ಪೆನ್ ಡ್ರೈವ್ ಪ್ರಕರಣ: ಬಿಜೆಪಿ ತನ್ನ ನಿಲುವು ಸ್ಪಷ್ಟಪಡಿಸಲಿ
ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದ ವಿಚಾರವಾಗಿ, ಬಿಜೆಪಿಯವರು ತಮ್ಮ ನಿಲುವು ಸ್ಪಷ್ಟಪಡಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಆಗ್ರಹಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು ಪ್ರಜ್ವಲ್ ಪ್ರಕರಣ ಕುರಿತು ಬಿಜೆಪಿಯ ಧೀಮಂತ ನಾಯಕರ ಮೌನವೇಕೆ?
ಹುಬ್ಬಳ್ಳಿ ಘಟನೆಗೆ ತೋರಿದಷ್ಟೇ ಆಸಕ್ತಿಯನ್ನು ಜಗದೀಶ ಶೆಟ್ಟರ್ ಹಾಗೂ ಇತರರು ಇಲ್ಲೂ ತೋರಿಸಲಿ. ಸಂಸದೆ ಮಂಗಲಾ ಅಂಗಡಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಮಾಡಲಿ ಸಂತ್ರಸ್ತೆಯರ ಪರ ಮೈತ್ರಿ ನಾಯಕರು ಮಾತಾಡಲಿ. ಇಡೀ ದೇಶವೇ ತಲೆ ತಗ್ಗಿಸುವಂಥ ನೀಚ ಕೃತ್ಯದ ಬಗ್ಗೆ ಮೈತ್ರಿ ಪಕ್ಷದ ನಾಯಕರು ಮಾತಾಡಲಿ.
ಮಹಿಳೆಯರಿಗೆ ಎಲ್ಲೇ ಅನ್ಯಾಯವಾದರೂ ನಾವು ಖಂಡಿಸುತ್ತೇವೆ. ಅವರ ಪರವಾಗಿ ನಿಲ್ಲುತ್ತೇವೆ. ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಅದರಲ್ಲಿ ರಾಜಕೀಯ ಬೆರೆಸಲು ನಾವು ಹೋಗುವುದಿಲ್ಲ. ಆದರೆ ಹುಬ್ಬಳ್ಳಿ ಪ್ರಕರಣದಲ್ಲಿ ಅತೀವ ಆಸಕ್ತಿ ತೋರಿದ್ದ ಬಿಜೆಪಿ ನಾಯಕರು ಈಗ ಯಾಕೇ ಮೌನವಾಗಿದ್ದಾರೆ. ಇಲ್ಲೂ ನೂರಾರು ಮಹಿಳೆಯರಿಗೆ ಅನ್ಯಾಯವಾಗಿದೆಯಲ್ಲವೇ? ಈಗಲೂ ಸಂಸದೆ ಮಂಗಲಾ ಅಂಗಡಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಮಾಡಲಿ. ಜಗದೀಶ ಶೆಟ್ಟರ್ ಅಷ್ಟೇ ಆಸಕ್ತಿಯಿಂದ ಹೇಳಿಕೆಗಳನ್ನು ನೀಡಲಿ.
ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ಏನು ಹೇಳ್ತೀರಾ ನಾರಿ ಶಕ್ತಿ, ನಾರಿ ಸಮ್ಮಾನ್, ಬೇಟಿ ಬಚ್ಚಾವ್, ಬೇಟಿ ಪಡಾವ್ ಅಂತ ಹೇಳುವ ಬಿಜೆಪಿಗರು, ಈಗ ಯಾಕೆ ಮೌನವಾಗಿದ್ದಾರೆ. ಮಾತು ಆಡಿದರೆ ಕರ್ನಾಟಕ ಸರ್ಕಾರವನ್ನು ಟೀಕಿಸುವ ಮೋದಿಜೀ ಅವರ ಈಗಿನ ನಿಲುವೇನು? ಇಲ್ಲಿನ ಸಂತ್ರಸ್ತ ಮಹಿಳೆಯರ ಮಾಂಗಲ್ಯದ ಕಥೆ ಏನು? ಕರ್ನಾಟಕ ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆಯಾಗಿ ಪ್ರಶ್ನೆ ಕೇಳತಿದಿನಿ, ಉತ್ತರಿಸಿ.
