For the best experience, open
https://m.samyuktakarnataka.in
on your mobile browser.

ಮೋದಿ ಮತ್ತೆ ಪ್ರಧಾನಿಯಾದರೆ ಸರ್ವಾಧಿಕಾರ

11:35 PM Feb 17, 2024 IST | Samyukta Karnataka
ಮೋದಿ ಮತ್ತೆ ಪ್ರಧಾನಿಯಾದರೆ ಸರ್ವಾಧಿಕಾರ

ಮಂಗಳೂರು; ಬಿಜೆಪಿ ಭದ್ರಕೋಟೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಮಣ್ಣಿನಿಂದ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ರಣಕಹಳೆ ಮೊಳಗಿದೆ.
ಮಂಗಳೂರಿಗೆ ಹೊರವಲಯದ ಅಡ್ಯಾರ್ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜು ಮೈದಾನದಲ್ಲಿ ಶನಿವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ರಾಜ್ಯಮಟ್ಟದ ಬೃಹತ್ ಸಮಾವೇಶದಲ್ಲಿ ಕಳೆದ ಸುಮಾರು ೩೫ ವರ್ಷಗಳಿಂದ ಕಾಂಗ್ರೆಸ್‌ನಿಂದ ದೂರವಾಗಿರುವ ದಕ್ಷಿಣ ಕನ್ನಡ ಹಾಗೂ ಉಡುಪಿ-ಚಿಕ್ಕಮಗಳೂರು ಲೋಕಸಭಾ ಸ್ಥಾನಗಳನ್ನು ಗೆಲ್ಲುವುದರೊಂದಿಗೆ ರಾಜ್ಯದಲ್ಲಿ ೨೦ಕ್ಕೂ ಅಧಿಕ ಲೋಕಸಭಾ ಸ್ಥಾನವನ್ನು ಗೆಲ್ಲುವ ಛಲದಲ್ಲಿ ಕಾರ್ಯಕರ್ತರಲ್ಲಿ ರಣೋತ್ಸವ ತುಂಬಿತು.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಂದ ಆಗಮಿಸಿದ ಪಕ್ಷದ ಸಾವಿರಾರು ಕಾರ್ಯಕರ್ತಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಹೊಸ ಹುಮ್ಮಸ್ಸು - ಹುರುಪು ತುಂಬುವಲ್ಲಿ ಸಮಾವೇಶ ಯಶಸ್ವಿಯಾಯಿತು.
ತೆಂಗಿನ ಹಿಂಗಾರ ಅರಳಿಸುವ ಮೂಲಕ ಸಮಾವೇಶ ಉದ್ಘಾಟಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿಯವರನ್ನು ತೀವ್ರ ತರಾಟೆಗೆ ತೆಗೆದುಕೊಂಡು ದೇಶದಲ್ಲಿ ಪ್ರಧಾನಿ ಮೋದಿ ಮತ್ತೆ ಅಧಿಕಾರಕ್ಕೆ ಬಂದರೆ ಸರ್ವಾಧಿಕಾರಿ ಆಗುತ್ತಾರೆ. ಮುಂದೆ ಚುನಾವಣೆಯೇ ನಡೆಯದು ಎಂದು ಎಚ್ಚರಿಸಿದರು.
