ರಾಜ್ಯಕ್ಕೆ ಅನ್ಯಾಯವಾದಾಗ ತುಟಿಬಿಚ್ಚದ ಜೋಶಿ ಸೋಲಿಸಿ
ಹುಬ್ಬಳ್ಳಿ: ಜಾತಿ, ಧರ್ಮದ ಹೆಸರಿನಲ್ಲಿ ಸಮಾಜ ಒಡೆಯುವ ಏಕೈಕ ಉದ್ದೇಶ ಹೊಂದಿರುವ ಬಿಜೆಪಿಯನ್ನು ಈ ಚುನಾವಣೆಯಲ್ಲಿ ಸೋಲಿಸಬೇಕು. ೨೦ ವರ್ಷ ಸಂಸದರಾಗಿ, ಸಚಿವರಾಗಿದ್ದುಕೊಂಡು ರಾಜ್ಯಕ್ಕೆ ಅನ್ಯಾಯವಾದಾಗಲೂ ತುಟಿಬಿಚ್ಚದ ಪ್ರಹ್ಲಾದ ಜೋಶಿಯನ್ನು ಸೋಲಿಸಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವಿನೋದ ಅಸೂಟಿ ಅವರನ್ನು ಗೆಲ್ಲಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದರು.
ಇಲ್ಲಿನ ಹಳೇಹುಬ್ಬಳ್ಳಿಯ ಡಾ.ಬಿ.ಆರ್ ಅಂಬೇಡ್ಕರ್ ಮೈದಾನದಲ್ಲಿ ಗುರುವಾರ ರಾತ್ರಿ ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ ಅವರ ಪರ ಸಾರ್ವಜನಿಕ ಪ್ರಚಾರ ಸಭೆಯಲ್ಲಿ ಮಾತನಾಡಿದರು.
ಬಿಜೆಪಿಯವರಿಗೆ ಅಭಿವೃದ್ಧಿ ಬಗ್ಗೆ ಮಾತನಾಡಲು ವಿಷಯಗಳಿಲ್ಲ. ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಪ್ರಧಾನಿ ಮೋದಿ ಅಪಹಾಸ್ಯ ಮಾಡಿದ್ದರು. ರಾಜ್ಯ ಆರ್ಥಿಕ ದಿವಾಳಿಯಾಗುತ್ತದೆ ಎಂದಿದ್ದರು. ಆದರೆ, ನಮ್ಮ ಸರ್ಕಾರವು ಕೊಟ್ಟ ಮಾತಿನಂತೆ ಗ್ಯಾರಂಟಿ ಯೋಜನೆ ಸಮರ್ಪಕ ವಾಗಿ ಅನುಷ್ಠಾನ ಮಾಡಿದೆ. ೫ ವರ್ಷ ನಮ್ಮ ಸರ್ಕಾರ ಅಧಿಕಾರದಲ್ಲಿರುವವರೆಗೂ ಗ್ಯಾರಂಟಿ ಯೋಜನೆ ಜಾರಿಯಲ್ಲಿರುತ್ತದೆ. ಇದಕ್ಕೆ ಯಾವುದೇ ಅನುಮಾನ ಬೇಡ ಎಂದು ನೆರೆದ ಜನಸಮೂಹಕ್ಕೆ ಸ್ಪಷ್ಟಪಡಿಸಿದರು.
ರಾಜ್ಯಕ್ಕೆ ಬರ ಪರಿಹಾರ ೧೮೦೦೦ ಕೋಟಿ ಬರಬೆಕಿದ್ದರೂ ಅದನ್ನು ಕೇಂದ್ರ ಸರ್ಕಾರ ಕೊಡದೇ ಕಾಲ ಹರಣ ಮಾಡಿತು. ೨೫ ಸಂಸದರು, ಧಾರವಾಡ ಕ್ಷೇತ್ರದ ಪ್ರಭಾವಿ ಸಚಿವ ಪ್ರಹ್ಲಾದ ಜೋಶಿ ಇದ್ದರೂ ಹಣ ಕೊಡಿಸುವ ಪ್ರಯತ್ನ ಮಾಡಲಿಲ್ಲ. ಇದು ರಾಜ್ಯದ ಬಿಜೆಪಿ ಸಂಸದರು, ಪ್ರಧಾನಿ ನರೇಂದ್ರ ಮೋದಿಯವರು ನಮ್ಮ ರಾಜ್ಯದ ಬಗ್ಗೆ ಹೊಂದಿದ್ದ ತಿರಸ್ಕಾರ ಭಾವನೆ. ಅಂತಿಮವಾಗಿ ಕೋರ್ಟ್ ಮೊರೆ ಹೋಗಬೇಕಾಯಿತು. ಇಂತಹವರಿಗೆ ಯಾವುದೇ ಕಾರಣಕ್ಕೂ ನಿಮ್ಮ ಮತ ಕೊಡಬೇಡಿ ಎಂದು ಕರೆ ನೀಡಿದರು.
