For the best experience, open
https://m.samyuktakarnataka.in
on your mobile browser.

ರಸ್ತೆಯಲ್ಲಿ ನಮಾಜ್‌: ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು

06:00 PM Jun 01, 2024 IST | Samyukta Karnataka
ರಸ್ತೆಯಲ್ಲಿ ನಮಾಜ್‌  ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು

ರಸ್ತೆಯಲ್ಲಿ ನಮಾಜ್‌ನಂತಹ ಘಟನೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಇಲ್ಲದಿದ್ದರೆ ಮುಂದೆ ಸರ್ಕಾರ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾದೀತು ಎಂದು ದ.ಕ. ಸಂಸದ ನಳಿನ್‌ ಕುಮಾರ್‌ ಕಟೀಲ್‌ ಹೇಳಿದ್ದಾರೆ. ಮಂಗಳೂರಿನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಸ್ತೆಯಲ್ಲಿ ನಮಾಜ್‌ ಮಾಡಿದವರ ಮೇಲೆ ಸ್ವಯಂ ದೂರು ದಾಖಲಿಸಿದ ಪೊಲೀಸರ ಮೇಲೆಯೇ ಶಿಸ್ತು ಕ್ರಮ ಕೈಗೊಳ್ಳಲಾಗುತ್ತಿದೆ. ಸರ್ಕಾರದ ತುಷ್ಟೀಕರಣ ನೀತಿಯಿಂದಾಗಿ ಸ್ವಯಂ ದಾಖಲಾದ ಕೇಸನ್ನೇ ವಾಪಸ್‌ ಪಡೆಯಲಾಗುತ್ತಿದೆ. ಕಾಂಗ್ರೆಸ್‌ನ ಹಿಂದು ವಿರೋಧಿ ನಿಲುವು ನಿರಂತರವಾಗಿ ಮುಂದುವರಿದಿದ್ದು, ಹಿಂದುಗಳನ್ನು ವಿರೋಧಿಸುವ ಕಾರ್ಯ ನಡೆಸುತ್ತಿದೆ. ಹಾಗಾದರೆ ಸ್ವಯಂ ಕೇಸು ದಾಖಲಿಸಿದ್ದು ಯಾಕೆ, ಮತ್ತೆ ವಾಪಸ್‌ ಪಡೆದಿರುವುದು ಯಾಕೆ ಎಂದು ಪ್ರಶ್ನಿಸಿದರು.

ಶರಣ್‌ ಕೇಸ್‌ ವಾಪಸ್‌ಗೆ ಆಗ್ರಹ: ರಸ್ತೆ ನಮಾಜ್‌ ವಿರುದ್ಧ ಹೇಳಿಕೆ ನೀಡಿದ ವಿಹಿಂಪ ಮುಖಂಡ ಶರಣ್‌ ಪಂಪ್‌ವೆಲ್‌ ಮೇಲೂ ಕೇಸು ದಾಖಲಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದಲ್ಲಿ ಇಂತಹ ಘಟನೆಗಳು ಆರಂಭದಿಂದಲೂ ನಡೆಯುತ್ತಿದ್ದು, ಶರಣ್‌ ಪಂಪ್‌ವೆಲ್‌ ವಿರುದ್ಧದ ಕೇಸನ್ನು ಕೂಡಲೇ ವಾಪಸ್‌ ಪಡೆಯಬೇಕು ಎಂದು ಸಂಸದ ನಳಿನ್‌ ಕುಮಾರ್‌ ಕಟೀಲ್ ಆಗ್ರಹಿಸಿದರು.

ಕಾಂಗ್ರೆಸ್‌ ಅಶಾಂತಿ ಸೃಷ್ಟಿ: ವಿಧಾನಸೌಧದಲ್ಲಿ ಪಾಕಿಸ್ತಾನ್‌ ಜಿಂದಾಬಾದ್‌ ಹೇಳಿದವರ ಮೇಲೆ ಕೇಸಿಲ್ಲ, ಕಾಂಗ್ರೆಸ್‌ ವಿಜಯೋತ್ಸವದಲ್ಲಿ ಪಾಕಿಸ್ತಾನ್‌ ಧ್ವಜ ಹಾರಾಟದ ವಿರುದ್ಧವೂ ಕೇಸ್‌ ಇಲ್ಲ. ಇವೆಲ್ಲದರ ಪರಿಣಾಮ ಹುಬ್ಬಳ್ಳಿ ಮತ್ತಿತರ ಕಡೆಗಳಲ್ಲಿ ಶಾಂತಿಕದಡುವ ಘಟನೆಗಳು ನಡೆಯುವಂತಾಗಿದೆ. ಕಾಂಗ್ರೆಸ್‌ನ ನಿರಂತರ ತುಷ್ಟೀಕರಣ ನೀತಿಗಳೇ ಅಶಾಂತಿಯ ವಾತಾವರಣಕ್ಕೆ ಕಾರಣವಾಗಿದೆ. ರಾಜ್ಯದಲ್ಲಿ ಗೂಂಡಾ ರಾಜಕಾರಣ ನಡೆಯುತ್ತಿದ್ದು, ಕೋಮುಭಾವನೆ ಕೆರಳಿಸುವ ಮೂಲಕ ಭಯೋತ್ಪಾದನೆ ಸೃಷ್ಟಿಗೆ ಯತ್ನ ನಡೆಯುತ್ತಿದೆ ಎಂದು ಸಂಸದ ನಳಿನ್‌ ಕುಮಾರ್‌ ಆರೋಪಿಸಿದರು.