ದೇಶದಲ್ಲಿ ಸಂವಿಧಾನ, ಪ್ರಜಾಪ್ರಭುತ್ವ ಉಳಿಯ ಬೇಕಾದರೆ ಕಾಂಗ್ರೆಸ್ ಗೆಲ್ಲಬೇಕು. ಅದಕ್ಕೆ ಪಕ್ಷದ ನಾಯಕರು, ಕಾರ್ಯಕರ್ತರು ಶ್ರಮಿಸಬೇಕು. ಈಗಾಗಲೆ ನ್ಯಾಯಾಂಗ, ಇಡಿ, ಐಟಿ ಸೇರಿ ಎಲ್ಲ ಸ್ವಾಯತ್ತ ಸಂಸ್ಥೆಗಳನ್ನೂ ನಿಯಂತ್ರಣ ಮಾಡಲಾಗಿದೆ. ಮತ್ತೆ ಅಧಿಕಾರ ದೊರೆತರೆ ಮೋದಿ ಸರ್ವಾಧಿಕಾರಿಯಾಗುತ್ತಾರೆ, ಇಂತಹವರಿಗೆ ಅಧಿಕಾರ ಅಧಿಕಾರ ನೀಡಬೇಡಿ. ನಮ್ಮನ್ನು ಪೂರ್ತಿ ಮುಗಿಸಲು ಪಕ್ಷದ ಎಲ್ಲ ಅಕೌಂಟ್ ಸೀಝ್ ಮಾಡಿದರು. ಆದರೆ ಬಿಜೆಪಿ ೬ ಸಾವಿರ ಕೋಟಿ ರೂ. ಎಲೆಕ್ಷನ್ ಬಾಂಡ್‌ನ್ನು ಕಾಳಧನಿಕರಿಂದ ತೆಗೆದು ಕೊಂಡಿದ್ದಾರೆ. ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವ ಕೆಲಸ ಆಗಿದ್ದು, ರಾಜ್ಯದ ಮುಖ್ಯಮಂತ್ರಿ ದಿಲ್ಲಿಯಲ್ಲಿ ಸತ್ಯಾಗ್ರಹ ಮಾಡಬೇಕಾಯಿತು ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ ಮಾತನಾಡಿ ಮೋದಿಯವರಷ್ಟು ಸುಳ್ಳು ಹೇಳುವ ಪ್ರಧಾನಿ ಸ್ವತಂತ್ರ ಭಾರತದಲ್ಲಿ ಹಿಂದೆಂದೂ ಇರಲಿಲ್ಲ. ಮೋದಿಯವರು ಇದುವರೆಗೂ ಹೇಳಿದ್ದರಲ್ಲಿ ಯಾವುದನ್ನಾದರೂ ಈಡೇರಿಸಿದ್ದಾರಾ ? ಜನರ ಬದುಕಿಗೆ ನೆರವಾಗು, ದೇಶದ ಮಕ್ಕಳು-ಯುವಜನರ ಬದುಕು-ಭವಿಷ್ಯಕ್ಕೆ ಅನುಕೂಲ ಆಗುವ ಒಂದೇ ಒಂದನ್ನಾದರೂ ಈಡೇರಿಸಿದ್ದಾರಾ ? ಎಂದು ನೆರೆದ ಜನಸ್ತೋಮವನ್ನು ಪ್ರಶ್ನಿಸಿದರು.
ದಕ್ಷಿಣಕನ್ನಡದ ಜನತೆಗೆ ರಾಜಕೀಯ ಪ್ರಜ್ಞಾವಂತಿಕೆ ಹೆಚ್ಚಾಗಿದೆ. ಸತ್ಯ ಹೇಳುವವರು ಮತ್ತು ಸುಳ್ಳು ಹೇಳುವವರು ಯಾರು ಎನ್ನುವುದನ್ನು ಅರ್ಥ ಮಾಡಿಕೊಳ್ಳುವ ಪ್ರಜ್ಞಾವಂತಿಕೆಯೂ ಇದೆ. ಈ ಕಾರಣಕ್ಕೆ ಮಂಗಳೂರಿನಲ್ಲೇ ಮೊದಲ ಸಭೆ ಮಾಡುವ ಮೂಲಕ ಲೋಕಸಭೆ ಚುನಾವಣೆ ಪ್ರಚಾರ ಆರಂಭಿಸಿದ್ದೇವೆ ಎಂದರು.
