For the best experience, open
https://m.samyuktakarnataka.in
on your mobile browser.

ರೈತರ ಸಾಲಮನ್ನಾ ಮಾಡಲು ಕೇಂದ್ರ ಅನುದಾನ ಬೇಕಿಲ್ಲ

12:18 PM Apr 26, 2024 IST | Samyukta Karnataka
ರೈತರ ಸಾಲಮನ್ನಾ ಮಾಡಲು ಕೇಂದ್ರ ಅನುದಾನ ಬೇಕಿಲ್ಲ

ಬೆಳಗಾವಿ : ರಾಜ್ಯದಲ್ಲಿ ಐದು ಗ್ಯಾರಂಟಿ ಯೋಜನೆ ಘೋಷಣೆ ಮಾಡಿದ್ದೀರಿ. ಇದರಲ್ಲಿ ರೈತರಿಗೆ ಏನು ಕಾರ್ಯಕ್ರಮ ಕೊಟ್ಟಿದ್ದೀರಿ. ರೈತರ ಸಾಲಮನ್ನಾ ಮಾಡಲು ಕೇಂದ್ರ ಅನುದಾನ ಬೇಕಿಲ್ಲ ಎಂದು ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ್ ಹೇಳಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ್ ಲೋಕಸಭಾ ಚುನಾವಣೆ ಕಾರಣಕ್ಕೆ ಕಾಂಗ್ರೆಸ್ ನಿಂದ 25 ಗ್ಯಾರಂಟಿ ನೀಡಲಾಗಿದೆ. ಅದರಲ್ಲಿ ರೈತರ ಸಾಲಮನ್ನಾ ಸೇರಿಸಲಾಗಿದೆ. ಹಾಗಿದ್ದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ. ಬರದಿಂದ ರೈತರು ತತ್ತರಿಸಿರುವುದರಿಂದ ಚುನಾವಣೆಗೆ ಮುನ್ನವೇ ಅವರ ಸಾಲಮನ್ನಾ ಮಾಡಬಹುದಿತ್ತಲ್ಲವೇ ಎಂದು ವಾಗ್ದಾಳಿ ನಡೆಸಿದರು.

ಕಳೆದೊಂದು ವರ್ಷದಿಂದ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳೇ ನಡೆಯುತ್ತಿಲ್ಲ. ಕಾಂಗ್ರೆಸ್ ಸರ್ಕಾರ ಜನರನ್ನು ವಂಚಿಸುವ ಕೆಲಸ ಮಾಡುತ್ತಿದೆ. ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಕ್ಕೆ ಶಾಸಕರಿಗೆ ಅನುದಾನ ನೀಡುತ್ತಿಲ್ಲ. ಗ್ಯಾರಂಟಿ ಯೋಜನೆಗೆ ಕಳೆದ ವರ್ಷ ರಾಜ್ಯ ಸರ್ಕಾರ ಒಂದು ಲಕ್ಷ ಕೋಟಿ ರೂ ಸಾಲ ಮಾಡಿದೆ. ಈ ಹೊರೆಯನ್ನು ಯಾರ ಮೇಲೆ ಹಾಕಬೇಕು ಎಂದುಕೊಂಡಿದ್ದೀರಿ ಎಂದು ಪ್ರಶ್ನಿಸಿದರು

ರಾಜ್ಯದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಉತ್ತಮ ಆಡಳಿತ ನೀಡಿದವರು. ನಮ್ಮ ಸರ್ಕಾರದ ಅವಧಿಯಲ್ಲಿ ರೈತರ ಸಾಲಮನ್ನಾ ಮಾಡಿದ್ದರು. ಕಾಂಗ್ರೆಸ್ನಲ್ಲಿ ಬಹುತೇಕ ಸಚಿವರು ತಮ್ಮ ಅಧಿಕಾರದ ಕುರ್ಚಿ ಭದ್ರ ಮಾಡಿಕೊಳ್ಳಲು ಸ್ಪರ್ಧೆಗಿಳಿದಿಲ್ಲ, ಬದಲಿಗೆ ತಮ್ಮ ಮಕ್ಕಳನ್ನು ಕರೆತಂದು ಚುನಾವಣೆಯಲ್ಲಿ ನಿಲ್ಲಿಸಿದ್ದಾರೆ. ಗ್ಯಾರಂಟಿ ಯೋಜನೆ ನಂಬಿ ಮತ ಹಾಕಿದ ಬಡವರು ಪರಿತಪಿಸುತ್ತಿದ್ದಾರೆ. ಗೃಹಜ್ಯೋತಿ ಹೆಸರಿನಲ್ಲಿ ಜನರಿಗೆ ಪರಿಪೂರ್ಣವಾಗಿ ವಿದ್ಯುತ್ ಉಚಿತವಾಗಿ ನೀಡದೇ ವಾರ್ಷಿಕ ಸರಾಸರಿ ಮೀಟರ್ ಲೆಕ್ಕ ಹಾಕಿ ಹೆಸರಿನಲ್ಲಿ ಮೋಸ ಮಾಡಲಾಗುತ್ತಿದೆ. ಅನ್ನಭಾಗ್ಯ ದಲ್ಲಿಯೂ ಕೇಂದ್ರ ಸರ್ಕಾರದ ಐದು ಕೆಜಿ ಅಕ್ಕಿಯನ್ನು ತಮ್ಮದೇ ಎನ್ನುವ ಮೂಲಕ ಅಲ್ಲಿಯೂ ಮೋಸ ಮಾಡುತ್ತಿದ್ದಾರೆ ಎಂದರು

ಇಷ್ಟು ದಿನ ಗ್ಯಾರಂಟಿ ಯೋಜನೆಗಳ ಪ್ರಚಾರ ಮಾಡುತ್ತಿದ್ದ ಕಾಂಗ್ರೆಸ್ ಮುಖಂಡರಿಗೆ ತಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ವಿಶ್ವಾಸ ಇಲ್ಲದಂತಾಗಿದೆ. ಪ್ರಚಾರ ಫಲ ಕೊಡದ ಕಾರಣ ಈಗ ಚೊಂಬಿನ ಜಾಹೀರಾತು ನೀಡಿ ಕೇಂದ್ರ ಸರ್ಕಾರ ಬರ ಪರಿಹಾರ ಕೊಡುತ್ತಿಲ್ಲ ಎಂದು ದೂರುತ್ತಾ ಚುನಾವಣೆಯಲ್ಲಿ ಮತ ಪಡೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಬಂಡೆಪ್ಪ ಕಾಶಂಪುರ್ ಹೇಳಿದರು.