ಪೆನ್ ಡ್ರೈವ್ ಕೊಟ್ಟಿದ್ದು ನಾನೇ: ಪ್ರಜ್ವಲ್ ರೇವಣ್ಣ ಮಾಜಿ ಕಾರು ಚಾಲಕ
ಕಾಂಗ್ರೆಸ್ನವರಿಗೆ ನಾನು ವಿಡಿಯೋ ಕೊಟ್ಟಿಲ್ಲ ಕಾಂಗ್ರೆಸ್ ಅವರ ಮೇಲೆ ನಂಬಿಕೆ ಇಲ್ಲದೆ ದೇವರಾಜೇಗೌಡರ ಹತ್ತಿರ ಕೊಟ್ಟಿದ್ದೆ.
ಬೆಂಗಳೂರು: ಬಿಜೆಪಿ ಮುಖಂಡ ದೇವರಾಜೇಗೌಡಗೆ ಪೆನ್ ಡ್ರೈವ್ ಕೊಟ್ಟಿದ್ದು ನಾನೇ. ಇವರಿಗೆ ಬಿಟ್ಟು ಬೇರೆ ಯಾರಿಗೂ ಪೆನ್ ಡ್ರೈವ್ ಕೊಟ್ಟಿಲ್ಲ ಎಂದು ಪ್ರಜ್ವಲ್ ರೇವಣ್ಣ ಮಾಜಿ ಕಾರು ಚಾಲಕ ಕಾರ್ತಿಕ್ ಎಂಬುವವರು ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ, ಪ್ರಜ್ವಲ್ ರೇವಣ್ಣರ ಮಾಜಿ ಕಾರು ಚಾಲಕ ಕಾರ್ತಿಕ್ ಅಜ್ಞಾತ ಸ್ಥಳದಿಂದ ವಿಡಿಯೋ ಮಾಡಿದ್ದು, ಅದರಲ್ಲಿ ನಾನು 15 ವರ್ಷದಿಂದ ರೇವಣ್ಣ ಕುಟುಂಬದವರ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದೆ. ಈಚೆಗೆ ನನ್ನ ಜಮೀನನ್ನು ರೇವಣ್ಣ ಅವರು ಬಲವಂತವಾಗಿ ಅವರ ಹೆಸರಿಗೆ ಬರೆಸಿಕೊಂಡು ಹಲ್ಲೆ ಮಾಡಿದ್ದರು. ಒಂದು ವರ್ಷದ ಹಿಂದೆ ನಾನು ಕೆಲಸ ಬಿಟ್ಟಿದ್ದೆ. ಇದೇ ವೇಳೆ ಬಿಜೆಪಿ ಮುಖಂಡ ದೇವರಾಜೇಗೌಡ ಅವರು ರೇವಣ್ಣ ಕುಟುಂಬದ ವಿರುದ್ಧ ಹಲವು ದಿನಗಳಿಂದ ಹೋರಾಟ ನಡೆಸುತ್ತಿದ್ದರು. ದೇವರಾಜೇಗೌಡರ ಬಳಿ ಹೋದರೆ ನನಗೆ ನ್ಯಾಯ ಸಿಗಬಹುದು ಎಂದು ಅವರಿಗೆ ಅಶ್ಲೀಲ ದೃಶ್ಯಗಳ ಪೆನ್ ಡ್ರೈವ್ ಕೊಟ್ಟಿದ್ದೆ. ಆದರೆ, ಅವರು ಅದನ್ನು ರಾಜಕೀಯ ಸ್ವಾರ್ಥಕ್ಕೆ ಬಳಸಿಕೊಂಡಿದ್ದಾರೆ, ಕಾಂಗ್ರೆಸ್ನವರಿಗೆ ನಾನು ವಿಡಿಯೋ ಕೊಟ್ಟಿಲ್ಲ ಕಾಂಗ್ರೆಸ್ ಅವರ ಮೇಲೆ ನಂಬಿಕೆ ಇಲ್ಲದೆ ದೇವರಾಜೇಗೌಡರ ಹತ್ತಿರ ಕೊಟ್ಟಿದ್ದೆ. ಪೆನ್ಡ್ರೈವ್ ಯಾರು ಹಂಚಿದರೋ ಗೊತ್ತಿಲ್ಲ. ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ನಾನು ಕಾಂಗ್ರೆಸ್ ಅವರಿಗೆ ಕೊಡುವುದಿದ್ದರೆ ದೇವರಾಜೇಗೌಡ ಬಳಿ ಏಕೆ ಹೋಗುತ್ತಿದ್ದೆ ಇವತ್ತು ಎಸ್ಐಟಿ ಮುಂದೆ ಹಾಜರಾಗಿ ಎಲ್ಲಾ ಹೇಳಿಕೊಳ್ಳುತ್ತೇನೆ. ನಂತರ ಮಾಧ್ಯಮದ ಮುಂದೆ ಎಲ್ಲವನ್ನೂ ವಿವರವಾಗಿ ಹೇಳುತ್ತೇನೆ ಎಂದಿದ್ದಾರೆ.