ಎಐಸಿಸಿ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಉಸ್ತುವಾರಿ : ರಣದೀಪ್ ಸಿಂಗ್ ಸುರ್ಜೇವಾಲ ಮಾತನಾಡಿ ಇದೊಂದು ಚಾರಿತ್ರಿಕ ದಿನ, ಇದೇ ಮೈದಾನದಲ್ಲಿ ರಾಹುಲ್ ಗಾಂಧಿಯವರು ಶಕ್ತಿ ಯೋಜನೆಯನ್ನು ಘೋಷಿಸಿದ್ದನ್ನು ನೆನಪಿಸಿ ೪೯೦೦ ಕೋಟಿ ರೂ ಅನ್ಮಭಾಗ್ಯ ಹಣ ವರ್ಗಾವಣೆ. ೫೨೦೦೦ ಛಿಡಿoಡಿe ನೇರವಾಗಿ ಗ್ಯಾರಂಟಿಯಲ್ಲಿ ಹೋಗಲಿದೆ. ಇನ್ನೊಂದೆಡೆ ಮೋದಿಯ ಫೇಕ್ ಮಾದರಿ. ಇನ್ನೊಂದೆಡೆ ಕರ್ನಾಟಕದ ನೈಜ ಮಾದರಿ ಇದೆ. ಬಿಜೆಪಿ ಸಂಸದರು ೨ ಕೋಟಿ ಉದ್ಯೋಗದ ಭರವಸೆ, ಸ್ಮಾರ್ಟ್ ಸಿಟಿ,ಎಂಎಸ್ಪಿ ಭರವಸೆಗಳೆಲ್ಲ ಎಲ್ಲಿ ಹೋಗಿವೆ. ಈಗ ರಾಜ್ಯದ ಮಾದರಿಯನ್ನೇ ಕಾಪಿಮಾಡುತ್ತಿದ್ದಾರೆ. ಅದನ್ನು ಭಗ್ನ ಮಾಡೋಣ ಎಂದು ಕರೆ ನೀಡಿದರು.
ಪ್ರಸ್ತಾವಿಕವಾಗಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, ಮಂಗಳೂರು, ಉಡುಪಿ ಸ್ನೇಹಿತರು ಆತ್ಮವಿಶ್ವಾಸ ಕಳೆದುಕೊಳ್ಳಬಾರದು. ನಾವು ಕೇವಲ ೨ ಸೀಟು ಮಾತ್ರ ಗೆದ್ದಿದ್ದೇವೆ ಹೆಚ್ಚು ಗೆಲ್ಲಲಾಗುವುದಿಲ್ಲ ಎಂದು ಭಾವಿಸಬೇಡಿ. ಸದಾನಂದಗೌಡರು ಮುಖ್ಯಮಂತ್ರಿಯಾಗಿದ್ದಾಗ ನಾವು ವಿರೋಧ ಪಕ್ಷದಲ್ಲಿದ್ದರೂ ಇದೇ ಉಡುಪಿ ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬಂದಿದ್ದೆವು. ನಮ್ಮ ಗ್ಯಾರಂಟಿ ಯೋಜನೆಗಳಿಂದ ಕರಾವಳಿ, ಮಲೆನಾಡಿನ ಮಹಿಳೆಯರು ಕಾಂಗ್ರೆಸ್ ಪಕ್ಷದ ಕೈ ಹಿಡಿಯಲಿದ್ದಾರೆ. ನಮ್ಮ ಜನಪರ ಕಾರ್ಯಕ್ರಮಗಳಿಂದ ಲೋಕಸಭೆ ಚುನಾವಣೆಯಲ್ಲಿ ನಮ್ಮ ಪಕ್ಷ ರಾಜ್ಯದಲ್ಲಿ ಕನಿಷ್ಠ ೨೦ ಕ್ಷೇತ್ರಗಳಲ್ಲಿ ಗೆಲವು ಸಾಧಿಸುವ ವಿಶ್ವಾಸವಿದೆ ಎಂದರು
ಗೃಹ ಸಚಿವ ಡಾ. ಪರಮೇಶ್ವರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ, ಸಚಿವರಾದ ದಿನೇಶ್ ಗುಂಡೂರಾವ್, ಮಂಕಾಳ ವೈದ್ಯ, ಸುಧಾಕರ್, ಕೆ. ವೆಂಕಟೇಶ್, ಲಕ್ಷ್ಮೀ ಹೆಬ್ಬಾಳ್ಕರ್, ಕೆ.ಜೆ. ಜಾರ್ಜ್, ಮಧು ಬಂಗಾರಪ್ಪ, ಮಾಜಿ ಮುಖ್ಯಮಂತ್ರಿ ಡಾ.ಎಂ. ವೀರಪ್ಪ ಮೊಯ್ಲಿ, ಹಿರಿಯ ನಾಯಕ, ಆರ್.ವಿ. ದೇಶಪಾಂಡೆ, ವಿಧಾನ ಪರಿಷತ್ ಸದಸ್ಯ ಯು. ಬಿ. ವೆಂಕಟೇಶ್ ಮೊದಲಾದವರಿದ್ದರು.