For the best experience, open
https://m.samyuktakarnataka.in
on your mobile browser.

ಮಂಗಳೂರು ವಿವಿ ೪೨ನೇ ಘಟಿಕೋತ್ಸವ: ಮೂವರಿಗೆ ಗೌರವ ಡಾಕ್ಟರೇಟ್

07:25 PM Jun 14, 2024 IST | Samyukta Karnataka
ಮಂಗಳೂರು ವಿವಿ ೪೨ನೇ ಘಟಿಕೋತ್ಸವ  ಮೂವರಿಗೆ ಗೌರವ ಡಾಕ್ಟರೇಟ್

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ೪೨ನೆ ಘಟಿಕೋತ್ಸವ ಜೂ. ೧೫ರಂದು ನಡೆಯಲಿದ್ದು, ಡಾ.ರೊನಾಲ್ಡ್ ಕೂಲಾಸೋ, ತುಂಬೆ ಗ್ರೂಪ್ ಸ್ಥಾಪಕಾಧ್ಯಕ್ಷ ಡಾ.ತುಂಬೆ ಮೊಯ್ದೀನ್ ಹಾಗೂ ಎಂ.ಆರ್.ಜಿ. ಗ್ರೂಪ್ ಸ್ಥಾಪಕಾಧ್ಯಕ್ಷ ಕೆ.ಪ್ರಕಾಶ್ ಶೆಟ್ಟಿಯವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಲಾಗುವುದು ಎಂದು ವಿವಿಯ ಉಪ ಕುಲಪತಿ ಡಾ.ಪಿ.ಎಲ್.ಧರ್ಮ ತಿಳಿಸಿದ್ದಾರೆ.
ಮಂಗಳೂರಿನ ವಿವಿ ಕಾಲೇಜಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಈ ಬಾರಿ ಗೌರವ ಡಾಕ್ಟರೇಟ್‌ಗಾಗಿ ೧೨ ಪ್ರಸ್ತಾವನೆಗಳು ಬಂದಿದ್ದು, ಮೂರು ಹೆಸರುಗಳನ್ನು ಆಯ್ಕೆ ಮಾಡಿ ಕುಲಾಧಿಪತಿಗಳು ನೀಡಿದ್ದಾರೆ ಎಂದು ತಿಳಿಸಿದರು.
ವಿಶ್ವವಿದ್ಯಾನಿಲಯಕ್ಕೆ ವಿವಿಧ ಸಾಮಾಜಿಕ, ಶೈಕ್ಷಣಿಕ ಹಾಗೂ ಉದ್ಯಮ ಕ್ಷೇತ್ರದಲ್ಲಿ ವಿವಿಧ ರೀತಿಯಲ್ಲಿ ಸಾಧನೆ ಮಾಡಿರುವ, ಸೇವೆ ನೀಡಿರುವ ಗಣ್ಯ ವ್ಯಕ್ತಿಗಳಿಗೆ ಗೌರವ ಡಾಕ್ಟರೇಟ್‌ಗಾಗಿ ಬರುವ ಪ್ರಸ್ತಾವನೆಗಳನ್ನು ಸಿಂಡಿಕೇಟ್ ಸಭೆಯಲ್ಲಿ ದಾಖಲೆಯೊಂದಿಗೆ ಇರಿಸಿ ಸಿಂಡಿಕೇಟ್ ಸಭೆಯ ನಿರ್ಣಯದ ಪ್ರಕಾರ ಕುಲಾಧಿಪತಿಗಳಿಗೆ ರವಾನಿಸಲಾಗುತ್ತದೆ. ಅವರು ಅಂತಿಮ ಆಯ್ಕೆ ಮಾಡಿ ಕಳುಹಿಸುತ್ತಾರೆ ಎಂದು ತಿಳಿಸಿದರು.
ಜೂ. ೧೫ರಂದು ಮಧ್ಯಾಹ್ನ ೧೨.೧೫ಕ್ಕೆ ಮಂಗಳೂರು ವಿವಿ ಆವರಣದಲ್ಲಿರುವ ಮಂಗಳ ಸಭಾಂಗಣದಲ್ಲಿ ಘಟಿಕೋತ್ಸವ ನಡೆಯಲಿದೆ. ಹೊಸದಿಲ್ಲಿಯ ಅಭಿವೃದ್ಧಿಶೀಲ ರಾಷ್ಟ್ರಗಳ ಸಂಶೋಧನೆ ಮತ್ತು ಮಾಹಿತಿ ವ್ಯವಸ್ಥೆಯ ಮಹಾ ನಿರ್ದೇಶಕ ಪ್ರೊ.ಸಚಿನ್ ಚತುರ್ವೇದಿ ಮುಖ್ಯ ಅತಿಥಿಯಾಗಿ ಭಾಷಣ ಮಾಡುವರು.
