ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಮಹದಾಯಿ, ಭದ್ರಾ-ಏನ್ಮಾಡಲಿದ್ದಾರೆ ಸೋಮಣ್ಣ?

03:30 AM Jun 12, 2024 IST | Samyukta Karnataka

ಬಿ.ಅರವಿಂದ
ಹುಬ್ಬಳ್ಳಿ: ಕೇಂದ್ರ ಜಲಶಕ್ತಿ ಖಾತೆಯಲ್ಲಿ ಕರ್ನಾಟಕದ ಧ್ವನಿ'ಗೆ ಸ್ಥಾನ ದೊರಕಿರುವುದರಿಂದ, ರಾಜ್ಯದ ನಾಲ್ಕು ಪ್ರಮುಖ ನೀರಾವರಿ ಯೋಜನೆಗಳ ಬಗ್ಗೆ ಮತ್ತೆ ಕನಸು ಚಿಗುರೊಡೆಯುವಂತಾಗಿದೆ. ಖಾತೆಯ ಸಹಾಯಕ ಸಚಿವರಾಗಿರುವ ವಿ.ಸೋಮಣ್ಣ ರಾಜ್ಯದ ಹಿತಾಸಕ್ತಿಯನ್ನು ಈಡೇರಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಬಹುದು ಎನ್ನುವ ನಿರೀಕ್ಷೆ ಒಡಮೂಡಿದೆ. ತ್ರಿಶಂಕುವಾಗಿರುವ ಮಹದಾಯಿ (ಕಳಸಾ ಬಂಡೂರಿ); ಮೇಕೆದಾಟು; ತುಂಗಭದ್ರಾ ಸಮಾನಾಂತರ ಜಲಾಶಯಕ್ಕೆ (ನವಲಿ) ಎದುರಾಗಿರುವ ಸಂಕಷ್ಟಗಳನ್ನು ಸೋಮಣ್ಣ ಯಾವ ರೀತಿ ಪರಿಹರಿಸುತ್ತಾರೆ? ರಾಜ್ಯದ ಈ ಅತ್ಯಗತ್ಯ ವಿಷಯಗಳನ್ನು ಪರಿಹರಿಸಲು ಹೇಗೆ ಶ್ರಮಿಸಲಿದ್ದಾರೆ? ಕೇಂದ್ರ ಸರ್ಕಾರ ಹಾಗೂ ಖಾತೆಯ ಕ್ಯಾಬಿನೆಟ್ ಸಚಿವ ಸಿ.ಆರ್.ಪಾಟೀಲರನ್ನು ಯಾವ ರೀತಿ ಮನವೊಲಿಸಲಿದ್ದಾರೆ ಎನ್ನುವ ಪ್ರಶ್ನೆಗಳು ಕೇಳಿ ಬರುತ್ತಿವೆ. ಈ ಮೂರರಷ್ಟೇ ಮಹತ್ವದ ವಿಷಯ ಮಧ್ಯ ಕರ್ನಾಟಕದ ದಾಹ ನೀಗಿಸುವ ಭದ್ರಾ ಮೇಲ್ದಂಡೆ ಯೋಜನೆಯದ್ದು. ಸ್ವತಃ ಸಚಿವ ಸೋಮಣ್ಣ ಅವರು ಆಯ್ಕೆಯಾಗಿರುವ ನೆಲದ (ತುಮಕೂರು) ಹಿತಾಸಕ್ತಿ ಕೂಡ ಇದರಲ್ಲಿ ಅಡಗಿದೆ. ೨೦೨೩ರ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗೆ ೫೩೦೦ ಕೋಟಿ ರೂಪಾಯಿ ಘೋಷಣೆ ಮಾಡಿದೆ. ಆದರೆ ಒಂದು ವರ್ಷ ಕಳೆದರೂ ಇನ್ನೂ ಹಣ ಬಿಡುಗಡೆಯಾಗಿಲ್ಲ. ಹೀಗಾಗಿ ರಾಜ್ಯದ ಈ ಪ್ರಮುಖ ನೀರಾವರಿ ಯೋಜನೆ ಗ್ರಹಣಗ್ರಸ್ತವಾದಂತಾಗಿದೆ. ಜುಲೈನಲ್ಲಿ ಮೋದಿ ೩.