For the best experience, open
https://m.samyuktakarnataka.in
on your mobile browser.

ಬಿಸಿಲಿನ ಝಳಕ್ಕೆ ಜನತೆ ತತ್ತರ

12:34 AM Apr 09, 2024 IST | Samyukta Karnataka
ಬಿಸಿಲಿನ ಝಳಕ್ಕೆ ಜನತೆ ತತ್ತರ

ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ತಾಪಮಾನ ಏರುತ್ತಿದ್ದು, ಜನರು ಮನೆಯಿಂದ ಹೊರಗೆ ಬಂದರೆ ಬೆಂಕಿಯಲ್ಲಿ ನಡೆಯುತ್ತಿರುವ ಅನುಭವವಾಗುತ್ತಿದೆ. ರಾಜ್ಯದ ಅನೇಕ ಕಡೆಗಳಲ್ಲಿ ತಾಪಮಾನ ಏರುತ್ತಿರುವ ಸಮಯದಲ್ಲೇ ಇದೀಗ ಜನರಿಗೆ ಮತ್ತೊಂದು ಆತಂಕದ ಸುದ್ದಿ ಹೊರಬಿದ್ದಿದ್ದು, ಹೀಟ್ ವೇವ್ ಇನ್ನೂ ಹೆಚ್ಚಾಗುವ ಮುನ್ಸೂಚನೆಯನ್ನು ಅಧಿಕಾರಿಗಳು ನೀಡಿದ್ದಾರೆ.
ರಾಜ್ಯದ ಎಲ್ಲೆಡೆ ಹೀಟ್ ವೇವ್ ಆತಂಕ ಹೆಚ್ಚಾಗಿದೆ. ಈಗಾಗಲೇ ಬರೋಬ್ಬರಿ ೬೦೦ಕ್ಕೂ ಹೀಟ್ ವೇವ್ ಪ್ರಕರಣ ದಾಖಲಾಗಿದ್ದು, ಹೆಚ್ಚಿದ ತಾಪಮಾನದಿಂದಾಗಿ ೮೫ ವರ್ಷದ ವೃದ್ಧನಿಗೆ ಹೀಟ್ ಸ್ಟ್ರೋಕ್ ಉಂಟಾಗಿದೆ. ಮೈಸೂರು ಮೂಲದ ವೃದ್ಧನಿಗೆ ಏ. ೪ರಂದು ಸ್ಟ್ರೋಕ್ ಆಗಿದ್ದು, ಈ ಸಂಬಂಧ ರಾಜ್ಯ ಆರೋಗ್ಯ ಇಲಾಖೆಯಿಂದ ಹೀಟ್ ವೇವ್ ಮಾಹಿತಿ ನೀಡಲಾಗಿದೆ.
ಬಿಸಿ ಗಾಳಿ ವಿಷಯದಲ್ಲಿ ಬೇರೆ ಬೇರೆ ರೀತಿಯ ಪ್ರಕರಣಗಳು ದಾಖಲಾಗಿದ್ದು, ಆ ಪೈಕಿ ಬಿಸಿ ಗಾಳಿಯಿಂದಾಗಿ ಗುಳ್ಳೆಗಳಾಗುತ್ತಿರುವ ೪೦೦ ಪ್ರಕರಣಗಳು, ಬಿಸಿಯ ತಾಪಮಾನದಿಂದ ಸೆಳೆತ ಉಂಟಾಗಿರುವ ೧೨೦ ಪ್ರಕರಣ ಮತ್ತು ಶಾಖದಿಂದಾಗುವ ಬಳಲಿಕೆಯ ೮೦ಕ್ಕೂ ಹೆಚ್ಚು ಪ್ರಕರಣ ದಾಖಲಾಗಿದೆ.
ಹಿರಿಯರಿಗೆ ನಿತ್ರಾಣ ಸಮಸ್ಯೆ
ಬಿಸಿಯ ತಾಪಮಾನದಿಂದಾಗಿ ವಯಸ್ಸಾದವರಲ್ಲಿ ಹೀಟ್ ಸ್ಟ್ರೋಕ್ ಹಾಗೂ ಬಿಪಿ ಲೋ, ನಿತ್ರಾಣದಂತಹ ಸಮಸ್ಯೆ ಎದುರಾಗುತ್ತಿದ್ದು, ವಯೋವೃದ್ಧರು ಬೆಳಿಗ್ಗೆ ಮತ್ತು ಸಾಯಂಕಾಲ ಮಾತ್ರ ಹೊರಗಡೆ ಬರಬೇಕು. ಬಿಸಿಲಿನಿಂದಾಗಿ ಮಕ್ಕಳಲ್ಲಿ ಜ್ವರ, ಆಯಾಸ ಹೆಚ್ಚಾಗುತ್ತಿದೆ. ಹೀಗಾಗಿ ಮಕ್ಕಳು ಹೆಚ್ಚಾಗಿ ನೀರು ಕುಡಿಯಬೇಕು, ಗರ್ಭಿಣಿಯರು ಕೂಡ ಆದಷ್ಟು ಬಿಸಿಲಿಗೆ ಹೊರಗಡೆ ಬರದಂತೆ ವೈದ್ಯರು ಸಲಹೆ ನೀಡಿದ್ದಾರೆ.
ಭಕ್ತರಿಗೆ ನೆರಳಿನ ವ್ಯವಸ್ಥೆ
ರಾಜ್ಯದ ಅನೇಕ ಕಡೆ ಊರ ಹಬ್ಬಗಳು ಶುರುವಾಗುತ್ತವೆ. ಇದರಿಂದ ದೇವಾಲಯಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚುವುದು ವಾಡಿಕೆ. ಈ ಹಿನ್ನೆಲೆಯಲ್ಲಿ ಬಹುತೇಕ ದೇವಾಲಯಗಳ ಆವರಣದಲ್ಲಿ ಭಕ್ತರಿಗಾಗಿ ತಾತ್ಕಾಲಿಕವಾಗಿ ನೆರಳಿನ ವ್ಯವಸ್ಥೆ ಮಾಡಲಾಗುತ್ತಿದೆ. ಇದರ ಜೊತೆಗೆ ಕುಡಿಯುವ ನೀರಿನ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ.

ಡೆಂಗ್ಯೂ ಆತಂಕ
ಬಿಸಿಲಿನ ಸಂದರ್ಭದಲ್ಲಿ ಮಳೆ ಸುರಿದಲ್ಲಿ ಕಲುಷಿತ ನೀರು ಸೇವನೆಯಿಂದಾಗಿ ವಾಂತಿ ಭೇದಿ ಪ್ರಕರಣಗಳು ಹೆಚ್ಚಾಗಬಹುದು. ಮಳೆ ಬಂದಾಗ ನೀರು ಸಂಗ್ರಹಣೆಯಾದರೆ ಸೊಳ್ಳೆ ಉತ್ಪತ್ತಿಯಾಗಿ ಶಂಕಿತ ಡೆಂಗ್ಯೂ ಬರುವ ಸಾಧ್ಯತೆಯೂ ಇದ್ದು, ಬಿಸಿಲಿನ ಬೇಗೆ ಹೆಚ್ಚಳ ಮತ್ತು ಕಾಲರಾದಂತಹ ಪ್ರಕರಣ ಉಂಟಾಗಿರುವ ಹಿನ್ನೆಲೆ ಜನರಿಗೆ ಆರೋಗ್ಯ ಇಲಾಖೆ ಸೂಚನೆ ರವಾನಿಸಿದೆ.