ರಿಷಬ್ ಶೆಟ್ಟಿಗೆ ಸ್ಪೆಶಲ್ ಜ್ಯೂರಿ ಅವಾರ್ಡ್
ಪಣಜಿ: ಗೋವಾದಲ್ಲಿ ನಡೆಯುತ್ತಿರುವ ೫೪ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕಾಂತಾರ ಕನ್ನಡ ಚಲನಚಿತ್ರಕ್ಕಾಗಿ ನಟ ರಿಷಬ್ ಶೆಟ್ಟಿ ಅವರಿಗೆ ಸ್ಪೆಶಲ್ ಜ್ಯೂರಿ ಅವಾರ್ಡ್ ನೀಡಿ ಗೌರವಿಸಲಾಗಿದೆ. ಗೋವಾ ಮುಖ್ಯಮಂತ್ರಿ ಡಾ.ಪ್ರಮೋದ ಸಾವಂತ್ ಅವರು ಗೋವಾ ರಾಜಧಾನಿ ಪಣಜಿ ಸಮೀಪದ ಬಾಂಬೋಲಿಂ ಬಳಿಯ ಶಾಮಪ್ರಸಾದ ಮುಖರ್ಜಿ ಸ್ಟೇಡಿಯಂನಲ್ಲಿ ನಡೆದ ೫೪ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಸಮಾರೋಪ ಸಮಾರಂಭದಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಿದರು.
ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಟರ್ಕಿಶ್ ನಿರ್ದೇಶಕ ರೆಗರ್ ಆಜಾದ್ ಕಾಯಾ ಅವರ "ವೆನ್ ದಿ ಸೀಡ್ಲಿಂಗ್ಸ್ ಗ್ರೋ" ಚಿತ್ರ ಪಡೆದುಕೊಂಡಿದೆ. 'ಪಂಚಾಯತ್ ಸೀಸನ್ ೨' ಇಫಿನಲ್ಲಿ ಅತ್ಯುತ್ತಮ ಒಟಿಟಿ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಡ್ರಿಫ್ಟ್ ಚಲನಚಿತ್ರಕ್ಕೆ ಐಸಿಎಫ್‌ಟಿ ಗಾಂಧಿ ಯುನೆಸ್ಕೊ ಅವಾರ್ಡ್, ಎಂಡ್ಲೆಸ್ ಬಾರ್ಡರ್ಸ್ ಚಲನಚಿತ್ರಕ್ಕೆ ಗೋಲ್ಡನ್ ಪಾಕಾಕ್ ಪ್ರಶಸ್ತಿ, ಅತ್ಯುತ್ತಮ ನಟಿ ಪ್ರಶಸ್ತಿ ಮೆಲಾನಿ ಥಿಯರ‍್ರಿಗೆ ಲಭಿಸಿದೆ. ಹಾಲಿವುಡ್ ನಟ ಮೈಕೆಲ್ ಡಗ್ಲಾಸ್ ಅವರಿಗೆ ಸತ್ಯಜಿತ್ ರೇ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಲಾಗಿದೆ. ಬ್ಲಾಗಾಸ್ ಲೆಸನ್ಸ್ ಚಿತ್ರಕ್ಕಾಗಿ ಉತ್ತಮ ನಟ ಪ್ರಶಸ್ತಿಯನ್ನು ಪೌರಿಯಾ ರಹಿಮಿ ಸ್ಯಾಮ್ ಅವರಿಗೆ ನೀಡಿ ಗೌರವಿಸಲಾಗಿದೆ. ಉತ್ತಮ ನಿರ್ದೇಶಕ ಪ್ರಶಸ್ತಿಯನ್ನು ಸ್ಟೀಫನ್ ಕೊಮಾಂಡರ್‌ಗೆ ನೀಡಲಾಗಿದೆ.
ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಸಮಾರೋಪ ಸಮಾರಂಭದಲ್ಲಿ ವಿವಿಧ ದೇಶಗಳ ಚಲನಚಿತ್ರ ಕ್ಷೇತ್ರದ ಕಲಾವಿದರು, ವಿವಿಧ ದೇಶಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.