ಧಾರವಾಡ ಕ್ಷೇತ್ರಕ್ಕೆ ಸ್ಪರ್ಧಿಸಿರುವ ವಿನೋದ ಅಸೂಟಿ ಯುವಕರಿದ್ದಾರೆ. ಬಡವರು, ರೈತರು, ಗ್ರಾಮೀಣ ಜನರು, ಕಾರ್ಮಿಕರ ಬಗ್ಗೆ ಕಾಳಜಿ ಇದೆ. ಜನರ ಕಷ್ಟದ ಅರಿವಿದೆ. ಅವರನ್ನು ಆಯ್ಕೆ ಮಾಡಿ ಲೋಕಸಭೆಗೆ ಕಳಿಸಿ. ಅವನು ಖಂಡಿತ ನಿಮ್ಮ ಸೇವೆ ಮಾಡುತ್ತಾನೆ ಎಂದು ಮನವಿ ಮಾಡಿದರು.
ಕಾನೂನು ಸಚಿವ ಎಚ್.ಕೆ ಪಾಟೀಲ ಮಾತನಾಡಿ, ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳು ಸಮಾಜದಲ್ಲಿ ಪರಿವರ್ತನೆ ತಂದಿದೆ. ಜನರ ಬದುಕು ಸುಧಾರಣೆಯಾಗಿದೆ. ಜನರು ನೆಮ್ಮದಿಯ ಬದುಕು ಕಾಣುತ್ತಿದ್ದಾರೆ. ಯುಗಾದಿ, ರಂಜಾನ್ ಹಬ್ಬವನ್ನು ಸಾಲ ಸೋಲ ಇಲ್ಲದೇ ಗ್ಯಾರಂಟಿ ಯೋಜನೆ ಸಹಾಯದಿಂದ ಸಂಭ್ರಮದಿಂದ ಮಾಡಿದ್ದಾರೆ. ಗ್ರಾಮೀಣ ಪ್ರದೇಶ, ಬಡವರು, ಮಧ್ಯಮ ವರ್ಗದವರು ವಾಸಿಸುವ ಸ್ಥಳದಲ್ಲಿ ಓಡಾಡಿದರೆ ಗ್ಯಾರಂಟಿ ಯೋಜನೆಯ ಶಕ್ತಿ ಗೊತ್ತಾಗುತ್ತದೆ ಎಂದು ಹೇಳಿದರು.
ಮೋದಿ ಗ್ಯಾರಂಟಿ ಬರೀ ಹೆಸರಿಗೆ ಮಾತ್ರ. ೧೦ ವರ್ಷದಲ್ಲಿ ಹೇಳಿದ ಯಾವುದನ್ನೂ ಮಾಡಿಲ್ಲ. ಬರೀ ಹುಸಿ ಭರವಸೆ ಎಂದು ಟೀಕಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ೧೦ ವರ್ಷ ಅಧಿಕಾರದ ಅವಧಿಯಲ್ಲಿ ದೇಶದ ಜನರಿಗೆ ಕೊಟ್ಟಿದು ಬರೀ ಸುಳ್ಳು ಭರವಸೆಗಳು. ರೈತರ ಆದಾಯ ದ್ವಿಗುಣ ಮಾಡಲಿಲ್ಲ. ಬ್ಯಾಂಕ್ ಖಾತೆಗೆ ೧೫ ಲಕ್ಷ ಬರಲಿಲ್ಲ. ಹೊರ ದೇಶದಿಂದ ಕಪ್ಪು ಹಣ ತರಲಿಲ್ಲ. ರೈತರ ಸಾಲ ಮನ್ನಾ ಮಾಡಲಿಲ್ಲ. ರೈತರ ಉದ್ಧಾರ ಮಾಡಲಿಲ್ಲ. ೨೦ ಕೋಟಿ ಉದ್ಯೋಗ ಸೃಷ್ಟಿ ಮಾಡಲಿಲ್ಲ. ಬದಲಾಗಿ ಅಂಬಾನಿ, ಅದಾನಿ ಸಾಲ ಮನ್ನಾ ಮಾಡಿದ್ದಾರೆ. ಹೀಗೆ ಏನೂ ಮಾಡದವರಿಗೆ ಮತ್ತೆ ಮಣೆ ಹಾಕಬಾರದು. ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಕರೆ ನೀಡಿದರು.
