For the best experience, open
https://m.samyuktakarnataka.in
on your mobile browser.

ಬಿಜೆಪಿ ಕಾರ್ಯಕರ್ತರನ್ನು ನಿರ್ಲಕ್ಷ್ಯಿಸಿ ಟಿಕೆಟ್ ಘೋಷಣೆ

06:27 PM May 18, 2024 IST | Samyukta Karnataka
ಬಿಜೆಪಿ ಕಾರ್ಯಕರ್ತರನ್ನು ನಿರ್ಲಕ್ಷ್ಯಿಸಿ ಟಿಕೆಟ್ ಘೋಷಣೆ

ಮಂಗಳೂರು: ವಿಧಾನಪರಿಷತ್ ನೈರುತ್ಯ ಪದವೀಧರ ಕ್ಷೇತ್ರದ ಟಿಕೆಟ್ ನನಗೆ ನೀಡುತ್ತೇವೆ ಎಂದು ಬಿಜೆಪಿ ಹಿರಿಯರು ತಿಳಿಸಿ, ಸಿದ್ಧತೆ ನಡೆಸಲು ಸೂಚಿಸಿದ್ದರು. ಆದರೆ, ಕರಾವಳಿಯ ಬಿಜೆಪಿ ಕಾರ್ಯಕರ್ತರನ್ನು ನಿರ್ಲಕ್ಷ್ಯಿಸಿ ಟಿಕೆಟ್ ಘೋಷಿಸಲಾಗಿದೆ. ಕಾರ್ಯಕರ್ತರ ಧ್ವನಿಯಾಗಿ ವಿಧಾನಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ಪದವೀಧರ ಮತದಾರರು ಬೆಂಬಲಿಸಬೇಕು ಎಂದು ವಿಧಾನಪರಿಷತ್ ನೈರುತ್ಯ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ರಘುಪತಿ ಭಟ್ ಹೇಳಿದರು.
ಪತ್ರಿಕಾ ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೈತಪ್ಪಿದಾಗ ಪಕ್ಷಕ್ಕಾಗಿ ಕೆಲಸ ಮಾಡಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿದ್ದೆ. ಲೋಕಸಭಾ ಚುನಾವಣೆ ವೇಳೆಯೂ ಶಿವಮೊಗ್ಗ ಕ್ಷೇತ್ರದ ಪ್ರಭಾರಿಯಾಗಿ ೪೨ ದಿನ ಕೆಲಸ ಮಾಡಿದ್ದೆ. ವಿಧಾನ ಪರಿಷತ್ ಚುನಾವಣೆಯ ಟಿಕೆಟ್ ನನಗೆ ನೀಡುವ ಭರವಸೆ ನೀಡಲಾಗಿತ್ತು. ಆದರೆ, ಕರಾವಳಿಯ ಬಿಜೆಪಿ ಕಾರ್ಯಕರ್ತರನ್ನು ‘ಟೇಕನ್ ಫಾರ್ ಗ್ರ್ಯಾಂಟೆಡ್’ ಎಂದು ಬಿಜೆಪಿ ಹೈಕಮಾಂಡ್ ಭಾವಿಸಿದೆ. ಪಕ್ಷಕ್ಕಾಗಿ ದುಡಿದವರನ್ನು ನಿರ್ಲಕ್ಷ್ಯ ಮಾಡಿ ಒಂದೂವರೆ ವರ್ಷದ ಹಿಂದೆ ಪಕ್ಷಕ್ಕೆ ಬಂದವರಿಗೆ ಟಿಕೆಟ್ ನೀಡಲಾಗಿದೆ. ಬಿಜೆಪಿ ಹಿರಿಯರ ಈ ಧೋರಣೆ ವಿರೋಧಿಸಿ ಸ್ಪರ್ಧೆ ನಡೆಸುತ್ತಿದ್ದೇನೆ ಎಂದು ಹೇಳಿದರು.
