಮಟ್ಟಿಗೆ ನಿಜವಾದ ಪೇಡೆಯಾಗಿದೆ.
    ಹುಬ್ಬಳ್ಳಿ-ಧಾರವಾಡ ಇಡೀ ರಾಜ್ಯದ ಏಕೈಕ ಸಂಯುಕ್ತ ಮಹಾನಗರ ಆಡಳಿತ ವ್ಯವಸ್ಥೆಯಾಗಿತ್ತು. ಹುಬ್ಬಳ್ಳಿ-ಧಾರವಾಡ ಎರಡು ಪ್ರತ್ಯೇಕ ಊರುಗಳಾಗಿ ಗುರುತಿಸಿಕೊಳ್ಳುವುದಿಲ್ಲ. ರಾಜ್ಯದಲ್ಲಿ ಅವಳಿನಗರ ಎಂಬ ಹಣೆಪಟ್ಟಿ ಹೊಂದಿರುವ ಸ್ಥಳಗಳಿವು. ಹೀಗಾಗಿ ಎರಡಕ್ಕೂ ಸೇರಿ ಒಂದೇ ಮಹಾನಗರ ಪಾಲಿಕೆ ಇದ್ದುದನ್ನು ಇದುವರೆಗೆ ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ಕಳೆದ ಕೆಲವು ವರ್ಷಗಳಿಂದ ಈಚೆಗೆ ಯೋಜನೆಗಳ ಹರಿಯುವಿಕೆ ಹುಬ್ಬಳ್ಳಿಯತ್ತಲೇ ಹೆಚ್ಚು ಕೇಂದ್ರಿತವಾಗತೊಡಗಿತ್ತು. ಸ್ಮಾರ್ಟ್ ಸಿಟಿ, ಟೆಂಡರ್ ಶ್ಯೂರ್ ಮೊದಲಾದ ಮಹತ್ವದ ಯೋಜನೆಗಳೆಲ್ಲ ಹುಬ್ಬಳ್ಳಿಗೆ ಬಂದವೇ ವಿನಾ, ಧಾರವಾಡ ಇವುಗಳ ಫಲ ಪಡೆಯಲಿಲ್ಲ. ಹೊರಜಗತ್ತಿಗೆ ಮಾತ್ರ ಹುಬ್ಬಳ್ಳಿಗೆ ಘೋಷಣೆಯಾದ ಯೋಜನೆಗಳೊಂದಿಗೆ ಧಾರವಾಡದ ಹೆಸರೂ ತಳಕು ಹಾಕಿಕೊಳ್ಳುವುದು ಮುಂದುವರಿದಿತ್ತು.
    ಹೋರಾಟ ಸಮಿತಿ ರಚನೆ
    ಸರ್ಕಾರಿ ಅನುದಾನ ಹಾಗೂ ಯೋಜನೆಗಳ ಘೋಷಣೆ ಸ್ಥಳೀಯಾಡಳಿತವನ್ನು ಗಮನದಲ್ಲಿ ಇಟ್ಟುಕೊಂಡು ನಡೆಯುವ ಪ್ರಕ್ರಿಯೆ. ಹೀಗಾಗಿ ಧಾರವಾಡ ಹಲವಾರು ಅಭಿವೃದ್ಧಿ ಯೋಜನೆಗಳಿಂದ ವಂಚಿತವಾಗುತ್ತಲೇ ಬಂದಿತ್ತು. ಪರಿಣಾಮವಾಗಿ ಕೆಲವು ವರ್ಷಗಳಿಂದ ಪ್ರತ್ಯೇಕ ಪಾಲಿಕೆ ಹೋರಾಟ ಸಮಿತಿ ರಚನೆಯಾಗಿತ್ತು. ಶಾಸಕ ಅರವಿಂದ ಬೆಲ್ಲದ ಕೂಡ ಇದಕ್ಕೆ ಬೆಂಬಲಿಸಿದ್ದರು. ಪೂರಕವಾಗಿ ಸರ್ಕಾರದ ಮಟ್ಟದಲ್ಲಿ ಹೋರಾಟ ಶುರು ಮಾಡಿದ್ದರು. ಅವಳಿನಗರದ ಜನತೆ ಮಾನಸಿಕವಾಗಿ ಪರಸ್ಪರ ತುಂಬ ಸಮೀಪ ಇರುವುದು ನಿಜ. ಆದಾಗ್ಯೂ ಎರಡೂ ನಗರಗಳ ಬದುಕಿನ ಸಂರಚನೆಯಲ್ಲಿ ವ್ಯತ್ಯಾಸವಿದೆ. ಲಕ್ಷ್ಮೀ ನಗರ ಹುಬ್ಬಳ್ಳಿಯಾದರೆ, ಧಾರವಾಡ ಸರಸ್ವತಿ ನಗರ. ಹೀಗಾಗಿ ಎರಡಕ್ಕೂ ಪ್ರತ್ಯೇಕ ಆಡಳಿತ ಇದ್ದರೆ ಅಭಿವೃದ್ಧಿ ಕಾರ್ಯಗಳು ಎರಡೂ ನಗರಗಳ ಅಗತ್ಯಗಳಿಗೆ ತಕ್ಕಂತೆ ಆಗುತ್ತದೆ ಎಂಬುದು ಶಾಸಕ ಅರವಿಂದ ಬೆಲ್ಲದರ ನಿಲುವಾಗಿತ್ತು. ಮಾಜಿ ಸಿಎಂ ಹಾಗೂ ಹುಬ್ಬಳ್ಳಿಯ ಪ್ರಭಾವಿ ನಾಯಕರಾದ ಜಗದೀಶ ಶೆಟ್ಟರ ಅಭಿಪ್ರಾಯ ಮಾತ್ರ ಬೆಲ್ಲದ ನಿಲುವಿಗೆ ವ್ಯತಿರಿಕ್ತವಾಗಿತ್ತು.
    ಶೆಟ್ಟರ ಅಭಿಪ್ರಾಯ
    `ಆದಷ್ಟು ಪಾಲಿಕೆಗಳನ್ನು ಸಂಯೋಜಿಸಿ ಕಡಿಮೆ ಮಾಡಬೇಕು ಎಂಬುದು ಕೇಂದ್ರದ ಉದ್ದೇಶವಾಗಿದೆ. ಅಂತಹುದರಲ್ಲಿ ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ಬೇಕು ಎಂದರೆ ಹೇಗೆ? ಆದಾಯ ಮೂಲ ಹುಬ್ಬಳ್ಳಿಯೇ ಆಗಿರುವಾಗ ಪ್ರತ್ಯೇಕ ಪಾಲಿಕೆಯಾಗಿ ಧಾರವಾಡ ಹೇಗೆ ನಿರ್ವಹಿಸೀತು' ಎಂಬುದಾಗಿ ಶೆಟ್ಟರ ಒಮ್ಮೆ ಪತ್ರಿಕೆಯೊಂದಿಗೆ ಮಾತನಾಡುತ್ತ ಅಭಿಪ್ರಾಯಪಟ್ಟಿದ್ದರು.
    ಆಗ ಮಾಜಿ ಸಿಎಂ ಇನ್ನೂ ಬಿಜೆಪಿಯಲ್ಲಿದ್ದರು. ಈಗ ಅವರ ಪಕ್ಷಾಂತರ ಆಗಿದೆ. ಬೆಲ್ಲದ ನಿಲುವು ಗೆದ್ದಿದೆ. ರಾಜಕೀಯವಾಗಿ ಶೆಟ್ಟರ ಇದಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾರೆ? ಬೆಲ್ಲದ ಚಿಂತನೆ ಸರಿಯಲ್ಲ ಎಂಬ ತಮ್ಮ ಈ ಮುಂಚಿನ ಚಿಂತನೆಯನ್ನೇ ಈಗಲೂ ವ್ಯಕ್ತಪಡಿಸಿದರೆ, ಅವರದ್ದೇ ಕಾಂಗ್ರೆಸ್ ಸರ್ಕಾರದ ತೀರ್ಮಾನವನ್ನು ಪ್ರಶ್ನಿಸಿದಂತೆ ಎಂಬ ಚರ್ಚೆ ಮುನ್ನೆಲೆಗೆ ಬಂದಿದೆ.