ಅಧಿಕಾರಕ್ಕೆ ಬಂದು ಕೇವಲ ೧೧ ತಿಂಗಳಾಗಿದೆ. ನಮ್ಮ ರಾಜ್ಯದ ಜನರ ಜೀವನ ಬದಲಾಣೆ ಕಂಡಿದೆ. ಪ್ರತಿ ಕುಟುಂಬಕ್ಕೂ ೫-೬ ಸಾವಿರ ಪ್ರತಿ ತಿಂಗಳು ಸರ್ಕಾರ ಕೊಡುತ್ತಿದೆ. ೬೦ ಸಾವಿರ ಕೋಟಿಯನ್ನು ಗ್ಯಾರಂಟಿ ಯೋಜನೆಗೆ ನಮ್ಮ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ವಿನಿಯೋಗಿಸುತ್ತಿದೆ. ಇಂತಹ ಜನಹಿತ ಆಡಳಿತ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ. ಕೇಂದ್ರದಲ್ಲೂ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು. ಅಭ್ಯರ್ಥಿ ವಿನೋದ ಅಸೂಟಿ ಬೆಂಬಲಿಸುವ ಮೂಲಕ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕೊಳಚೆ ನಿರ್ಮೂ¯ನೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹಾಗೂ ಪೂರ್ವ ಕ್ಷೇತ್ರದ ಶಾಸಕ ಪ್ರಸಾದ ಅಬ್ಬಯ್ಯ, ಭಾಗ್ಯಗಳ ಸರದಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ನಮ್ಮ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳು ಜನರ ಬದುಕು ಸುಧಾರಣೆ ಮಾಡುವಂತಹದು. ಪ್ರಧಾನಿ ನರೇಂದ್ರ ಮೋದಿಯವರದ್ದು ಕೋಮು ಗ್ಯಾರಂಟಿ. ಕೋಮುಗಳ ನಡುವೆ ವೈಷ್ಯಮ್ಯ ಸೃಷ್ಟಿಸಿ ರಾಜಕೀಯ ಬೇಳೆ ಬೇಯಿಸಿಕೊಂಡು ಅಧಿಕಾರಕ್ಕೆ ಬಂದವರು ದೇಶದ ಹಿತ ಕಡೆಗಣಿಸಿದ್ದಾರೆ. ದೇಶದ ಒಳಿತಿಗೆ ಮತ್ತೆ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಬೇಕು. ಜನ ಬೆಂಬಲಿಸಬೇಕು ಎಂದು ಕೋರಿದರು.
ಮೋದಿ ನೇತೃತ್ವದ ಸರ್ಕಾರ ದೇಶದ ದಲಿತರಿಗೆ ದ್ರೋಹ ಮಾಡಿದೆ. ೪೨ ಸಾವಿರ ಬ್ಯಾಕ್ ಲಾಗ್ ಹುದ್ದೆ ನೇಮಕ ಮಾಡಲಿಲ್ಲ. ದಲಿತ ಆರ್ಥಿಕ ಸುಧಾರಣೆ ಮಾಡಲಿಲ್ಲ. ಬದಲಾಗಿ ಸಾರ್ವಜನಿಕ ಉದ್ಯಮಗಳನ್ನು ಮಾರಾಟ ಮಾಡಿತು. ಶ್ರೀಮಂತರ ಸಾಲ ಮನ್ನಾ ಮಾಡಿದ್ದೇ ಸಾಧನೆ ಎಂದು ವಾಗ್ದಾಳಿ ನಡೆಸಿದರು.
