For the best experience, open
https://m.samyuktakarnataka.in
on your mobile browser.

ಲಿಂಗಾಯತರು ಉದ್ಯೋಗ ಸೃಷ್ಟಿಕರ್ತರು

09:33 PM Feb 23, 2024 IST | Samyukta Karnataka
ಲಿಂಗಾಯತರು ಉದ್ಯೋಗ ಸೃಷ್ಟಿಕರ್ತರು

ಹುಬ್ಬಳ್ಳಿ: ವೀರಶೈವ ಲಿಂಗಾಯತರು ಉದ್ಯೋಗ ಮಾಡುವವರಲ್ಲ, ಸೃಷ್ಟಿಸುವವರು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ವಿದ್ಯಾನಗರದ ಬಿವಿಬಿ ಕಾಲೇಜು ಆವರಣದಲ್ಲಿ ಆಯೋಜಿಸಲಾಗಿರುವ `ವೀರಶೈವ ಲಿಂಗಾಯತ ಗ್ಲೋಬಲ್ ಬಿಜಿನೆಸ್ ಕಾನಕ್ಲೇವ್-೨೦೨೪' ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಾಯಕವೇ ಕೈಲಾಸ ಎಂಬ ಬಸವಣ್ಣನವರ ವಚನವನ್ನು ಜೀವನದಲ್ಲಿ ಅಳವಡಿಸಿಕೊಂಡಿರುವ ವೀರಶೈವ ಲಿಂಗಾಯತ ಸಮುದಾಯ ಮೊದಲಿಂದಲೂ ಬಲಿಷ್ಟ. ವೀರಶೈವ ಲಿಂಗಾಯತರು ಕೇವಲ ಕರ್ನಾಟಕಕ್ಕೆ ಸೀಮಿತವಾಗಿಲ್ಲ. ಜಗತ್ತಿನ ವಿವಿಧ ದೇಶಗಳಲ್ಲಿ ಉತ್ತಮ ಸ್ಥಾನ ಮಾನ, ವ್ಯಾಪಾರ, ಉದ್ದಿಮೆಗಳನ್ನು ಸ್ಥಾಪಿಸಿಕೊಂಡು ಉತ್ತಮ ಹುದ್ದೆಗಳನ್ನು ಅಲಂಕರಿಸಿದ್ದಾರೆ ಎಂದರು.
ಬಸವಣ್ಣವನರ ಅನುಭವ ಮಂಟಪದ ಮಾದರಿಯಲ್ಲೇ ನೂತನ ಸಂಸತ್ ಭವನ ನಿರ್ಮಿಸಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ಭಾರತ ಮಂಟಪ ಎಂದು ಹೆಸರಿಡಲಾಗಿದೆ. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಇಡೀ ಜಗತ್ತೇ ಕೊಂಡಾಡುತ್ತಿದೆ. ಇದೇ ಕಾರಣಕ್ಕೆ ಲಂಡನ್‌ನಲ್ಲಿ ಬಸವಣ್ಣನವರ ಮೂರ್ತಿ ಪ್ರತಿಷ್ಠಾಪಿಸಲಾಗಿದೆ ಎಂದರು.
ಆರ್ಥಿಕವಾಗಿ ಬೆಳೆಯುತ್ತಿರುವ ದೇಶಗಳ ಪಟ್ಟಿಯಲ್ಲಿ ಭಾರತ ೫ನೇ ಸ್ಥಾನ ಪಡೆದುಕೊಂಡಿದೆ. ಮುಂಬರುವ ದಿನಗಳಲ್ಲಿ ಭಾರತ ೩ನೇ ಸ್ಥಾನ ತಲುಪಲಿದ್ದು, ೨೦೪೭ರ ಹೊತ್ತಿಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಹೊರಹೊಮ್ಮಲಿದೆ. ಮುಂದಿನ ಐದು ವರ್ಷಗಳಲ್ಲಿ ದೇಶದ ಮೂಲ ಸೌಕರ್ಯ ಅಭಿವೃದ್ಧಿಗೆ ೧೦೦ ಲಕ್ಷ ಕೋಟಿಯ ಯೋಜನೆಯನ್ನು ಕೇಂದ್ರ ಸರ್ಕಾರ ಹಾಕಿಕೊಂಡಿದೆ ಎಂದು ತಿಳಿಸಿದರು.