For the best experience, open
https://m.samyuktakarnataka.in
on your mobile browser.

ನನ್ನನ್ನು ವಿಮಾನದಲ್ಲಿ ಕರ್ಕೊಂಡ್ಹೋದ ಪುಣ್ಯಾತ್ಮ

04:00 AM Apr 24, 2024 IST | Samyukta Karnataka
ನನ್ನನ್ನು ವಿಮಾನದಲ್ಲಿ ಕರ್ಕೊಂಡ್ಹೋದ ಪುಣ್ಯಾತ್ಮ

ಡಾ.ರಾಜಕುಮಾರ್ ಜತೆಗಿನ ಒಡನಾಟದ ಬಗ್ಗೆ ಹೊನ್ನವಳ್ಳಿ ಕೃಷ್ಣ ಮೆಲುಕು

ನಾನು ರಾಜಣ್ಣನ ದೊಡ್ಡ ಅಭಿಮಾನಿ. ಅವರ ಸಿನಿಮಾಗಳನ್ನು ನೋಡಿಕೊಂಡೇ ಬೆಳೆದೆ. ಕನ್ನಡಿಯ ಮುಂದೆ ಅವರ ಪಾತ್ರಗಳನ್ನು ಅನುಕರಿಸುತ್ತಿದ್ದೆ... ಜೀವನದಲ್ಲಿ ಒಮ್ಮೆಯಾದರೂ ರಾಜಣ್ಣನನ್ನು ಕಣ್ತುಂಬಿಕೊಳ್ಳಬೇಕೆಂಬ ಆಸೆ ನೂರಾರು ದಿನದಿಂದ ಇತ್ತು. ಪ್ರತಿದಿನವೂ ಅವರದ್ದೇ ಕನವರಿಕೆ. ಒಮ್ಮೆ ಗಟ್ಟಿ ಮನಸ್ಸಿನಿಂದ ನಿರ್ಧರಿಸಿ ಸೀದಾ ನಮ್ಮೂರಿನಿಂದ ಬೆಂಗಳೂರಿಗೆ ಬಂದಿಳಿದೆ. ಆದರೆ ರಾಜಣ್ಣನ ಮನೆ ಎಲ್ಲಿ ಎಂಬುದೇ ಗೊತ್ತಿರಲಿಲ್ಲ. ನಂತರ ಗಾಂಧಿನಗರದಲ್ಲಿ ಶ್ರೀರಾಮ ಬುಕ್ ಸ್ಟೋರ್‌ನಲ್ಲಿ ಅವರ ವಿಳಾಸವಿರುವ ಪುಸ್ತಕ ಸಿಗುತ್ತದೆ ಎಂದು ಅಲ್ಲಿಗೆ ಹೋದೆ. ವಿಳಾಸವೇನೋ ಸಿಕ್ಕಿತು. ಆದರೆ ರಾಜಣ್ಣ ಅವತ್ತು ಮನೆಯಲ್ಲಿ ಇರಲಿಲ್ಲ. ನಿರಾಸೆಯಿಂದ ಅವರ ಮನೆಯನ್ನೇ ನೋಡುತ್ತಾ ಇನ್ನೇನು ವಾಪಸ್ ಹೊರಡಬೇಕು... ಪಾರ್ವತಕ್ಕ ಸಿಕ್ಕರು. ನನ್ನ ಬಗ್ಗೆ ಒಂದಷ್ಟು ವಿಚಾರಿಸಿದರು.ರಾಜಕುಮಾರ್ ಅವರನ್ನು ನೋಡಬೇಕು ಎಂಬ ಆಸೆಯಿಂದ ಬಂದೆ ಅಷ್ಟೇ. ದುಡ್ಡು ಕೇಳಲು ಅಲ್ಲ' ಎಂದು ಹೇಳಿದೆ. ಅದಕ್ಕೆ ಅವರು ನನ್ನನ್ನು ಒಳಗೆ ಕರೆದು ಕಾಫಿ ತರಿಸಿಕೊಟ್ಟರು. ಅವರು (ರಾಜ್‌ಕುಮಾರ್) ಚೆನ್ನೈಗೆ ಹೋಗಿದ್ದಾರೆ. ಬರೋದು ಇನ್ನೂ ಒಂದೆರಡು ದಿನ ಆಗಬಹುದು’ ಎಂದರು ಪಾರ್ವತಕ್ಕ. ಹೀಗೇ ಮಾತನಾಡುವಾಗ ಮುಂದೆ ಎಲ್ಲಿಗೆ ಹೋಗ್ತೀಯಾ... ಏನು ಮಾಡ್ತೀಯಾ? ಎಂದು ವಿಚಾರಿಸಿದರು. ನಾನು ವಾಪಸ್ ಊರಿಗೆ ಹೋಗುವುದಾಗಿ ತಿಳಿಸಿದೆ.