ವಿಮಾನ ನಿಲ್ದಾಣ ಹೊಸ ಟರ್ಮಿನಲ್ಗೆ ೧೦ರಂದು ಪಿಎಂ ಶಂಕುಸ್ಥಾಪನೆ
ಹುಬ್ಬಳ್ಳಿ: ಹುಬ್ಬಳ್ಳಿ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಕಟ್ಟಡಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ ೧೦ರಂದು (ರವಿವಾರ) ಮಧ್ಯಾಹ್ನ ೧೨ಕ್ಕೆ ಭೂಮಿ ಪೂಜೆ ಮಾಡಲಿದ್ದಾರೆ.
ಉತ್ತರ ಪ್ರದೇಶದ ಅಜಂಗಢದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಲಿರುವ ಮೋದಿ, ಅಲ್ಲಿಂದಲೇ ವರ್ಚುವಲ್ ವೇದಿಕೆ ಮೂಲಕ ಹುಬ್ಬಳ್ಳಿ ಹೊಸ ಟರ್ಮಿನಲ್ ಶಂಕುಸ್ಥಾಪನೆ ಮಾಡುತ್ತಾರೆ.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಆಯ್ದ ಗಣ್ಯರು ಮತ್ತು ಮಾಧ್ಯಮದ ಸಿಬ್ಬಂದಿಗೆ ವರ್ಚುವಲ್ ಉದ್ಘಾಟನಾ ಕಾರ್ಯಕ್ರಮದ ನೇರ ಪ್ರಸಾರ ಇರಲಿದೆ ಎಂದು ಹುಬ್ಬಳ್ಳಿ ವಿಮಾನ ನಿಲ್ದಾಣದ ಅಧಿಕಾರಿಗಳು (ಟೀಂ ಹುಬ್ಬಳ್ಳಿ ಏರ್ಪೋರ್ಟ್) ತಿಳಿಸಿದ್ದಾರೆ.
ಈಗಾಗಲೇ ವರದಿಯಾಗಿರುವಂತೆ ಹುಬ್ಬಳ್ಳಿ ವಿಮಾನ ನಿಲ್ದಾಣ ಟರ್ಮಿನಲ್ಗೆ ಕೇಂದ್ರ ಸರ್ಕಾರ ಕೆಲ ತಿಂಗಳ ಹಿಂದೆ ಒಪ್ಪಿಗೆ ನೀಡಿತ್ತು. ಕಳೆದ ತಿಂಗಳು ಟೆಂಡರ್ ಪ್ರಕ್ರಿಯೆ ಕೂಡ ಪೂರ್ಣಗೊಂಡಿತ್ತು.
ಸದ್ಯದ ಟರ್ಮಿನಲ್ ದೇಸಿ ವಲಯದ ಅತ್ಯಂತ ದೊಡ್ಡ ಟರ್ಮಿನಲ್ಗಳಲ್ಲಿ ಒಂದಾಗಿದೆ. `ಎ' ದರ್ಜೆಯ ವಿಮಾನ ನಿಲ್ದಾಣವೊಂದರಲ್ಲಿ ಇರಬೇಕಾದ ಎಲ್ಲ ಸೌಕರ್ಯಗಳನ್ನೂ ಈ ಟರ್ಮಿನಲ್ ಹೊಂದಿದೆ. ಆದರೆ ಹೆಚ್ಚುತ್ತಿರುವ ಪ್ರಯಾಣಿಕರ ಬೇಡಿಕೆ ಹಾಗೂ ಭವಿಷ್ಯದಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ದರ್ಜೆಗೆ ಏರಿಸಲು ಪೂರಕವಾಗಿ ಹೊಸ ಟರ್ಮಿನಲ್ ನಿರ್ಮಾಣವಾಗುತ್ತಿದೆ. ಜೊತೆಗೆ ಹುಬ್ಬಳ್ಳಿಯ ರನ್ ವೇ ಸೇರಿದಂತೆ ವಿಮಾನ ನಿಲ್ದಾಣದ ಎಲ್ಲ ಆಯಾಮಗಳೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇವೆ. ಮುಂದೆ ಇದನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನಾಗಿ ಘೋಷಿಸಿದ ಮೇಲೆ, ಮುಂಬೈ ಏರ್ ಟ್ರಾಫಿಕ್ ಒತ್ತಡವನ್ನು ನಿವಾರಿಸಲು ಸಹಕಾರಿಯಾಗಲಿದೆ ಎಂದು ಈಗಾಗಲೇ ಕೇಂದ್ರಕ್ಕೆ ವರದಿ ರವಾನೆಯಾಗಿದೆ.
ಪ್ರತಿ ದಿನ ಸಂಜೆಯ ನಂತರವಂತೂ ಮುಂಬೈನ ಛತ್ರಪತಿ ಟರ್ಮಿನಸ್ನಲ್ಲಿ ವಿಮಾನ ಸಂಚಾರ ಒತ್ತಡ ಇನ್ನಿಲ್ಲದಂತೆ ಮಿತಿ ಮೀರಿರುತ್ತದೆ. ಅನೇಕ ಬಾರಿ ಲ್ಯಾಂಡಿಂಗ್ ವಿಳಂಬದಿಂದಾಗಿ ಎರಡು ರೌಂಡ್ಗಳಿಗಿಂತ ಹೆಚ್ಚು ಸುತ್ತುಗಳನ್ನು ವಿಮಾನಗಳು ಆಕಾಶದಲ್ಲಿ ಹೊಡೆಯಬೇಕಾಗಿದೆ ಎಂಬುದಾಗಿಯೂ ಕೇಂದ್ರ ನಾಗರಿಕ ವಿಮಾನಯಾನ ಖಾತೆಯ ಬಳಿ ಅಹವಾಲುಗಳಿವೆ. ಸಮೀಪದ ಹುಬ್ಬಳ್ಳಿಯನ್ನು ಅಂತಾರಾಷ್ಟ್ರೀಯ ನಿಲ್ದಾಣವನ್ನಾಗಿ ಘೋಷಣೆ ಮಾಡಿದರೆ ಈ ಒತ್ತಡವನ್ನು ನಿರ್ವಹಿಸುವುದಕ್ಕೆ ಯೋಜನೆ ರೂಪಿಸುವುದು ಸುಲಭವಾಗಲಿದೆ. ಹಾಗೆಯೇ ಉತ್ತರ, ಮಧ್ಯ ಮತ್ತು ಕಲ್ಯಾಣ ಕರ್ನಾಟಕದ ವಿಶಾಲ ಪ್ರದೇಶಗಳ ಅಭಿವೃದ್ಧಿಗೆ ಪೂರಕವಾದ ಅಂತಾರಾಷ್ಟ್ರೀಯ ಸಂಚಾರ- ಆರ್ಥಿಕತೆ ಹೆಚ್ಚಲಿವೆ.ಈ ಎಲ್ಲ ಹಿನ್ನೆಲೆಯಲ್ಲಿ ಹೊಸ ಟರ್ಮಿನಲ್ಗೆ ಕೇಂದ್ರ ಸಮ್ಮತಿಸಿದೆ.
ಕೇಂದ್ರ ಸಂಸದೀಯ ವ್ಯವಹಾರ ಸಚಿವ ಪ್ರಲ್ಹಾದ ಜೋಶಿ ಅವರ ವಿಶೇಷ ಪ್ರಯತ್ನದಿಂದಾಗಿ ಹೊಸ ಟರ್ಮಿನಲ್ ಮಂಜೂರಾಗಿದ್ದು, ಪ್ರಧಾನಿ ಶಂಕುಸ್ಥಾಪನೆ ನಂತರ ಕಾಮಗಾರಿ ಆರಂಭವಾಗಲಿದೆ.