ರಾಜ್ಯದಲ್ಲಿ ೪೦ ಸಾವಿರ ಶಾಲಾ ಶಿಕ್ಷಕರ ಕೊರತೆ
ನರಸಿಂಹರಾವ್
ಬೆಂಗಳೂರು: ರಾಜ್ಯದಲ್ಲಿ ಶಾಲೆಗಳ ಆರಂಭಕ್ಕೆ ಕೇವಲ ಮೂರು ದಿನಗಳು ಬಾಕಿ ಇದ್ದು. ಶಾಲೆಗಳ ಆರಂಭಕ್ಕೆ ಸಕಲ ಸಿದ್ಧತೆಗಳೂ ನಡೆದಿವೆ. ೫೦ ಲಕ್ಷಕ್ಕೂ ಹೆಚ್ಚು ಮಕ್ಕಳು ಶಾಲೆಗೆ ಹೋಗಲು ಸಜ್ಜಾಗಿದ್ದಾರೆ ಆದರೆ ರಾಜ್ಯಾದ್ಯಾಂತ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಸುಮಾರು ೪೦ ಸಾವಿರಕ್ಕೂ ಹೆಚ್ಚು ಶಿಕ್ಷಕರ ಕೊರತೆ ಎದ್ದು ಕಾಣುತ್ತಿದೆ.
ಇಡೀ ರಾಜ್ಯದಲ್ಲಿ ೪೫ ಸಾವಿರ ಸರ್ಕಾರಿ ಪ್ರಾಥಮಿಕ ಶಾಲೆಗಳಿವೆ. ಕಳೆದ ಸಲ ೫೦ ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಸಂಖ್ಯೆ ಇತ್ತು. ಈ ಶೈಕ್ಷಣಿಕ ವರ್ಷದಲ್ಲಿ ಹಾಜರಾತಿ ಸಂಖ್ಯೆ ಹೆಚ್ಚಾಗಿದೆ. ಅಂದಾಜು ೬೦ ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಕೇವಲ ೧.೫೩ ಲಕ್ಷ ಶಿಕ್ಷಕರು ಮಾತ್ರ ಇದ್ದಾರೆ. ಕೊರೊನಾ ವರ್ಷಗಳ ನಂತರ ಖಾಸಗಿ ಶಾಲೆಗಳ ಮಿತಿಮೀರಿದ ಶುಲ್ಕ ಹಾಗೂ ಇನ್ನಿತರ ಕಾರಣಗಳಿಂದ ಮಧ್ಯಮ, ಕೆಳಮಧ್ಯಮ ವರ್ಗದವರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳುಹಿಸತೊಡಗಿದರು. ಕಳೆದ ಮೂರು ವರ್ಷಗಳಿಂದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಗಣನೀಯವಾಗಿ ಏರಿದೆ. ಎಲ್ಲ ತರಗತಿಗಳ ಫಲಿತಾಂಶವೂ ಹೇಳಿಕೊಳ್ಳುವ ಮಟ್ಟದಲ್ಲಿದೆ. ಆದರೆ ಈಗ ಶಾಲೆಗಳಲ್ಲಿ ಶಿಕ್ಷಕರೇ ಇಲ್ಲದಿದ್ದರೆ ಗುಣಮಟ್ಟದ ಶಿಕ್ಷಣ ನಿರೀಕ್ಷಿಸಲು ಹೇಗೆ ಸಾಧ್ಯ? ಎಂಬುದು ಪೋಷಕರ ಪ್ರಶ್ನೆಯಾಗಿದೆ.