    ಇನ್ನು ಅಭಿವೃದ್ಧಿಯ ದೃಷ್ಟಿಯಿಂದ ಹೇಳುವುದಾದರೆ ಖಂಡಿತ ಇದು ಸೂಕ್ತ ಕ್ರಮವಾಗಿದೆ. ಸರ್ಕಾರವೂ ಇದನ್ನೇ ಹೇಳುತ್ತಿದೆ. ಯೋಜನೆಗಳು ಧಾರವಾಡ ಕೇಂದ್ರಿತವಾಗಿ ಹರಿದು ಬರಲಿರುವುದರಿಂದ ಮತ್ತು ಧಾರವಾಡ ನಗರಕ್ಕೆ ಸೀಮಿತವಾಗಿ ಅಭಿವೃದ್ಧಿ ಯೋಜನೆಗಳು ರೂಪುಗೊಳ್ಳುವುದರಿಂದ ನಗರದ ಸ್ವರೂಪ ಖಂಡಿತ ಬದಲಾಗಲಿದೆ. ಇದು ಅವಳಿನಗರಗಳೆರಡರ ರಿಯಲ್ ಎಸ್ಟೇಟ್ ಮತ್ತಿತರ ಆರ್ಥಿಕ ಚಟುವಟಿಕೆಗಳಿಗೂ ಪೂರಕವಾಗಲಿದೆ.
    ಒಟ್ಟಿನಲ್ಲಿ ಧಾರವಾಡ ಜನ ಆಡಳಿತಾತ್ಮಕ ಪೇಡೆಯ ಸವಿಯನ್ನು ಉಂಡಿದ್ದಾರೆ. ಸರ್ಕಾರ ಮಾಡಿರುವ ನಿರ್ಣಯ ಆದಷ್ಟು ಶೀಘ್ರ ಜಾರಿಗೆ ಬಂದು, ವಾರ್ಡ್‌ಗಳ ವಿಂಗಡನೆಯ ಪ್ರಕ್ರಿಯೆಗೆ ಶ್ರೀಕಾರ ಹಾಡಬೇಕಾಗಿದೆ.

ಏಕೆ ಪಾಲಿಕೆ ಅಗತ್ಯ?
ಹುಬ್ಬಳ್ಳಿ-ಧಾರವಾಡ ಪಾಲಿಕೆಯನ್ನು ವಿಭಜಿಸಿ ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ಮಾಡುವುದು ಪ್ರಸಕ್ತ ಸಂದರ್ಭದಲ್ಲಿ ಅನಿವಾರ್ಯ ಎಂದು ಶಾಸಕ ಅರವಿಂದ ಬೆಲ್ಲದ ಮಂಗಳವಾರ ವಿಧಾನಸಭೆಯಲ್ಲಿ ಸರ್ಕಾರಕ್ಕೆ ಮನದಟ್ಟು ಮಾಡಿಕೊಟ್ಟರು.
ನಿಯಮಾನುಸಾರ ಧಾರವಾಡದ ಜನಸಂಖ್ಯೆ ೩ ಲಕ್ಷ ದಾಟಿದೆ. ರಾಜಸ್ವ ವಾರ್ಷಿಕ ೬ ಕೋಟಿಯನ್ನು ಎಂದೋ ಮೀರಿದೆ. ಶೈಕ್ಷಣಿಕ ನಗರದ ಅಭಿವೃದ್ಧಿಯ ದೃಷ್ಟಿಯಿಂದ ಪ್ರತ್ಯೇಕ ಪಾಲಿಕೆ ಮಾಡಿ' ಎಂದು ಬೆಲ್ಲದ ಸರ್ಕಾರಕ್ಕೆ ಆಗ್ರಹಿಸಿದರು. ಒಪ್ಪಿದ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್,ಪಾಲಿಕೆಗೆ ಬೇಕಾಗುವ ಎಲ್ಲ ಮಾನದಂಡಗಳು ಧಾರವಾಡಕ್ಕೆ ಇವೆ. ಆದ್ದರಿಂದ ಇದನ್ನು ಪಾಲಿಕೆಯನ್ನಾಗಿಸುತ್ತೇವೆ' ಎಂದು ಹೇಳಿ ಧಾರವಾಡಿಗರಿಗೆ ಸಿಹಿಸುದ್ದಿ ನೀಡಿದರು.