ವಿದೇಶದಿಂದ, ಹೊರ ರಾಜ್ಯಗಳಿಂದ ಫೋನ್ ಕಾಲ್ ಗಳು ಬರುತ್ತಿವೆ. ಇಂತಹ ಪ್ರಕರಣ ನಡೆದಿದ್ದು ನಿಜವೇ ಎಂದು ಪ್ರಶ್ನಿಸುತ್ತಿದ್ದಾರೆ. ಸರಕಾರ ಏನು ಕ್ರಮ ಕೈಗೊಳ್ಳಲಿದೆ ಎಂದು ಪ್ರಶ್ನಿಸುತ್ತಿದ್ದಾರೆ. ಪ್ರಕರಣವನ್ನು ರಾಜ್ಯ ಸರ್ಕಾರ ಈಗಾಲೇ ಎಸ್ ಐಟಿ ತನಿಖೆಗೆ ವಹಿಸಿದ್ದು, ಕಾನೂನಿನ ಚೌಕಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು.
ಬಿಜೆಪಿಯ ಮಾಜಿ ಶಾಸಕ ಪ್ರೀತಂ ಗೌಡ, ಹಿರಿಯ ಮುಖಂಡ ಎ.ಟಿ.ರಾಮಸ್ವಾಮಿ, ದೇವರಾಜ್ ಗೌಡ ಎಂಬುವರು, ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಮೈಸೂರು ಪ್ರವಾಸದಲ್ಲಿದ್ದ ಅಮಿತ್ ಷಾ ಅವರ ಗಮನಕ್ಕೆ ಆಗಲೇ ತಂದಿದ್ದರು. ಇಂತಹ ವಿಷಯ ಗೊತ್ತಿದ್ದರೂ ಮೈತ್ರಿ ನಾಯಕರು ಪ್ರಜ್ವಲ್ ಅವರನ್ನೇ ಅಭ್ಯರ್ಥಿಯನ್ನಾಗಿ ಮಾಡಿದ್ದು ಎಷ್ಟು ಸರಿ? ಇದಕ್ಕೆ ಬಿಜೆಪಿ ನಾಯಕರು ಉತ್ತರಿಸುವರೇ ?
ಉಡುಪಿ ಹಾಸ್ಟೆಲ್ ನಲ್ಲಿ ಕ್ಯಾಮೆರಾ ಇಟ್ಟ ವಿಷಯವನ್ನು ಬಿಜೆಪಿಯವರು ರಾಜಕರಣಗೊಳಿಸಿದ್ರು, ರಾಷ್ಟ್ರೀಯ ಮಹಿಳಾ ಆಯೋಗದವರು ಓಡೋಡಿ ಬಂದರು. ಈಗ ಸಾವಿರಾರು ಮಹಿಳೆಯರ ಮಾನ ಹರಾಜಾದ್ರು ಯಾರು ಏನೂ ಮಾತಾಡುತ್ತಿಲ್ಲ. ಅಶೋಕ್, ವಿಜಯೇಂದ್ರ ಅವರೇ ಈಗ ಏನು ಹೇಳ್ತೀರಾ, ಶೋಭಾ ಕರಂದ್ಲಾಜೆ, ಸ್ಮೃತಿ ಇರಾನಿ ಅವರು ಯಾಕೇ ಏನು ಹೇಳ್ತಿಲ್ಲ. ಮಂಡ್ಯ ಸೊಸೆ ಸುಮಲತಾ ಏನ್ ಮಾಡ್ತಿದ್ದಾರೆ..?? ಎಂದಿದ್ದಾರೆ.