For the best experience, open
https://m.samyuktakarnataka.in
on your mobile browser.

ಬಿಜೆಪಿ ಮೇಲೆ ಗೂಬೆ ಕೂರಿಸಲು ಸಂಚು

11:07 PM May 15, 2024 IST | Samyukta Karnataka
ಬಿಜೆಪಿ ಮೇಲೆ ಗೂಬೆ ಕೂರಿಸಲು ಸಂಚು

ಬೆಂಗಳೂರು: ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣದಲ್ಲಿ ಕಾಂಗ್ರೆಸ್ ಕೈವಾಡ ಇದೆ. ಇದನ್ನು ಬಿಜೆಪಿ ಮೇಲೆ ಹೊರಿಸುವ ಪ್ರಯತ್ನವನ್ನು ಕಾಂಗ್ರೆಸ್‌ನ ಹಿರಿಯ ನಾಯಕರು ಮಾಡುತ್ತಿದ್ದಾರೆ. ತಿಮಿಂಗಿಲ ಹೊಡೆದು ತಿನ್ನಬೇಕೆ, ಬೇಡವೇ ಎಂಬುದನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬ ನಿರ್ಧಾರ ಮಾಡಲಿದೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ರೇವಣ್ಣ ಅವರನ್ನು ಕೂಡಲೇ ಬಂಧಿಸಿದ್ದರೂ, ಚಾಲಕನನ್ನು ಮಾತ್ರ ಬಂಧಿಸಿಲ್ಲ. ಎಸ್‌ಐಟಿ ಅಧಿಕಾರಿಗಳು ಪಕ್ಷಪಾತ ಧೋರಣೆಯಿಂದ ಕೆಲಸ ಮಾಡುತ್ತಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ಅವರು ಹೇಳಿದಂತೆ ಇಲ್ಲಿ ತಿಮಿಂಗಿಲವೇ ಇದೆ. ಅದನ್ನು ಬಡಿದು ತಿನ್ನಬೇಕಾ ಬೇಡವಾ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬ ತೀರ್ಮಾನಿಸಲಿದೆ. ಆದರೆ ದೇವೇಗೌಡರ ಮೂಲಕ ಇಡೀ ಒಕ್ಕಲಿಗ ಸಮುದಾಯವನ್ನು ಅಪಮಾನಿಸಬೇಕಿತ್ತೇ ಎಂದು ಜನರು ಮಾತಾಡುತ್ತಿದ್ದಾರೆ. ಆದ್ದರಿಂದ ಬಿಜೆಪಿಯ ಮೇಲೆ ಆರೋಪ ತರುವ ಪ್ರಯತ್ನ ನಡೆದಿದೆ ಎಂದರು.
ತನಿಖೆಯ ಪ್ರತಿ ಮಾಹಿತಿ ಮೊದಲು ಕಾಂಗ್ರೆಸ್ ನಾಯಕರಿಗೆ ತಲುಪುತ್ತಿದೆ. ಎಸ್‌ಐಟಿ ಅಧಿಕಾರಿಗಳು ಕಾಂಗ್ರೆಸ್ ನಾಯಕರು ಹೇಳಿದಂತೆ ಕೇಳುತ್ತಿದ್ದಾರೆ. ಆದ್ದರಿಂದ ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಆ ನಂತರ ಯಾರೆಲ್ಲ ಬಂಧನಕ್ಕೊಳಗಾಗುತ್ತಾರೆ ಎಂದು ನೋಡಲಿ ಎಂದರು.
ಕಾರು ಚಾಲಕ ಎಲ್ಲೋ ನಿಂತು ಸಂದೇಶ ಕಳುಹಿಸುತ್ತಿದ್ದಾನೆ. ಶಾಸಕ ಮಂಜು ಸೇರಿದಂತೆ ಹಲವರ ಮೇಲೆ ಆರೋಪ ಮಾಡಲಾಗಿದೆ. ಕಾಂಗ್ರೆಸ್‌ನವರೇ ಚಾಲಕನನ್ನು ಎಲ್ಲೋ ಇರಿಸಿದ್ದಾರೆ. ಹಾಸನದಲ್ಲಿ ಎಲ್ಲ ಕಡೆ ಪೆನ್‌ಡ್ರೈವ್ ಹಂಚಲಾಗಿದೆ ಎಂದ ಮೇಲೆ ಅದು ಬಿಜೆಪಿ ಕಾರ್ಯಕರ್ತರಿಗೆ ತಲುಪಿರಬಹುದು ಎಂದರು.