For the best experience, open
https://m.samyuktakarnataka.in
on your mobile browser.

ಪಿತ್ರೋಡಾ ಹೇಳಿಕೆಗೂ ಕಾಂಗ್ರೆಸ್‌ಗೂ ಸಂಬಂಧವಿಲ್ಲ

10:02 PM Apr 25, 2024 IST | Samyukta Karnataka
ಪಿತ್ರೋಡಾ ಹೇಳಿಕೆಗೂ ಕಾಂಗ್ರೆಸ್‌ಗೂ ಸಂಬಂಧವಿಲ್ಲ

ಬೆಂಗಳೂರು: ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಡೆತ್ ಟ್ಯಾಕ್ಸ್ ಹಾಕಲ್ಲ, ಬರ್ತ್ ಟ್ಯಾಕ್ಸ್ಅನ್ನೂ ಹಾಕಲ್ಲ. ಸ್ಯಾಮ್ ಪಿತ್ರೋಡಾ ಅವರ ಹೇಳಿಕೆ ವೈಯಕ್ತಿಕ, ಅದಕ್ಕೂ ಕಾಂಗ್ರೆಸ್ ಪಕ್ಷಕ್ಕೂ ಸಂಬಂಧವಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಗುರುವಾರ ಮಾಧ್ಯಮಗಳ ಜತೆ ಮಾತನಾಡಿದ ಅವರು, ಪಿತ್ರಾರ್ಜಿತ ಆಸ್ತಿಯಲ್ಲಿ ಶೇ. ೫೦ರಷ್ಟನ್ನು ಸರ್ಕಾರ ಪಡೆಯಬೇಕು ಎಂಬ ಪಿತ್ರೋಡಾ ಅವರ ಹೇಳಿಕೆ ಬಗ್ಗೆ ಇದು ಭಾರತ. ಇಲ್ಲಿ ಯಾವುದೇ ಡೆತ್ ಟ್ಯಾಕ್ಸ್, ಬರ್ತ್ ಟ್ಯಾಕ್ಸ್ ಇಲ್ಲ. ಈ ದೇಶದ ಪರಂಪರೆ, ಪದ್ಧತಿ ಮುಂದುವರಿಯಲಿದೆ. ಯಾವುದೂ ಕೂಡ ನಮ್ಮ ಪಕ್ಷದಲ್ಲಿ ತೀರ್ಮಾನ ಆಗಿಲ್ಲ. ಅದು ಸುಳ್ಳು, ಅದಕ್ಕೆ ನಾವು ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ನಮ್ಮ ದೇಶದಲ್ಲಿ ರಾಜಕಾರಣದಲ್ಲಿ ತಂದೆ ಹಾಗೂ ಪೂರ್ವಜರ ಹೆಸರಿನಲ್ಲಿ ಚುನಾವಣೆ ಮಾಡುತ್ತಿರುವಾಗ ಅವರ ಆಸ್ತಿ ವರ್ಗಾವಣೆಗೆ ಅವಕಾಶ ನೀಡುತ್ತಾರಾ? ದೇಶದ ಸಂಪತ್ತನ್ನು ನಗದೀಕರಣ ಮಾಡಲು ಬಿಜೆಪಿ ಮುಂದಾಗಿದೆ ಎಂಬ ಮಾಧ್ಯಮ ವರದಿ ಓದಿದ್ದ ನೆನಪು ನನಗೆ. ನಮ್ಮ ಪ್ರಣಾಳಿಕೆಯಲ್ಲಿರುವ ಅಂಶಗಳು ಮಾತ್ರ ಪಕ್ಷದ ನಿಲುವು. ಅದರಿಂದಾಚೆಗಿನ ಅಂಶಗಳಿಗೆ ಪಕ್ಷಕ್ಕೆ ಸಂಬಂಧವಿಲ್ಲ.
ಸ್ಯಾಮ್ ಪಿತ್ರೋಡಾ ಅವರದು ವೈಯಕ್ತಿಕ ಅಭಿಪ್ರಾಯವೇ ಹೊರತು ಪಕ್ಷದ ಅಭಿಪ್ರಾಯ ಅಲ್ಲ. ಇಂತಹ ಚರ್ಚೆ ಪಕ್ಷದಲ್ಲಿ ಆಗಿಲ್ಲ. ಇಂತಹ ಹೇಳಿಕೆಗಳನ್ನು ನಾವು ಒಪ್ಪುವುದಿಲ್ಲ ಎಂದು ತಿಳಿಸಿದರು.