For the best experience, open
https://m.samyuktakarnataka.in
on your mobile browser.

ಯುಪಿಎಸ್‌ಸಿ: ೧೦೧೬ ಮಂದಿ ತೇರ್ಗಡೆ

11:17 PM Apr 16, 2024 IST | Samyukta Karnataka
ಯುಪಿಎಸ್‌ಸಿ  ೧೦೧೬ ಮಂದಿ ತೇರ್ಗಡೆ

ನವದೆಹಲಿ: ೨೦೨೩ನೇ ಸಾಲಿನ ಯುಪಿಎಸ್‌ಸಿ ಪರೀಕ್ಷೆಯ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು ೧೦೧೬ ಅಭ್ಯರ್ಥಿಗಳು ತೇರ್ಗಡೆಯಾಗಿದ್ದಾರೆ. ಉತ್ತರಪ್ರದೇಶದ ಲಖನೌ ನಿವಾಸಿ ಆದಿತ್ಯ ಶ್ರೀವಾಸ್ತವ, ಅನಿಮೇಶ್ ಪ್ರಧಾನ್ ಹಾಗೂ ತೆಲಂಗಾಣದ ಮೆಹಬೂಬ್ ನಗರ ಜಿಲ್ಲೆಯ ಡೋಣೂರು ಅನನ್ಯ ರೆಡ್ಡಿ ಅನುಕ್ರಮವಾಗಿ ಮೊದಲ ಮೂರು ರ‍್ಯಾಂಕ್‌ಗಳನ್ನು ಗಳಿಸಿದ್ದಾರೆ. ಕಳೆದ ವರ್ಷದ ಮೇ ೨೮ರಿಂದ ಹಾಲಿ ವರ್ಷದ ಏಪ್ರಿಲ್ ೯ವರೆಗೆ ವಿವಿಧ ಹಂತದ ಪರೀಕ್ಷೆ ನಡೆದಿತ್ತು.
ಯುಪಿಎಸ್‌ಸಿ ಪರೀಕ್ಷೆ ಹೇಗೆ ನಡೆದಿತ್ತು?:
ಕಳೆದ ವರ್ಷ ಮೇ ೨೮ಕ್ಕೆ ನಾಗರಿಕ ಸೇವೆಯ ಪ್ರಾಥಮಿಕ ಹಂತದ ಪರೀಕ್ಷೆ ನಡೆದಿದೆ. ಇದರಲ್ಲಿ ಅರ್ಜಿ ಹಾಕಿದ ೧೦,೧೬,೮೫೦ ಅಭ್ಯರ್ಥಿಗಳ ಪೈಕಿ ೫,೯೨,೧೪೧ ಮಂದಿ ಹಾಜರಾಗಿದ್ದಾರೆ.
ಪ್ರಾಥಮಿಕ ಹಂತದಲ್ಲಿ ತೇರ್ಗಡೆಯಾದ ೧೪,೬೨೪ ಮಂದಿ ೨೦೨೩ರ ಸೆಪ್ಟೆಂಬರ್‌ನಲ್ಲಿ ಅರ್ಹತಾ ಪರೀಕ್ಷೆಗೆ ಹಾಜರಾಗಿದ್ದಾರೆ. ಅವರಲ್ಲಿ ೨೮೫೫ ಮಂದಿ ತೇರ್ಗಡೆಯಾಗಿ ವ್ಯಕ್ತಿತ್ವ ಹಾಗೂ ಸಂದರ್ಶನ ಪರೀಕ್ಷೆಗೆ ಹಾಜರಾಗಿದ್ದಾರೆ. ಜನವರಿ ೨ರಿಂದ ಏಪ್ರಿಲ್ ೯ವರೆಗೆ ವ್ಯಕ್ತಿತ್ವ ಹಾಗೂ ಸಂದರ್ಶನ ಪರೀಕ್ಷೆ ನಡೆದಿತ್ತು. ಅಂತಿಮವಾಗಿ ೧೦೧೬ ಮಂದಿ ಆಯ್ಕೆಯಾಗಿದ್ದಾರೆ. ೧೦೧೬ ಅಭ್ಯರ್ಥಿಗಳಲ್ಲಿ ೬೬೪ ಪುರುಷರಾಗಿದ್ದು ೩೫೨ ಮಹಿಳೆಯರಾಗಿದ್ದಾರೆ.
ಇದಲ್ಲದೆ, ೨೫ ರ‍್ಯಾಂಕ್‌ಗಳ ವಿಜೇತರ ಪಟ್ಟಿಯಲ್ಲಿ ೧೦ ಮಹಿಳೆಯರು ಹಾಗೂ ೧೫ ಪುರುಷರಿದ್ದಾರೆ. ೨೦೨೨ನೇ ಸಾಲಿನ ಯುಪಿಎಸ್‌ಸಿ ಪರೀಕ್ಷೆಯಲ್ಲಿ ದೆಹಲಿ ವಿವಿಯ ಇಶಿತಾ ಕಿಶೋರ್ ಮೊದಲ ರ‍್ಯಾಂಕ್ ಗಳಿಸಿದ್ದರು.