ಕಳೆದ ಬಾರಿಯೂ ಶಿಕ್ಷಕರ ಕೊರತೆ ಇತ್ತು. ಶಾಲೆಗಳ ಆರಂಭಕ್ಕೆ ಮುಂಚೆಯೇ ೨೦ ಸಾವಿರ ಅತಿಥಿ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಾಗಿತ್ತು. ಈ ಬಾರಿ ಶಾಲೆಗಳ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದರೂ ಅತಿಥಿ ಶಿಕ್ಷಕರ ನೇಮಕವಿಲ್ಲ. ಕಲ್ಯಾಣ ಕರ್ನಾಟಕ-ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ನೂರು ವಿದ್ಯಾರ್ಥಿಗಳಿಗೆ ಕೇವಲ ಒಬ್ಬರೇ ಶಿಕ್ಷಕರು ಬೋಧನೆ ಮಾಡುವ ಪರಿಸ್ಥಿತಿ ತಲೆದೋರಿದೆ. ವರ್ಷದಿಂದ ವರ್ಷಕ್ಕೆ ನಿವೃತ್ತಿ ಹಾಗೂ ಇನ್ನಿತರ ಕಾರಣಗಳಿಂದ ಶಿಕ್ಷಕರ ಸಂಖ್ಯೆ ಇಳಿಮುಖವಾಗುತ್ತಿದ್ದು, ಖಾಲಿಯಾದ ಹುದ್ದೆಗಳನ್ನು ಸರ್ಕಾರ ತುಂಬಲು ಮುಂದಾಗುತ್ತಿಲ್ಲ. ಶಾಲೆ ಆರಂಭಕ್ಕೆ ಮುನ್ನ ೧೫ ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಶಿಕ್ಷಣ ಸಚಿವರು ಹೇಳಿದ್ದರು ಆದರೆ ಈ ವರೆಗೆ ಆ ಕೆಲಸವಾಗಿಲ್ಲ.
ಇಂದು ವಿಚಾರಣೆ
ಪ್ರತಿಬಾರಿಯೂ ಶಿಕ್ಷಕರ ವರ್ಗಾವಣೆಗೆ ಗ್ರಹಣ ಗ್ಯಾರಂಟಿ ಎನ್ನುವುದಾಗಿದೆ. ಕಳೆದ ಬಾರಿ ವರ್ಗಾವಣೆ ಸಂದರ್ಭದಲ್ಲಿ ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಗೆ ಬಡ್ತಿ ಹೊಂದಿದ ಪದವೀಧರ ಶಿಕ್ಷಕರು ವರ್ಗಾವಣೆಯಲ್ಲಿ ತಮ್ಮನ್ನು ಪರಿಗಣಿಸಬೇಕು ಎಂದು ಕಲಬುರಗಿಯಲ್ಲಿ ಕರ್ನಾಟಕ ಆಡಳಿತ ನ್ಯಾಯಮಂಡಳಿ(ಕೆಎಟಿ) ಗೆ ಮೊರೆ ಹೋಗಿದ್ದರು. ಅದರ ವಿಚಾರಣೆ ಇದೇ ೨೭ ಸೋಮವಾರ ನಡೆಯಲಿದೆ. ಎಲ್ಲವೂ ಸರಿಹೋದರೂ ಕೂಡ ವರ್ಗಾವಣೆ ಪ್ರಕ್ರಿಯೆ ಮುಗಿಸಿ ಶಿಕ್ಷಕರು ಶಾಲೆಗೆ ಹಾಜರಾಗುವುದು ಜುಲೈ ನಂತರವೇ.
ಶೀಘ್ರದಲ್ಲಿ ಕ್ರಮ
ಈಗಾಗಲೇ ಶಿಕ್ಷಣ ಇಲಾಖೆ ಸಚಿವರೊಂದಿಗೆ ಅತಿಥಿ ಶಿಕ್ಷಕರ ನೇಮಕಾತಿ ಕುರಿತಂತೆ ಚರ್ಚೆ ನಡೆಸಿ ಆರ್ಥಿಕ ಇಲಾಖೆಗೆ ಕಳುಹಿಸಿಕೊಡಲಾಗಿದೆ. ಆ ಇಲಾಖೆಯೂ ಕೂಡ ಪರಿಶೀಲನೆ ನಡೆಸಿದೆ. ಇನ್ನು ಎರಡು ಮೂರು ದಿನಗಳಲ್ಲಿ ಈ ಕುರಿತು ಕ್ರಮ ತೆಗೆದುಕೊಳ್ಳಬಹುದು ಎಂದು ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.