ಬಿಜೆಪಿ - ಕಾಂಗ್ರೆಸ್ ಹೊಯ್ಕೈ
ಮಂಗಳೂರು: ನಗರದ ಚಿಲಿಂಬಿ ಸಾಯಿ ಮಂದಿರದ ಬಳಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ ನಡೆದ ಘಟನೆ ಇಂದು ಅಪರಾಹ್ನ ನಡೆದಿದೆ.
ಸಾಯಿ ಮಂದಿರದ ಬಳಿ ಬಿಜೆಪಿಗರು ಚುನಾವಣಾ ಪ್ರಚಾರ ಮಾಡುತ್ತಿದ್ದಾಗ ಕಾಂಗ್ರೆಸ್ಸಿಗರು ಪ್ರಚಾರ ನಡೆಸದಂತೆ ಸೂಚಿಸಿದರು ಎನ್ನಲಾಗಿದೆ. ಇದನ್ನು ಬಿಜೆಪಿಗರು ವಿರೋಧ ವ್ಯಕ್ತಪಡಿಸಿದರು. ಈ ಸಂದರ್ಭ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ, ಹೊಯ್ಕೈ ನಡೆದಿದೆ. ಸ್ಥಳಕ್ಕೆ ಬಂದ ಶಾಸಕ ವೇದವ್ಯಾಸ ಕಾಮತ್ ಮತ್ತು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಮಧ್ಯಪ್ರವೇಶಿಸಿ ಆಯಾ ಪಕ್ಷದ ಕಾರ್ಯಕರ್ತರನ್ನು ಸಮಾಧಾನ ಪಡಿಸಿದರು. ಮಾಹಿತಿ ತಿಳಿದ ಪೊಲೀಸರು ತಕ್ಷಣ ಸ್ಥಳಕ್ಕೆ ತೆರಳಿ ಇತ್ತಂಡದ ಗುಂಪುಗಳನ್ನು ಚದುರಿಸಿದರು.
ರಾಮನವಮಿಯ ಹಿನ್ನೆಲೆಯಲ್ಲಿ ಚಿಲಿಂಬಿಯ ಸಾಯಿ ಮಂದಿರದ ಬಳಿ ಭಾರೀ ಸಂಖ್ಯೆಯ ಭಕ್ತರು ಸೇರಿದ್ದರು. ಈ ವೇಳೆ ಬಿಜೆಪಿಗರು ಇಲ್ಲೇ ಚುನಾವಣೆ ಪ್ರಚಾರಕ್ಕೆ ಮುಂದಾಗಿದ್ದರು. ಮಂದಿರದ ಬಳಿ ಪ್ರಚಾರ ನಡೆಸುವುದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದಾಗ ವಾಗ್ವಾದ, ಮಾತಿನ ಚಕಮಕಿ, ಹೊಯ್ಕೈ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.