ಕರ್ನಾಟಕದ ರಾಜ್ಯಪಾಲರು ಹಾಗೂ ವಿಶ್ವವಿದ್ಯಾನಿಲಯದ ಕುಲಾಧಿಪತಿಯಾಗಿರುವ ಥಾವರ್ ಚಂದ್ ಗೆಹ್ಲೋಟ್ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಿರುವರು. ರಾಜ್ಯ ಉನ್ನತ ಶಿಕ್ಷಣ ಸಚಿವ ಹಾಗೂ ವಿವಿಯ ಸಹಕುಲಾಧಿಪತಿ ಡಾ.ಎಂ.ಸಿ.ಸುಧಾಕರ್ ಈ ಬಾರಿ ಸರಕಾರದ ನಿಯಮದಂತೆ ಘಟಿಕೋತ್ಸವದಲ್ಲಿ ಐದು ನಿಮಿಷಗಳ ಕಾಲ ಮಾತನಾಡುವ ಅವಕಾಶವಿದೆ ಎಂದರು.
ಘಟಿಕೋತ್ಸವದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ೧೫೫ ಮಂದಿಗೆ ಪಿ.ಎಚ್.ಡಿ. ಡಾಕ್ಟರೇಟ್ ಪದವಿ (ಕಲೆ -೫೧, ವಿಜ್ಞಾನ -೭೩, ವಾಣಿಜ್ಯ ೨೬, ಶಿಕ್ಷಣ -೦೫) ಇವರಲ್ಲಿ ೬೦ ಮಹಿಳೆಯರು ಮತ್ತು ೯೫ ಪುರುಷರು. ಈ ಬಾರಿ ೧೮ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಹಾಗೂ ೪ ಅಂತಾರಾಷ್ಟ್ರೀಯ ಮಹಿಳಾ ವಿದ್ಯಾರ್ಥಿಗಳು ಪಿ.ಎಚ್.ಡಿ ಪದವಿ ಪಡೆಯಲಿರುವರು. ೫೮ ಚಿನ್ನದ ಪದಕ ಮತ್ತು ೫೭ ನಗದು ಬಹುಮಾನಗಳಿದ್ದು, ವಿವಿಧ ಕೋರ್ಸ್‌ಗಳ ಒಟ್ಟು ೧೬೮ರ‍್ಯಾಂಕ್‌ಗಳಲ್ಲಿ ಪ್ರಥಮ ರ‍್ಯಾಂಕ್ ಪಡೆದ ೭೨ ಮಂದಿಗೆ ರ‍್ಯಾಂಕ್ ಪ್ರಮಾಣ ಪತ್ರ ನೀಡಲಾಗುವುದು. ಇವರಲ್ಲಿ ಸ್ನಾತಕೋತ್ತರ ಪದವಿ -೫೨ ಮತ್ತು ೨೦ ಪದವೀಧರರು ಎಂದು ಹೇಳಿದರು.
ಮಂಗಳೂರು ವಿಶ್ವವಿದ್ಯಾನಿಲಯ ೨೦೨೨-೨೩ನೆ ಸಾಲಿಗೆ ನಡೆಸಿದ ವಿವಿಧ ಪರೀಕ್ಷೆಗಳಲ್ಲಿ ಒಟ್ಟು ೨೯೪೬೫ ವಿದ್ಯಾರ್ಥಿಗಳು ಹಾಜಾಗಿದ್ದು, ೨೧೩೧೯ (ಶೇ. ೭೨.೩೫) ಉತ್ತೀರ್ಣರಾಗಿದ್ದಾರೆ. ಇದರಲ್ಲಿ ಸ್ನಾತಕೋತ್ತರ ಪದವಿ ಪರೀಕ್ಷೆಗೆ ೩೨೭೭ ವಿದ್ಯಾರ್ಥಿಗಳು ಹಾಜರಾಗಿದ್ದು, ೨೦೯೪ (ಶೇ. ೯೪.೪೨) ಮಂದಿ ಉತ್ತೀರ್ಣರಾಗಿದ್ದಾರೆ ಎಂದು ತಿಳಿಸಿದರು.
ಕುಲಸಚಿವ ರಾಜುಮೊಗವೀರ, ಹಣಕಾಸು ವಿಭಾಗದ ಪ್ರೊ. ಸಂಗಪ್ಪ, ಪರೀಕ್ಷಾಂಗ ಕುಲಸಚಿವ ಡಾ. ದೇವೇಂದ್ರಪ್ಪ, ಮಂಗಳೂರು ವಿ. ವಿ. ಕಾಲೇಜು ಪ್ರಾಂಶುಪಾಲ ಗಣಪತಿ ಗೌಡ ಉಪಸ್ಥಿತರಿದ್ದರು.