ಮುಸ್ಲಿಮರ ತುಷ್ಟೀಕರಣ ಬಿಟ್ಟರೆ ಕಾಂಗ್ರೆಸ್‌ಗೆ ಬೇರೆ ಅಜೆಂಡಾಗಳಿಲ್ಲ
ಹುಬ್ಬಳ್ಳಿ: ದೇಶ ರಕ್ಷಣೆ, ಅಭಿವೃದ್ಧಿ ನಮ್ಮ ಧ್ಯೇಯವಾದರೆ ಕಾಂಗ್ರೆಸ್ ಪಕ್ಷದವರಿಗೆ ಮುಸ್ಲಿಂರ ತುಷ್ಟೀಕರಣ ಒಂದೇ ಮುಖ್ಯವಾಗಿದೆ. ಮೊದಲಿನಿಂದಲೂ ಇದೇ ಅವರ ನೀತಿ. ಅದನ್ನು ಬಿಟ್ಟರೆ ಬೇರೆ ಅಜೆಂಡಾ ಕಾಂಗ್ರೆಸ್‌ನವರಿಗೆ ಇಲ್ಲ ಎಂದು ಕೇಂದ್ರ ಕಾನೂನು ಸಚಿವ ಅರ್ಜುನ ರಾಮ ಮೇಘವಾಲ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಇತಿಹಾಸ ತೆಗೆದು ನೋಡಿದರೆ ಈ ದೇಶದಲ್ಲಿ ಕಾಂಗ್ರೆಸ್ ಮುಸ್ಲಿಂರ ತುಷ್ಟೀಕರಣ ಯಾವ ಮಟ್ಟದಲ್ಲಿ ಮಾಡಿಕೊಂಡು ಬಂದಿದೆ ಎಂಬುದು ಗೊತ್ತಾಗುತ್ತದೆ. ಇಷ್ಟಾಗಿಯೂ ಮುಸ್ಲಿಂರು ಕೆಲ ವರ್ಷಗಳ ಹಿಂದೆ ಬಹುಜನ ಸಮಾಜ ಪಕ್ಷ, ತೃಣಮೂಲ ಕಾಂಗ್ರೆಸ್ ಹೀಗೆ ನಾನಾ ಪಕ್ಷಗಳತ್ತ ಒಂದಿಷ್ಟು ವಾಲಿದರು. ಇದರಿಂದ ವಿಚಲಿತರಾದ ಕಾಂಗ್ರೆಸ್ ನಾಯಕರು ಅಸ್ತಿತ್ವಕ್ಕಾಗಿ ಮತ್ತಷ್ಟು ತುಷ್ಟೀಕರಣ ನೀತಿಗೆ ಜೋತು ಬಿದ್ದರು. ಈಗಲೂ ಅದನ್ನು ಮುಂದುವರಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಈ ದೇಶದ ಸಂಪತ್ತಿನಲ್ಲಿ ಮುಸ್ಲಿಮರಿಗೆ ಮೊದಲ ಹಕ್ಕು ಇದೆ ಎಂದು ಯುಪಿಎ ಸರ್ಕಾರದಲ್ಲಿ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರು ಎರಡು ಬಾರಿ ಹೇಳಿದ್ದರು. ಈಗ ರಾಹುಲ್ ಗಾಂಧಿ ಹೇಳಿದ್ದಾರೆ. ಪ್ರಣಾಳಿಕೆಯಲ್ಲಿ ಘೋಷಿಸಿಕೊಂಡಿದ್ದಾರೆ. ಮುಸ್ಲಿಮರಿಗಾಗಿಯೇ ವಿಶೇಷ ಯೋಜನೆಗಳನ್ನು ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿಕೊಂಡಿದೆ ಎಂದು ಹೇಳಿದರು.