ಬಾಂಡ್ ವಿವರ ಕೊಡಲು ಮಾ. ೨೧ರೊಳಗೆ ಎಸ್‌ಬಿಐಗೆ ಸುಪ್ರೀಂ ಕೋರ್ಟ್ ಗಡುವು
ನವದೆಹಲಿ: ಚುನಾವಣಾ ಬಾಂಡ್ ವಿಚಾರದಲ್ಲಿ ಕೆಲವು ಸಂಗತಿಗಳನ್ನು ಬಹಿರಂಗಪಡಿಸಿ ಮತ್ತೆ ಕೆಲವನ್ನು ಮುಚ್ಚಿಡುವುದು ಸರಿಯಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದ್ದು, ಮಾ.೨೧ ರೊಳಗೆ ಎಲ್ಲ ಮಾಹಿತಿ ಬಹಿರಂಗಪಡಿಸಬೇಕು ಎಂದು ಗಡುವು ನೀಡಿದೆ. ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠ ಎಸ್‌ಬಿಐಗೆ ತಾಕೀತು ಮಾಡಿದೆ.
ಪ್ರತಿ ಬಾಂಡ್‌ಗೂ ವಿಶಿಷ್ಟ ಗುರುತಿನ ಸಂಖ್ಯೆ ನೀಡಲಾಗಿದೆ. ಆ ಸಂಖ್ಯೆಯನ್ನು ಬಹಿರಂಗಪಡಿಸಿದರೆ ಚುನಾವಣಾ ಬಾಂಡ್‌ನ ಎಲ್ಲ ವಿವರ ಲಭಿಸುತ್ತದೆ. ಎಸ್‌ಬಿಐ ಬಳಿ ಇರುವ ಎಲ್ಲ ಮಾಹಿತಿ ಜನರಿಗೆ ತಿಳಿಯಬೇಕು ಎಂದು ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸಂಜಯ ಖನ್ನಾ, ಬಿ.ಆರ್.ಗವಾಯಿ, ಜೆ.ಬಿ.ಪರ್ದೀವಾಲ, ಮನೋಜ್ ಮಿಶ್ರಾ ಅವರ ಸಂವಿಧಾನ ಪೀಠ ಸೂಚನೆ ನೀಡಿದೆ. ಎಸ್‌ಬಿಐ ನೀಡುವ ಎಲ್ಲ ಮಾಹಿತಿಗಳನ್ನು ಚುನಾವಣಾ ಆಯೋಗ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು ಎಂದು ಆದೇಶಿಸಿದೆ. ಎಸ್‌ಬಿಐ ಮಾಹಿತಿ ಬಹಿರಂಗಪಡಿಸುವಾಗ ಯಾವುದೇ ರೀತಿಯಲ್ಲೂ ಅನುಮಾನಕ್ಕೆ ಅವಕಾಶ ನೀಡಬಾರದು. ಯಾವುದೇ ರೀತಿಯ ವಿವಾದಕ್ಕೆ ಅವಕಾಶವಿಲ್ಲದಂತೆ ಬ್ಯಾಂಕ್ ಅಧ್ಯಕ್ಷರು ಗುರುವಾರ ೫ ಗಂಟೆ ಒಳಗೆ ಪ್ರಮಾಣಪತ್ರ ಸಲ್ಲಿಸಬೇಕು.
ಚುನಾವಣೆ ಆಯೋಗ ಇವುಗಳನ್ನು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು ಎಂದು ಹೇಳಲಾಗಿದೆ. ಅದರೂ ಕೆಲವು ವಿವರ ನೀಡಿಲ್ಲ. ಎಸ್‌ಬಿಐ ಇದಕ್ಕೆ ಕಾಲಾವಕಾಶ ಕೇಳಿತ್ತು. ಅದನ್ನು ತಿರಸ್ಕರಿಸಲಾಗಿದೆ ಎಂದು ನ್ಯಾಯಪೀಠ ತಿಳಿಸಿದೆ. ಬ್ಯಾಂಕ್ ಪರ ವಕೀಲ ಹರೀಶ್ ಸಾಳ್ವೆ ಎಲ್ಲ ವಿವರ ನೀಡುವುದಾಗಿ ತಿಳಿಸಿದರು. ವಕೀಲ ಮುಕುಲ್ ರೋಹಟಗಿ ಬಾಂಡ್‌ಗಳ ವಿಶಿಷ್ಟ ಗುರುತಿನ ಸಂಖ್ಯೆ ಬಹಿರಂಗಪಡಿಸುವುದನ್ನು ಮುಂದೂಡುವಂತೆ ನ್ಯಾಯಪೀಠವನ್ನು ಮನವಿ ಮಾಡಿಕೊಂಡರು. ಆದರೆ ಸಿಜೆ ಒಪ್ಪಲಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ನ್ಯಾಯಾಲಯದ ತೀರ್ಪಿನ ಬಗ್ಗೆ ಬಂದಿರುವ ಟೀಕೆ ಟಿಪ್ಪಣಿಗಳ ಬಗ್ಗೆ ಸರ್ಕಾರಿ ವಕೀಲ ತುಷಾರ್ ಮೆಹ್ತಾ ಆತಂಕ ವ್ಯಕ್ತಪಡಿಸಿದರು.