ಯದುವೀರ್ ಜತೆ ವೇದಿಕೆಯಲ್ಲಿ ಪ್ರತಾಪ್
ಮೈಸೂರು: ಬಿಜೆಪಿ ಟಿಕೆಟ್ ಕೈತಪ್ಪಿದ ಬಳಿಕ ಎಲ್ಲೂ ಕಾಣಿಸಿಕೊಳ್ಳದೇ ಇದ್ದ ಸಂಸದ ಪ್ರತಾಪ್‌ಸಿಂಹ ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಸಂವಾದ ವೇಳೆ ಪಕ್ಷದ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರೊಡನೆ ವೇದಿಕೆ ಹಂಚಿಕೊಳ್ಳುವ ಮೂಲಕ ಗಮನ ಸೆಳೆದರು.
ಈ ಬಳಿಕ ಮಾತನಾಡಿ, ನಾನು ಪಕ್ಷಕ್ಕೂ ದ್ರೋಹ ಮಾಡುವುದಿಲ್ಲ. ಪಕ್ಕದಲ್ಲಿರುವವರಿಗೂ ದ್ರೋಹ ಮಾಡುವುದಿಲ್ಲ. ಇನ್ನು, ನಾವು ನಾಮಪತ್ರ ಸಲ್ಲಿಕೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಯದುವೀರ್ ರಾಜರಾಗಿ ನಾಡಿಗೆ ಪರಿಚಯ ಆಗಿದ್ದರೂ ಅಭ್ಯರ್ಥಿಯಾಗಿ ಮನವರಿಕೆ ಮಾಡಿಕೊಡಬೇಕಾಗಿದೆ ಎಂದರು.
ಬಳಿಕ, ಯದುವೀರ್ ಮಾತನಾಡಿ, ಜನತೆ ಅರಮನೆಗೆ ಬರಬೇಕಿಲ್ಲ, ನಾನೇ ಅರಮನೆಯಿಂದ ಹೊರ ಬಂದು ನಿಮ್ಮ ಬಳಿಗೆ ಬರುತ್ತೇನೆ ಎನ್ನುವ ಮೂಲಕ ಜನತೆಯ ಮನಗೆಲ್ಲಲು ಯತ್ನಿಸಿದರು.
ಅಲ್ಲದೆ, ಅಲ್ಲದೆ, ನನ್ನ ತತ್ವ ಸಿದ್ಧಾಂತಗಳು ಬಿಜೆಪಿ ಪಕ್ಷಕ್ಕೆ ಹತ್ತಿರ ಇವೆ. ನಮ್ಮ ಆಲೋಚನೆ ಹಾಗೂ ಬಿಜೆಪಿ ಆಲೋಚನೆ ಒಂದೇ ರೀತಿಯವಾಗಿರುವ ಕಾರಣ ಬಿಜೆಪಿಯನ್ನು ತಾವು ಆಯ್ಕೆ ಮಾಡಿಕೊಂಡಿದ್ದಾಗಿ ಪ್ರಶ್ನೆಯೊಂದಕ್ಕೆ ಸ್ಪಷ್ಟನೆ ನೀಡಿದರು.
ಸಂವಿಧಾನ ಬಂದ ಮೇಲೆ ರಾಜ- ಮಹರಾಜ ಅಥವಾ ಇನ್ನಾವುದೊ ಬಿರುದುಗಳು ಇಲ್ಲ. ನಾವು ಸಹ ಎಲ್ಲಾ ಪ್ರಜೆಗಳಂತೆ ಮತ್ತು ಸಾಮಾನ್ಯ ವ್ಯಕ್ತಿಗಳಂತೆ. ನನ್ನನ್ನು ಭೇಟಿ ಮಾಡಲು ಸಾರ್ವಜನಿಕರು ಅರಮನೆಗೆ ಬರುವ ಅವಶ್ಯಕತೆ ಇಲ್ಲ, ನಾನೇ ಅವರ ಬಳಿಗೆ ಹೋಗುತ್ತೇನೆ. ಅವರ ಜೊತೆ ಸಂಪರ್ಕದಲ್ಲಿರುತ್ತೇನೆ ಎಂದು ಅವರು ಹೇಳಿದರು.
ಶಾಸಕರಾದ ಟಿ.ಎಸ್. ಶ್ರೀವತ್ಸ, ನಗರ ಬಿಜೆಪಿ ಅಧ್ಯಕ್ಷ ಎಲ್. ನಾಗೇಂದ್ರ, ಎಲ್.ಆರ್. ಮಹದೇವಸ್ವಾಮಿ, ಮಾಳವಿಕ ಅವಿನಾಶ್ ಸೇರಿದಂತೆ ಹಲವರು ಹಾಜರಿದ್ದರು.