For the best experience, open
https://m.samyuktakarnataka.in
on your mobile browser.

ಪ್ರಲ್ಹಾದ ಜೋಶಿಗೆ ಆಹಾರ ಮತ್ತು ಗ್ರಾಹಕ ವ್ಯವಹಾರ ಖಾತೆ

09:09 PM Jun 10, 2024 IST | Samyukta Karnataka
ಪ್ರಲ್ಹಾದ ಜೋಶಿಗೆ ಆಹಾರ ಮತ್ತು ಗ್ರಾಹಕ ವ್ಯವಹಾರ ಖಾತೆ

ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಖಾತೆ ಬದಲಾವಣೆ ಮಾಡಲಾಗಿದೆ. ಈ ಬಾರಿ ಆಹಾರ ಮತ್ತು ಗ್ರಾಹಕ ವ್ಯವಹಾರ ಖಾತೆಯನ್ನು ನೀಡಲಾಗಿದೆ. ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಸತತ 5ನೇ ಬಾರಿ ಐತಿಹಾಸಿಕ ಗೆಲುವು ಸಾಧಿಸಿರುವ ಪ್ರಲ್ಹಾದ ಜೋಶಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ಹೊಣೆಗಾರಿಕೆ ನೀಡಿದ್ದಾರೆ.
ಮೋದಿ ಸರ್ಕಾರದಲ್ಲಿ ಸತತ ಎರಡನೇ ಬಾರಿ ಕ್ಯಾಬಿನೆಟ್ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಜೋಶಿ ಅವರಿಗೆ ಆಹಾರ ಮತ್ತು ಗ್ರಾಹಕ ವ್ಯವಹಾರ ಖಾತೆ ಜತೆಗೆ ನವೀಕರಿಸಬಹುದಾದ ಇಂಧನ ಖಾತೆಯನ್ನೂ ನೀಡಲಾಗಿದೆ.
ಪ್ರಧಾನಿ ಮೋದಿ ಅವರ 3ನೇ ಅವಧಿ ಸಂಪುಟದಲ್ಲಿ ಸ್ಥಾನ ಪಡೆದ ಎಲ್ಲರಿಗೂ ಇಂದು ಸಂಜೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಖಾತೆ ಹಂಚಿಕೆ ಮಾಡಲಾಗಿದೆ. ಮೋದಿ ಅವರ ಎರಡನೇ ಅವಧಿಯಲ್ಲಿ ಪ್ರಲ್ಹಾದ ಜೋಶಿ ಅವರು ಸಂಸದೀಯ ವ್ಯವಹಾರ ಮತ್ತು ಕಲ್ಲಿದ್ದಲು, ಗಣಿ ಖಾತೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದರು. ಕಲ್ಲಿದ್ದಲು ಖಾತೆಯಲ್ಲಿ ಪ್ರಮುಖ, ಮಹತ್ವದ ಸುಧಾರಣೆ ತಂದು ಸ್ವತಃ ಪ್ರಧಾನಿ ಮೋದಿ ಅವರಿಂದಲೇ ಪ್ರಶಂಸೆಗೆ ಪಾತ್ರರಾಗಿದ್ದರು. ಸಂಸದೀಯ ಸಚಿವರಾಗಿ ಸಹ ಸದನದಲ್ಲಿ ಎಲ್ಲರೊಂದಿಗೂ ಬೆರೆತು, ಸರ್ವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬಹು ಅಚ್ಚುಕಟ್ಟಾಗಿ ನಿರ್ವಹಿಸಿದ್ದರು. ಇದೆಲ್ಲವನ್ನೂ ಮನಗಂಡಿರುವ ಪ್ರಧಾನಿ ಮೋದಿ ಅವರು ಈ ಬಾರಿ ಆಹಾರ ಮತ್ತು ಗ್ರಾಹಕ ವ್ಯವಹಾರ ಖಾತೆ ನೀಡಿದ್ದಾರೆ. ಕಳೆದ ಬಾರಿ ಪ್ರಲ್ಹಾದ ಜೋಶಿ ಕಲ್ಲಿದ್ದಲು ಮತ್ತು ಗಣಿ ಖಾತೆಯಲ್ಲಿ ತಂದ ಪರಿವರ್ತನೆ, ಸಾಧನೆ ಕಂಡು ಪ್ರಧಾನಿ ಮೋದಿ ಈ ಬಾರಿ ಮತ್ತೊಂದು ಖಾತೆ ನವೀಕರಿಸಬಹುದಾದ ಇಂಧನ ಖಾತೆಯ ಹೊಣೆಗಾರಿಕೆಯನ್ನೂ ಜೋಶಿ ಅವರ ಹೆಗಲಿಗೆ ಇರಿಸಿದ್ದಾರೆ.
ಕೇಂದ್ರದಲ್ಲಿ ಮತ್ತೆ ಸಚಿವ ಸ್ಥಾನ ಕಲ್ಪಿಸಿ ಪ್ರಮುಖ ಖಾತೆಗಳನ್ನು ನಿರ್ವಹಿಸಲು ಅವಕಾಶ ಕೊಟ್ಟ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಎನ್‌ಡಿಎ ಮೈತ್ರಿಕೂಟದ ಎಲ್ಲಾ ನಾಯಕರಿಗೆ ಪ್ರಲ್ಹಾದ ಜೋಶಿ ಧನ್ಯವಾದ ಅರ್ಪಿಸಿದ್ದಾರೆ.