For the best experience, open
https://m.samyuktakarnataka.in
on your mobile browser.

ಬಹುಮತ ಸಾಬೀತುಪಡಿಸಿದ ಜಾರ್ಖಂಡ್ ಸಿಎಂ ಚಂಪೈ

12:30 AM Feb 06, 2024 IST | Samyukta Karnataka
ಬಹುಮತ ಸಾಬೀತುಪಡಿಸಿದ ಜಾರ್ಖಂಡ್ ಸಿಎಂ ಚಂಪೈ

ರಾಂಚಿ: ಜೆಎಂಎಂ ನೇತೃತ್ವದ ಜಾರ್ಖಂಡ್‌ನ ಸಮ್ಮಿಶ್ರ ಸರ್ಕಾರ ಸೋಮವಾರ ವಿಶ್ವಾಸ ಮತ ಸಾಬೀತುಪಡಿಸಿದೆ. ಮೂರು ದಿನಗಳ ಹಿಂದೆ ಪ್ರಮಾಣವಚನ ಸ್ವೀಕರಿಸಿದ್ದ ಮುಖ್ಯಮಂತ್ರಿ ಚಂಪೈ ಸೋರೆನ್ ಮೊದಲ ಸವಾಲಿನಲ್ಲಿ ಗೆದ್ದಿದ್ದಾರೆ.
ವಿಶೇಷ ಅಧಿವೇಶನದಲ್ಲಿ ಚಂಪೈ ಸೋರೆನ್ ಅವರು ವಿಶ್ವಾಸ ಮತಯಾಚಿಸಿದಾಗ, ಜೆಎಂಎಂ, ಕಾಂಗ್ರೆಸ್ ಮತ್ತು ಆರ್‌ಜೆಡಿ ಮೈತ್ರಿಕೂಟದ ೪೭ ಶಾಸಕರು ಕೈ ಎತ್ತುವ ಮೂಲಕ ಚಂಪೈ ಸರ್ಕಾರಕ್ಕೆ ಬಂಬಲ ನೀಡಿದರು. ೨೯ ಶಾಸಕರು ವಿಶ್ವಾಸಮತದ ವಿರುದ್ಧವಾಗಿ ಕೈ ಎತ್ತಿದರು.
ಜಾರ್ಖಂಡ್ ವಿಧಾನಸಭೆ ೮೧ ಸದಸ್ಯಬಲ ಹೊಂದಿದ್ದು, ಜೆಎಂಎಂ ೨೯, ಕಾಂಗ್ರೆಸ್ ೧೭ ಸ್ಥಾನಗಳನ್ನು ಹೊಂದಿದೆ. ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರನ್ನು ಇಡಿ ಬಂಧಿಸಿದ್ದು, ಆ ಜಾಗದಲ್ಲಿ ಪ್ರತ್ಯೇಕ ರಾಜ್ಯದ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಚಂಪೈ ಅವರನ್ನು ಆಯ್ಕೆ ಮಾಡಲಾಗಿತ್ತು. ವಿಶ್ವಾಸಮತಕ್ಕೆ ೧೦ ದಿನಗಳ ಗಡುವು ನೀಡಿದ್ದರಿಂದ ಶಾಸಕರ 'ಕುದುರೆ ವ್ಯಾಪಾರ' ನಡೆಯುವ ಸಾಧ್ಯತೆಯನ್ನು ಮನಗಂಡು ಎಲ್ಲರನ್ನೂ ತೆಲಂಗಾಣದ ರೆಸಾರ್ಟ್ನಲ್ಲಿ ಇರಿಸಲಾಗಿತ್ತು. ಭಾನುವಾರ ಬೆಳಗ್ಗೆ ರೆಸಾರ್ಟ್ ರಾಜಕೀಯ ಅಂತ್ಯಗೊಂಡಿದ್ದು, ವಿಶೇಷ ಅಧಿವೇಶನಕ್ಕೆ ಅವರೆಲ್ಲರನ್ನೂ ಕರೆತರಲಾಗಿತ್ತು.
ಭೂಹಗರಣಕ್ಕೆ ಸಂಬಂಧಿಸಿದಂತೆ ಇಡಿ ಕಸ್ಟಡಿಯಲ್ಲಿರುವ ಹೇಮಂತ್ ಸೊರೇನ್, ನ್ಯಾಯಾಲಯದ ಅನುಮತಿ ಪಡೆದು ಕಲಾಪದಲ್ಲಿ ಹಾಜರಾಗಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ತಮ್ಮ ಬಂಧನಕ್ಕೆ ಬಿಜೆಪಿಯೇ ಕಾರಣ ಎಂದು ದೂಷಿಸಿದರು.
ಮಾಜಿ ಸಿಎಂಗೆ ಸ್ವಾಗತ
ಬಂಧಿತ ಹೇಮಂತ್ ಸೊರೇನ್ ಸದನಕ್ಕೆ ಆಗಮಿಸುತ್ತಿದ್ದಂತೆ ಆಡಳಿತ ಪಕ್ಷದ ಸದಸ್ಯರು ಜೈ ಜಾರ್ಖಂಡ್, ಹೇಮಂತ್ ಸೊರೇನ್ ಜಿಂದಾಬಾದ್, ಶಿಬು ಸೊರೇನ್ ಜಿಂದಾಬಾದ್ ಘೋಷಣೆಗಳನ್ನು ಕೂಗುವ ಮೂಲಕ ಭವ್ಯ ಸ್ವಾಗತ ನೀಡಿದರು. 'ಜೈಲ್ ಕಾ ಫಾಟಕ್ ಟೂಟೇಗಾ, ಹೇಮಂತ್ ಸೊರೇನ್ ಚೂಟೇಗಾ' (ಜೈಲಿನ ಸರಳು ಮುರಿದುಬೀಳುತ್ತದೆ, ಹೇಮಂತ್ ಸೊರೇನ್ ಹೊರಗೆ ಬರಲಿದ್ದಾರೆ) ಎಂದು ಅಬ್ಬರದ ಘೋಷಣೆ ಕೂಗಿದರು.