ಇಲ್ಲೇ ಇದ್ದು ಏನಾದರು ಮಾಡಬಹುದಲ್ಲಾ, ನಿರ್ಮಾಪಕರು, ನಿರ್ದೇಶಕರ ಬಳಿ ಅವಕಾಶ ಕೇಳಬಹುದಲ್ಲವೇ’ ಎಂದು ಸಲಹೆ ನೀಡಿದರು. ನನಗೆ ಯಾರಾದರೂ ಸಿಕ್ಕರೂ ಹೇಳುತ್ತೇನೆ’ ಎಂದು ಹೇಳಿದರು. ಅಲ್ಲಿಂದ ಸಿನಿಮಾ ಪಯಣ ಶುರುವಾಯಿತು.ನ್ಯಾಯವೇ ದೇವರು' ನನ್ನ ಮೊದಲ ಸಿನಿಮಾ. ರಾಜಣ್ಣನ ಜತೆಗೆ ನಟಿಸಿದ್ದು. ಅಲ್ಲಿಂದ ಇಲ್ಲಿಯವರೆಗೆ ೧,೦೦೯ ಸಿನಿಮಾಗಳಲ್ಲಿ ನಟಿಸಿದ್ದೇನೆ. ರಾಜಣ್ಣನನ್ನು ನೋಡಲು ಬಂದವನು ನಾನು. ಕೊನೆಗೆ ನಟನಾದೆ. ಇಂಥದ್ದೊಂದು ಅವಕಾಶ ಸಿಗುತ್ತದೆ ಎಂದು ಕನಸಿನಲ್ಲಿಯೂ ಅಂದುಕೊಂಡಿರಲಿಲ್ಲ.
ಇನ್ನು ರಾಜಣ್ಣನನ್ನು ಮೊದಲಿಗೆ ನೋಡಿದಾಗ, ಮಾತನಾಡಿದಾಗ ಸಿಕ್ಕಾಪಟ್ಟೆ ಸಂತೋಷವಾಯಿತು. ರಾಜಣ್ಣ ಯಾರನ್ನೇ ಆದರೂ ಏಕವಚನದಲ್ಲಿ ಮಾತನಾಡಿಸುತ್ತಿರಲಿಲ್ಲ. ಬನ್ನಿ, ಕೂತ್ಕಳಿ, ಕಾಫಿ ಕುಡೀರಿ’ ಎಂದೇ ಮಾತನಾಡಿಸುತ್ತಿದ್ದರು. ನನ್ನ ಕಂಡರೂ ಅವರಿಗೆ ಇಷ್ಟ. ಅವರು ಎಲ್ಲೇ ಹೋಗುವುದಿದ್ದರೂಕೃಷ್ಣ ಎಲ್ಲಿ? ಅವರನ್ನು ಕರೆಯಿರಿ' ಎಂದು ನನ್ನನ್ನೂ ಅವರೊಟ್ಟಿಗೆ ಕರೆದುಕೊಂಡು ಹೋಗುತ್ತಿದ್ದರು. ಹೀಗೆ ಒಮ್ಮೆ ಮಾತನಾಡುವಾಗ ನೀನು ವಿಮಾನದಲ್ಲಿ ಹೋಗಿದ್ದೀಯೇನಯ್ಯಾ?' ಎಂದು ಕೇಳಿದರು.ಇಲ್ಲ' ಎಂದೆ. ಮೊದಲ ಬಾರಿಗೆ ನನ್ನನ್ನು ಬೆಂಗಳೂರಿನಿಂದ ಮದ್ರಾಸ್‌ಗೆ ವಿಮಾನದಲ್ಲಿ ಕರೆದುಕೊಂಡು ಹೋದ ಪುಣ್ಯಾತ್ಮ ಅವರು. ನನಗೆ ಮುತ್ತು ಕೊಟ್ಟು ವಿಮಾನದಲ್ಲಿ ಕರೆದುಕೊಂಡು ಹೋದದ್ದನ್ನು ಮರೆಯಲು ಸಾಧ್ಯವೇ..? ಅವರು ಎಲ್ಲೇ ಕೂತಿದ್ದರೂ, ಮಲಗಿದ್ದರೂ, ಏನೇ ಕೆಲಸ ಮಾಡುತ್ತಿದ್ದರೂ ಅವರನ್ನು ಕದ್ದು ನೋಡುವ ಅಭ್ಯಾಸವಿತ್ತು. ಅಂಥವರೊಂದಿಗೆ ನಾನಿದ್ದೆ ಎಂಬುದೇ ನನ್ನ ಜೀವನದ ಸಾರ್ಥಕತೆ. ಅವರು ಯಾರಿಗೂ ಕೇಡು ಬಯಸಿದವರಲ್ಲ… ಅವರೊಂದಿಗಿನ ಒಡನಾಟ, ಅವರೊಟ್ಟಿಗೆ ಮಾಡಿದ ವಿವಿಧ ಬಗೆಯ ಊಟ ಎಲ್ಲವನ್ನೂ ನೆನಪಿಸಿಕೊಳ್ಳುತ್ತಲೇ ಇರ್ತೀನಿ.’