For the best experience, open
https://m.samyuktakarnataka.in
on your mobile browser.

ಮಿಜೋರಾಂನಲ್ಲಿ ಕಲ್ಲುಗಣಿ ಕುಸಿತ: ೧೬ ಕಾರ್ಮಿಕರ ಸಾವು

11:18 PM May 28, 2024 IST | Samyukta Karnataka
ಮಿಜೋರಾಂನಲ್ಲಿ ಕಲ್ಲುಗಣಿ ಕುಸಿತ  ೧೬ ಕಾರ್ಮಿಕರ ಸಾವು

ಐಜ್ವಾಲ್: ರೆಮಾಲ್ ಚಂಡಮಾರುತದ ಪರಿಣಾಮ ಉತ್ತರ ಹಾಗೂ ದಕ್ಷಿಣ ಭಾರತದಲ್ಲಿ ಮಳೆ ಪರಿಸ್ಥಿತಿ ತೀವ್ರಗೊಂಡಂತೆಯೇ ಅವಘಡಗಳು ಹೆಚ್ಚುತ್ತಿವೆ. ಮಿಜೋರಾಂ ರಾಜಧಾನಿ ಐಜ್ವಾಲ್ ಜಿಲ್ಲೆಯ ಕಲ್ಲುಗಣಿಯಲ್ಲಿ ಮಂಗಳವಾರ ಸಂಭವಿಸಿದ ವಿನಾಶಕಾರಿ ಭೂಕುಸಿತದಲ್ಲಿ ಕನಿಷ್ಠ ೧೬ ಕಾರ್ಮಿಕರು ಸಜೀವವಾಗಿ ಸಮಾಧಿಯಾಗಿ ೧೭ಕ್ಕೂ ಹೆಚ್ಚು ಜನರು ಕಣ್ಮರೆಯಾಗಿದ್ದಾರೆ. ಸ್ಥಳದಲ್ಲಿ ಎನ್‌ಡಿಆರ್‌ಎಫ್ ತಂಡಗಳು ಬಿರುಸಿನ ರಕ್ಷಣಾ ಕಾರ್ಯಾಚರಣೆ ನಡೆಸಿವೆ. ಘಟನೆ ಬೆನ್ನಲ್ಲೇ ಸುತ್ತಮುತ್ತಲ ಪ್ರದೇಶದ ಜನರನ್ನು ಸ್ಥಳಾಂತರಿಸಲಾಗಿದೆ.
ದುರಂತ ನಡೆದಿದ್ದು ಎಲ್ಲಿ ..?: ಐಜ್ವಾಲ್ ದಕ್ಷಿಣ ಹೊರವಲಯದ ಸೈರಂಗ್ ಗ್ರಾಮದಲ್ಲಿ ಜನವಸತಿ ಪ್ರದೇಶದಲ್ಲಿ ವ್ಯಾಪಕ ಮಳೆಯಿಂದಾಗಿ ಮಂಗಳವಾರ ಬೆಳಗ್ಗೆ ಆರು ಗಂಟೆ ಹೊತ್ತಿಗೆ ಗುಡ್ಡ ಕುಸಿದು ಕಲ್ಲುಕ್ವಾರಿಯ ಮೇಲೆ ಅವಶೇಷಗಳು ಬಿದ್ದಿವೆ. ಇದರಿಂದ ಗಣಿಯ ಮೂರು ಕಡೆ ಭೂಮಿ ಕುಸಿದು ಅನೇಕ ಕಾರ್ಮಿಕರು ಅಪಾಯದಲ್ಲಿ ಸಿಲುಕಿಕೊಂಡರು. ಸ್ಥಳಕ್ಕೆ ಧಾವಿಸಿದ ರಕ್ಷಣಾ ತಂಡಗಳು ಹಲವರನ್ನು ರಕ್ಷಿಸಿದರೂ ಭಾರಿ ಸಾವು-ನೋವು ತಪ್ಪಿಸಲಾಗಲಿಲ್ಲ. ಗಣಿಯ ಅವಶೇಷಗಳಿಂದ ಈವರೆಗೆ ೧೬ ಕಾರ್ಮಿಕರ ಶವಗಳನ್ನು ಹೊರತೆಗೆಯಲಾಗಿದೆ. ಕಾಣೆಯಾಗಿರುವವರಿಗಾಗಿ ಶೋಧನೆ ನಡೆದಿದೆ.
೪ ಲಕ್ಷ ರೂ. ಪರಿಹಾರ: ಘಟನೆ ಬಗ್ಗೆ ತೀವ್ರ ದಿಗ್ಭ್ರಮೆ ಸೂಚಿಸಿರು ವ ಮಿಜೋರಾಂ ಸಿಎಂ ಲಾಲ್ಡುಹೋಮ ಕಲ್ಲುಗಣಿ ದುರಂತ ಸೇರಿದಂತೆ ಮಳೆ ಸಂಬಂಧಿತ ಅವಘಡಗಳಲ್ಲಿ ಮೃತರಾದವರ ಕುಟುಂಬಗಳಿಗೆ ತಲಾ ೪ ಲಕ್ಷ ರೂ. ಪರಿಹಾರ ಪ್ರಕಟಿಸಿದ್ದಾರೆ. ತಕ್ಷಣವೇ ೨ ಲಕ್ಷ ರೂ. ಪರಿಹಾರವನ್ನು ಸಂತ್ರಸ್ತರಿಗೆ ಸಿಎಂ ಹಸ್ತಾಂತರಿಸಿದ್ದಾರೆ.