ಪದವೀಧರರಿಗೆ ಪದವಿ ನಂತರ ಕಾಡುವ ಉದ್ಯೋಗಕ್ಕೆ ನೆಟ್‌ವರ್ಕ್ ಡಾಟಾಬೇಸ್‌ಗಳ ಸ್ಥಾಪನೆ, ಸರಕಾರಿ ಹುದ್ದೆಗಳ ಪರೀಕ್ಷೆ ನಡೆದ ಕಾಲಮಿತಿಯಲ್ಲಿ ಫಲಿತಾಂಶ ಪ್ರಕಟ, ಕ್ಷಿಪ್ರ ನೇಮಕಾತಿಗಾಗಿ ಒತ್ತಾಯ, ಪದವೀಧರರಿಗೆ ಸ್ವ ಉದ್ಯೋಗಕ್ಕಾಗಿ ಸಾಲ ಮುಂತಾದ ಸರಕಾರಿ ಸಹಾಯಗಳಿಗೆ ಸಿಂಗಲ್ ವಿಂಡೋ ಸ್ಥಾಪನೆ, ಪದವೀಧರರಿಗೆ ಕೌಶಲ್ಯ ತರಬೇತಿ, ಸ್ಥಳೀಯ ಜಿಲ್ಲೆಗಳಲ್ಲಿ ಉದ್ಯಮ ಬಯಸುವ ಪದವೀಧರರಿಗೆ ಪೂರಕ ಉದ್ಯಮವಲಯದ ಸೃಷ್ಟಿಗೆ ಕ್ರಮಕ್ಕಾಗಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದರು.
ಮೂರು ಬಾರಿ ಶಾಸಕನಾಗಿ ಕೆಲಸ ಮಾಡಿ ಅನುಭವವಿರುವ ನಾನು ಪದವೀಧರರ ಸಮಸ್ಯೆಗಳ ಪರಿಹಾರಕ್ಕೆ ಕೆಲಸ ಮಾಡುತ್ತೇನೆ. ಪಕ್ಷದ ಹಿರಿಯರನ್ನು ಬಿಟ್ಟು ಬೇರೆಯವರಿಗೆ ಟಿಕೆಟ್ ನೀಡಿದ ಕಾರಣ ನಾನು ಸ್ಪರ್ಧಿಸಿದ್ದೇನೆ. ಪಕ್ಷಕ್ಕಾಗಿ ೨೫-೩೦ ವರ್ಷ ಕೆಲಸ ಮಾಡಿದ ಹಿರಿಯರಿಗೆ ಟಿಕೆಟ್ ನೀಡಿದ್ದರೆ ನಾನು ಸ್ಪರ್ಧಿಸುತ್ತಿರಲಿಲ್ಲಘಿ. ಬಿಜೆಪಿ ಟಿಕೆಟ್ ನೀಡಿರುವ ಡಾ. ಧನಂಜಯ ಸರ್ಜಿ ಅವರು ಶಿವಮೊಗ್ಗದಲ್ಲಿ ಹರ್ಷ ಕೊಲೆ ನಡೆದಾಗ ಸಂಘಪರಿವಾರದ ವಿರುದ್ಧ ನಡೆದ ಕಮ್ಯುನಿಷ್ಟರ, ನಗರ ನಕ್ಸಲೈಟ್‌ಗಳ ಶಾಂತಿಗಾಗಿ ನಡಿಗೆ ಕಾರ್ಯಕ್ರಮವನ್ನು ಭಾಗವಹಿಸಿದ್ದರು. ಅಂತವರು ಈಗ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಬಿಜೆಪಿಯ ಈ ನಿರ್ಧಾರದಿಂದ ಬೇಸರವಾಗಿದೆ ಎಂದು ಹೇಳಿದರು. ಮಾಜಿ ಕಾರ್ಪೋರೇಟರ್ ನವೀನ್‌ಚಂದ್ರಘಿ, ಡಾ. ಶಿವಶರಣ್ ಶೆಟ್ಟಿ ಉಪಸ್ಥಿತರಿದ್ದರು.