ಕೇರಳದಲ್ಲಿ ಶತ್ರು ಭೈರವಿ ಯಾಗ ಮಾಡಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರ ಆರೋಪಕ್ಕೆ ಕೇರಳ ಸರ್ಕಾರವೇ ಆಕ್ಷೇಪ ವ್ಯಕ್ತಪಡಿಸಿದೆ. ಅಲ್ಲಿನ ಸಚಿವರು ವಿವರಣೆ ನೀಡಿದ್ದು, ಕಾಂಗ್ರೆಸ್‌ನ ಐಎನ್‌ಡಿಐಎ ಮಿತ್ರಕೂಟದ ಕೇರಳ ಕಮ್ಯುನಿಸ್ಟ್‌ ಪಕ್ಷದ ಸಚಿವರೇ ಆರೋಪವನ್ನು ಅಲ್ಲಗಳೆದಿದ್ದಾರೆ. ಇದು ಡಿಕೆಶಿ ಸುಳ್ಳು ಹೇಳಿ ಜನತೆಯ ಅನುಕಂಪ ಪಡೆಯಲು ಮುಂದಾಗಿದ್ದಾರೆ ಎಂದು ನಳಿನ್‌ ಕುಮಾರ್‌ ಆರೋಪಿಸಿದರು.

ಬಂಡಾಯ ಸಾಮಾನ್ಯ: ಚುನಾವಣೆಯಿಂದ ಚುನಾವಣೆಗೆ ಬಂಡಾಯ ಸಾಮಾನ್ಯ. ಜನತೆ ಬಂಡಾಯಕ್ಕೆ ಹೆಚ್ಚು ಒತ್ತು ನೀಡುವುದಿಲ್ಲ. ಬಿಜೆಪಿಗೆ ಬೆಂಬಲ ನೀಡುತ್ತಾರೆ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲ್‌ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು. ನೈಋತ್ಯ ಪದವೀಧರ ಕ್ಷೇತ್ರದಲ್ಲಿ ಮಾಜಿ ಶಾಸಕ ರಘುಪತಿ ಭಟ್‌ ಬಂಡಾಯ ಸ್ಪರ್ಧೆ ಕುರಿತಂತೆ ಉತ್ತರಿಸಿದ ನಳಿನ್‌ ಕುಮಾರ್‌, ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಅವರು ನಿರಂತರ ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸಿದ್ದವರು. ಪಕ್ಷ ನಾಯಕರು ಎಲ್ಲ ಯೋಚನೆ ಮಾಡಿಯೇ ಡಾ.ಸರ್ಜಿ ಅವರನ್ನು ಕಣಕ್ಕೆ ಇಳಿಸಿದ್ದಾರೆ. ಈ ಹಿಂದಿನ ಬಾರಿಯ ಚುನಾವಣೆಯಲ್ಲಿ ಭೋಜೇ ಗೌಡರು ಎನ್‌ಡಿಎ ಭಾಗವಾಗಿರಲಿಲ್ಲ, ಆಗ ಬಿಜೆಪಿ ಸ್ಪರ್ಧೆ ಇತ್ತು, ಈ ಬಾರಿ ಬಿಜೆಪಿ-ಜೆಡಿಎಸ್‌ ಮೈತ್ರಿ ಕಾರಣ ಭೋಜೇ ಗೌಡರ ಗೆಲವಿಗೂ ಬಿಜೆಪಿ ಶ್ರಮಿಸುತ್ತಿದೆ ಎಂದರು.
ಶಾಸಕರಾದ ಡಾ.ಭರತ್‌ ಶೆಟ್ಟಿ, ಹರೀಶ್‌ ಪೂಂಜಾ, ವಿಧಾನ ಪರಿಷತ್‌ ಸದಸ್ಯ ಪ್ರತಾಪ್‌ಸಿಂಹ ನಾಯಕ್‌, ಮಾಜಿ ಸದಸ್ಯ ಕ್ಯಾ.ಗಣೇಶ್‌ ಕಾರ್ಣಿಕ್‌, ಮೇಯರ್‌ ಸುಧೀರ್‌ ಶೆಟ್ಟಿ ಕಣ್ಣೂರು, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್‌ ಕುಂಪಲ, ಮುಖಂಡರಾದ ಹರಿಕೃಷ್ಣ ಬಂಟ್ವಾಳ್, ಸತೀಶ್‌ ಆರ್ವಾರ್‌, ವಿಕಾಸ್‌ ಪಿ., ಮಂಜುಳಾ ರಾವ್‌, ಪೂಜಾ ಪೈ ಇದ್ದರು.