೦ ಸರ್ಕಾರದ ಪೂರ್ಣ ಪ್ರಮಾಣದ ಬಜೆಟ್ ಮಂಡನೆಯಾಗಲಿದ್ದು, ಅಷ್ಟರೊಳಗೆ ಭದ್ರಾ ಹಣ ಬಿಡುಗಡೆಗೆ ಸಚಿವರು ಪ್ರಭಾವ ಬೀರುವರೇ? ಮಹದಾಯಿ ವಿಷಯಕ್ಕಂತೂ ಮೊದಲ ದಿನದಿಂದ ಈತನಕ ಒಂದಿಲ್ಲೊಂದು ತಾಂತ್ರಿಕ, ಪ್ರಾಕೃತಿಕ, ನ್ಯಾಯಿಕ ಸಮಸ್ಯೆಗಳು ಎದುರಾಗುತ್ತಿವೆ. ಧಾರವಾಡದವರಾದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ವಿಷಯ ಕೊನೇ ಘಟ್ಟಕ್ಕೆ ಬಂದಿದೆ ಆದರೆ ಕರ್ನಾಟಕ ಸರ್ಕಾರದಿಂದ ಬಂಡೂರಿ ನಾಲೆ ಕುರಿತಾದ ಡಿಪಿಆರ್ ಸಲ್ಲಿಕೆಯಾಗಿಲ್ಲ ಎಂಬುದಾಗಿ ಚುನಾವಣೆ ಸಂದರ್ಭ ಭಾರಿ ಟೀಕಾಪ್ರಹಾರ ಮಾಡಿದ್ದಾರೆ. ೨೦೨೨ರಲ್ಲಿ ಜಲಶಕ್ತಿ ಇಲಾಖೆಯು ಮಹದಾಯಿ ಕುರಿತು ಕರ್ನಾಟಕದ ಪರಿಷ್ಕೃತಗೊಂಡ ವಿಸ್ತೃತ ಕ್ರಿಯಾ ಯೋಜನೆಗೆ (ಆರ್‌ಡಿಪಿಆರ್) ಅನುಮತಿ ನೀಡಿತ್ತು. ಬಸವರಾಜ ಬೊಮ್ಮಾಯಿ ಸರ್ಕಾರದ ಅವಧಿಯಲ್ಲಿ ದೊರಕಿದ್ದ ಈ ಅನುಮತಿಯನ್ನು ಕೇಂದ್ರದ್ದೇ ಪರಿಸರ ಖಾತೆ ಒಪ್ಪಿರಲಿಲ್ಲ. ಈ ಅಂಶಗಳನ್ನೂ ಕೂಡ ನೂತನ ಸಚಿವರು ಗಮನದಲ್ಲಿಟ್ಟುಕೊಳ್ಳಬೇಕಾಗಿದೆ. ಮೇಕೆದಾಟು ಮತ್ತು ತುಂಗಭದ್ರಾ ಜಲಾಶಯ ವಿಷಯಗಳು ಮಹದಾಯಿಗಿಂತ ಭಿನ್ನವಾಗಿರುವ ಅಂತಾರಾಜ್ಯ ಸಮಸ್ಯೆಗಳು. ಕ್ರಮವಾಗಿ ತಮಿಳುನಾಡು ಮತ್ತು ಆಂಧ್ರಪ್ರದೇಶದ ತಕರಾರರಿಗೆ ಒಳಪಟ್ಟಿರುವಂಥವು. ಮುಂಬರುವ ದಿನಗಳಲ್ಲಿ ರಾಜಧಾನಿಯ ಕುಡಿಯುವ ನೀರಿನ ಅಗತ್ಯ ಪೂರೈಸಲು ಮೇಕೆದಾಟು ಅಗತ್ಯ. ಹಾಗೆಯೇ ತುಂಗಭದ್ರಾ ಜಲಾಶಯದಲ್ಲಿ (ಹೊಸಪೇಟೆ) ನಿವಾರಿಸಲಾಗದಂತಹ ಹೂಳು ತುಂಬಿರುವುದರಿಂದ ನವಲಿ ಸಮಾನಾಂತರ ಜಲಾಶಯ ತಕ್ಷಣದ ಅವಶ್ಯಕತೆ. ಬೊಮ್ಮಾಯಿ ಸರ್ಕಾರ ೨೦೨೧ರಲ್ಲಿ ಪ್ರಸ್ತಾಪಿಸಿ, ಈಗಿನ ಸಿದ್ದರಾಮಯ್ಯ ಸರ್ಕಾರ ಬದ್ಧವಾಗಿರುವ ನವಲಿ ಸಮಾನಾಂತರ ಜಲಾಶಯ ಪ್ರವಾಹ ನಿರ್ವಹಣೆ ದೃಷ್ಟಿಯಿಂದಲೂ ಅನಿವಾರ್ಯ. ಸೋಮಣ್ಣ ಅವರಿಂದಾಗಿ ಕರ್ನಾಟಕದ ಈ ಬಾಕಿ ನೀರಾವರಿ ಯೋಜನೆಗಳಿಗೆ ಧ್ವನಿ ಬರಬೇಕಾಗಿದೆ. ಸಂಪುಟ ಮಂತ್ರಿ ಸಿ.ಆರ್.ಪಾಟೀಲರನ್ನುಸಹೋದ್ಯೋಗಿ ನೆಲೆ'ಯಲ್ಲಿ ಮನವೊಲಿಸಿದರೆ ಸೋಮಣ್ಣ ರಾಜ್ಯದ ಹಿತಾಸಕ್ತಿಯನ್ನು ಕಾದಂತಾಗಲಿದೆ.

Next Article