For the best experience, open
https://m.samyuktakarnataka.in
on your mobile browser.

ಪ್ರಗತಿಪರರಿಂದ ಹಾಸನ ಚಲೋ

11:11 PM May 30, 2024 IST | Samyukta Karnataka
ಪ್ರಗತಿಪರರಿಂದ ಹಾಸನ ಚಲೋ

ಹಾಸನ: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣರನ್ನು ವಿಮಾನ ನಿಲ್ದಾಣದಲ್ಲೇ ಬಂಧಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಜನಪರ ಚಳವಳಿಗಳ ಒಕ್ಕೂಟ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿತು.
ಬೆಂಗಳೂರು, ಮೈಸೂರು, ಹಾಸನ, ಮಂಗಳೂರು, ಮಂಡ್ಯ ಮತ್ತು ಚಿಕ್ಕಮಗಳೂರುಗಳಿಂದ ಮಹಿಳೆಯರ ಮೇಲಿನ ಲೈಂಗಿಕ ಶೋಷಣೆಯನ್ನು ವಿರೋಧಿಸಿ ಹಾಸನ ಚಲೋ ಪ್ರತಿಭಟನಾ ರ‍್ಯಾಲಿಯಲ್ಲಿ ಭಾಗವಹಿಸಿದ್ದರು. ರಾಜ್ಯದ ಹಲವೆಡೆಗಳಿಂದ ೧೪೩ ಸಂಘಟನೆಗಳ ಸುಮಾರು ೧೦ ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಪಾಲ್ಗೊಂಡಿದ್ದರು. ನಗರದ ಹೇಮಾವತಿ ಪ್ರತಿಮೆಯ ಬಳಿಯಿಂದ ಮೆರವಣಿಗೆ ಆರಂಭವಾಗಿದ್ದು, ಜಿಲ್ಲಾಧಿಕಾರಿ ಕಚೇರಿ ಬಳಿಯ ಹೊಸ ಬಸ್ ನಿಲ್ದಾಣ ರಸ್ತೆಯಲ್ಲಿ ಬಹಿರಂಗ ಸಭೆ ನಡೆಸಿದರು. ಸಿಪಿಎಂ ನಾಯಕಿ ಸುಭಾಷಿಣಿ ಅಲಿ, ಜನವಾದಿ ಮಹಿಳಾ ಸಂಘಟನೆ ಅಧ್ಯಕ್ಷೆ ಮೀನಾಕ್ಷಿ ಬಾಳಿ, ಲೇಖಕಿಯರಾದ ಬಾನು ಮುಷ್ತಾಕ್, ರೂಪ ಹಾಸನ ಸೇರಿದಂತೆ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ಆರೋಪಿಗಳಿಗೆ ಜಾಮೀನು: ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ, ಫೋಟೋಗಳಿರುವ ಪೆನ್ ಡ್ರೈವ್ ಹಂಚಿಕೆ ಪ್ರಕರಣದ ಆರೋಪಿಗಳಾದ ಚೇತನ್ ಹಾಗೂ ಲಿಖಿತ್‌ಗೌಡಗೆ ಮೂರನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಜಾಮೀನು ಮಂಜೂರಾಗಿದೆ. ಪೆನ್‌ಡ್ರೈವ್ ಹಂಚಿಕೆ ಪ್ರಕರಣದಲ್ಲಿ ಆರು ಮತ್ತು ಏಳನೇ ಆರೋಪಿಗಳಾಗಿದ್ದ ಮಾಜಿ ಶಾಸಕ ಪ್ರೀತಂಗೌಡ ಅವರ ಆಪ್ತರಾದ ಯಲಗುಂದ ಚೇತನ್ ಹಾಗೂ ಲಿಖಿತ್‌ಗೌಡರನ್ನು ಮೇ ೧೨ರಂದು ಎಸ್‌ಐಟಿ ತಂಡ ಬಂಧಿಸಿ ವಿಚಾರಣೆ ನಡೆಸಿದ ನಂತರ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದರು. ಹದಿನೆಂಟು ದಿನಗಳ ಬಳಿಕ ಇಬ್ಬರು ಆರೋಪಿಗಳಿಗೂ ಜಾಮೀನು ಮಂಜೂರಾಗಿದೆ.