ಶಾಸಕರಾದ ಎನ್.ಎಚ್ ಕೋನರಡ್ಡಿ, ಪಕ್ಷದ ಹಿರಿಯ ಮುಖಂಡ ಎಫ್.ಎಚ್ ಜಕ್ಕಪ್ಪನವರ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಜತ್ ಉಳ್ಳಾಗಡ್ಡಿಮಠ, ವಿಧಾನ ಪರಿಷತ್ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ ಸೇರಿದಂತೆ ಅನೇಕರು ಮಾತನಾಡಿದರು. ಮಾಜಿ ಸಂಸದ ಪ್ರೊ. ಐ.ಜಿ ಸನದಿ, ಮಾಜಿ ಸಚಿವ ಹಾಗೂ ಅಂಜುಮನ್ ಇಸ್ಲಾಂ ಸಂಸ್ಥೆ ಅಧ್ಯಕ್ಷ ಎ.ಎಂ. ಹಿಂಡಸಗೇರಿ, ಜಿಲ್ಲಾ ಗ್ರಾಮೀಣ ಘಟಕದ ಅಧ್ಯಕ್ಷ ಅನಿಲಕುಮಾರ ಪಾಟೀಲ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಸದಾನಂದ ಡಂಗನವರ, ಸತೀಶ ಮೆಹರವಾಡೆ, ಅಲ್ತಾಫ ಕಿತ್ತೂರ, ಪಕ್ಷದ ಹಿರಿಯ ಮುಖಂಡರಾದ ಮಹೇಂದ್ರ ಸಿಂಘಿ, ಮೋಹನ ಹಿರೇಮನಿ ಸೇರಿದಂತೆ ಅನೇಕ ಮುಖಂಡರು ವೇದಿಕೆಯಲ್ಲಿದ್ದರು. ಹು-ಧಾ ಮಹಾನಗರ ಜಿಲ್ಲಾ ಘಟಕ ಅಧ್ಯಕ್ಷ ಅಲ್ತಾಫ ಹಳ್ಳೂರ ಸ್ವಾಗತಿಸಿದರು.
ಪ್ರಧಾನಿ ಘನತೆಗೆ ತಕ್ಕ ಮಾತನಾಡಲಿ
ಪ್ರಧಾನಿ ನರೇಂದ್ರ ಮೋದಿ ಅವರು ಘನತೆಗೆ ತಕ್ಕಂತೆ ಮಾಡುತ್ತಿಲ್ಲ. ದಲಿತರ ಮೀಸಲಾತಿ ಮುಸ್ಲಿಮರಿಗೆ ಕಾಂಗ್ರೆಸ್ ಕೊಟ್ಟು ಬಿಡುತ್ತದೆ ಎಂದು ಹೇಳುವ ಮೂಲಕ ಸಂವಿಧಾನದ ಆಶಯಕ್ಕೆ ವಿರುದ್ಧವಾದ ಹೇಳಿಕೆ ನೀಡಿದ್ದಾರೆ. ಪ್ರಧಾನಿಯಾದವರು ಈ ರೀತಿ ಮಾತನಾಡಬಹುದಾ? ದೇಶದ ೧೪೦ ಕೋಟಿ ಜನರ ಮಾನ, ಪ್ರಾಣ ರಕ್ಷಣೆ ತಮ್ಮದೇ ಎಂಬುದನ್ನು ಪ್ರಧಾನಿ ಮೋದಿ ಮರೆತಿದ್ದಾರೆ. ಇಂತಹ ನಾಯಕರು ದೇಶಕ್ಕೆ ಬೇಕಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ನಿಮ್ಮ ಸೇವೆ ಬದ್ಧ, ಆಶೀರ್ವಾದ ಮಾಡಿ
ಬಡ ಜನರು, ರೈತರು, ಕಾರ್ಮಿಕರ ಕಷ್ಟದ ಬದುಕು ಏನು ಎಂಬುದು ನನನಗೆ ಅರಿವಿದೆ. ಕಾರ್ಯಕರ್ತನಾಗಿ ತಳಮಟ್ಟದಿಂದ ಕೆಲಸ ಮಾಡಿಕೊಂಡು ಬಂದಿದ್ದೇನೆ. ಮಾನ್ಯ ಮುಖ್ಯಮಂತ್ರಿಗಳು, ಜಿಲ್ಲೆಯ ನಾಯಕರ ಮಾರ್ಗದರ್ಶನದಲ್ಲಿ ನಿಮ್ಮ ಸೇವೆ ಮಾಡಲು ನಾನು ಬದ್ಧನಾಗಿದ್ದೇನೆ. ಆಶೀರ್ವಾದ ಮಾಡಿ ಎಂದು ಅಭ್ಯರ್ಥಿ ವಿನೋದ ಅಸೂಟಿ ಮನವಿ ಮಾಡಿದರು.