For the best experience, open
https://m.samyuktakarnataka.in
on your mobile browser.

ಪಕ್ಷಿಗಳಿಗೆ ನೀರು, ದವಸ-ಧಾನ್ಯ ಪೂರೈಕೆ

11:07 PM Apr 07, 2024 IST | Samyukta Karnataka
ಪಕ್ಷಿಗಳಿಗೆ ನೀರು  ದವಸ ಧಾನ್ಯ ಪೂರೈಕೆ

ಧಾರವಾಡ: ಬೇಸಿಗೆ ಬೀರು ಬಿಸಿಲಿಗೆ ಬಸವಳಿದ ಪಕ್ಷಿಗಳಿಗೆ ದಾಹ ತಣಿಸಲು ಕುಡಿಯುವ ನೀರು ಹಾಗೂ ದವಸ ಧಾನ್ಯಗಳನ್ನು ಇಡುವ ಕಾರ್ಯವನ್ನು ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿ ಮಾಡಲಾಯಿತು.
ಕವಿವಿ ಉದ್ಯಾನವನ ವಿಭಾಗದ ಸಹಯೋಗದಲ್ಲಿ ವಿವಿಯ ಬೋಧಕರು ಮತ್ತು ಬೋಧಕೇತರ ಸಿಬ್ಬಂದಿ ನೆರವಿನೊಂದಿಗೆ ನೀರು ಹಾಕುವ ತೊಟ್ಟಿಗಳನ್ನು ಗ್ರೀನ್ ಗಾರ್ಡನ್, ಬೋಟೋನಿಕಲ್ ಗಾರ್ಡನ್ ಹಾಗೂ ವಿವಿಧ ಸ್ನಾತಕೋತ್ತರ ವಿಭಾಗಗಳ ಮುಂದೆ ನೀರು ಮತ್ತು ಪಕ್ಷಿಗಳ ಆಹಾರ ಧಾನ್ಯಗಳನ್ನು ಇಡುವ ಕಾರ್ಯಕ್ಕೆ ಕುಲಪತಿ ಪ್ರೊಫೆಸರ್ ಕೆ.ಬಿ. ಗುಡಸಿ ನೀರು ಹಾಕುವ ಮೂಲಕ ಚಾಲನೆ ನೀಡಿದರು.
ನಂತರ ಮಾತನಾಡಿದ ಕುಲಪತಿ ಪ್ರೊಫೆಸರ್ ಕೆ.ಬಿ. ಗುಡಸಿ, ಕವಿವಿ ಕ್ಯಾಂಪಸ್‌ನಲ್ಲಿ ೧೨೮ ವಿವಿಧ ಪಕ್ಷಿಗಳು ಇರುವುದನ್ನು ಗುರುತಿಸಿದ್ದು, ಬೇಸಿಗೆಯ ಬಿಸಿಲಿನಲ್ಲಿ ಅವುಗಳಿಗೆ ಕುಡಿಯುವ ನೀರು ಪೂರೈಸಲು ಈ ರೀತಿಯ ತೊಟ್ಟಿಗಳನ್ನು ಇಡುವ ಮೂಲಕ ಪ್ರತಿಯೊಬ್ಬರು ಪಕ್ಷಿ ಸಂಕುಲಕ್ಕೆ ನೆರವಾಗಬೇಕು ಎಂದರು.
ಕುಲಸಚಿವ ಡಾ. ಎ.ಚೆನ್ನಪ್ಪ ಮಾತನಾಡಿ, ಹಳ್ಳಿಗಳಲ್ಲಿ ಕೆರೆ ನಿರ್ಮಾಣ ಮಾಡುವುದರ ಮೂಲಕ ಮನುಷ್ಯರು ಜೊತೆಗೆ ಪ್ರಾಣಿ ಪಕ್ಷಿಗಳು, ಜೀವ ಸಂಕುಲಕ್ಕೆ ಬೇಸಿಗೆಯಲ್ಲಿ ನೀರು ಸಿಗುವಂತೆ ನಮ್ಮ ಪೂರ್ವಜರು ಮಾಡಿದ್ದಾರೆ. ಅದನ್ನು ಉಳಿಸಿಕೊಂಡು ನಾವು ಪ್ರತಿಯೊಬ್ಬರು ಪರಿಸರ ಜಾಗೃತಿ ಕಾರ್ಯದಲ್ಲಿ ತೊಡಗಬೇಕು ಎಂದರು.
ಮೌಲ್ಯಮಾಪನ ಕುಲಸಚಿವ ಪ್ರೊ. ನಿಜಲಿಂಗಪ್ಪ ಮಟ್ಟಿಹಾಳ ಮಾತನಾಡಿ, ಸಕಲ ಜೀವಾತ್ಮರಿಗೆ ಲೇಸನ್ನು ಬಯಸುವುದು ನಿಜವಾದ ಧರ್ಮವಾಗಿದ್ದು, ಈ ವರ್ಷ ಬೇಸಿಗೆ ಬಿಸಿಲು ಹೆಚ್ಚಾಗಿದ್ದು ಪ್ರತಿಯೊಬ್ಬರು ತಮ್ಮ ಮನೆ ಮುಂದೆ ನೀರು ಇಡುವ ಮೂಲಕ ಪಕ್ಷಿಗಳ ನೀರಿನ ದಾಹ ನೀಗಿಸಬೇಕು ಎಂದರು.