ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

`ಶತಮಾನ ಕಂಡ ಕೆರೆಗಳು ಊರಿನ ಆಸ್ತಿ' ಉಳಿಸಿ

05:55 AM May 28, 2024 IST | Samyukta Karnataka

ಡಾ. ವಿಶ್ವನಾಥ ಕೋಟಿ
ಧಾರವಾಡ: "ಕೆರೆ ಊರಿನ ಆಸ್ತಿ' ಎಂಬುದನ್ನು ಮನಗಂಡು ಶತಮಾನ ಕಂಡ ಕೆಲಗೇರಿ ಕೆರೆಯಲ್ಲಿ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳ ಸದಸ್ಯರು ನಡೆಸಿದ ಶ್ರಮದಾನ ನಗರದ ಇತರ ಕೆರೆಗಳ ಪುನರುಜ್ಜೀವನಕ್ಕೆ ಸ್ಫೂರ್ತಿ ನೀಡಿದೆ.
ಜಿಲ್ಲಾಡಳಿತ, ಮಹಾನಗರ ಪಾಲಿಕೆಯೊಂದಿಗೆ ಕೈ ಜೋಡಿಸಿದರೆ ಕೆರೆಗಳ ಸ್ವಚ್ಛತೆ ತ್ವರಿತ ಗತಿಯಲ್ಲಿ ನಡೆಯುವುದರೊಂದಿಗೆ ಜನರಲ್ಲಿ ಜಾಗೃತಿ ಮೂಡಲು ಸಾಧ್ಯವಾಗುತ್ತದೆ.
ಧಾರವಾಡದಲ್ಲಿ ಕೆಲಗೇರಿ ಕೆರೆಯಂತೆ ನವಲೂರ ಕೆರೆ, ಕೋಳಿಕೆರೆ, ಸಾಧನಕೇರಿ ಕೆರೆ ದೊಡ್ಡ ಕೆರೆಗಳಾಗಿವೆ. ಅದರಂತೆ ಹುಬ್ಬಳ್ಳಿಯಲ್ಲಿ ತೋಳನಕೆರೆ, ಉಣಕಲ್ ಕೆರೆ ದೊಡ್ಡ ಕೆರೆಗಳು. ಬೆಂಗಳೂರಿನ ನಂತರ ರಾಜ್ಯದ ಅತಿ ದೊಡ್ಡ ನಗರವೆಂಬ ಖ್ಯಾತಿ ಪಡೆದ ಹುಬ್ಬಳ್ಳಿ-ಧಾರವಾಡ ತ್ವರಿತ ಗತಿಯಲ್ಲಿ ಬೆಳೆಯುತ್ತಿದೆ. ಬಡಾವಣೆಗಳು ಕೆರೆಗಳನ್ನು ಆಪೋಶನ ತೆಗೆದುಕೊಳ್ಳುತ್ತಿವೆ. ಧಾರವಾಡದ ಎಮ್ಮಿಕೆರೆಯಲ್ಲಿ ಕಾಂಪ್ಲೆಕ್ಸ್ ಹಾಗೂ ಮನೆಗಳು ತಲೆ ಎತ್ತಿದ್ದರೆ, ಹಾಲಗೇರಿ ತರಕಾರಿ ಮಾರುಕಟ್ಟೆಯಾಗಿದೆ. ಹುಬ್ಬಳ್ಳಿಯ ತಿರಕಾರಾಮನ ಕೆರೆ ಐಟಿ ಪಾರ್ಕ್, ಈಜುಗೊಳ ಸಂಕಿರ್ಣವಾಗಿದೆ. ಉಳಿದ ಕೆರೆಗಳನ್ನಾದರೂ ಉಳಿಸಿಕೊಳ್ಳುವುದು ಮುಖ್ಯ. ಸಾರ್ವಜನಿಕರ ಸಹಕಾರ ಇಲ್ಲದಿದ್ದರೆ ಕೆರೆಗಳ ಸ್ವಚ್ಛತಾ ಕಾರ್ಯ ಸಫಲವಾಗುವುದಿಲ್ಲ.
ಕೆರೆಗಳಿಗೆ ಚರಂಡಿ ತ್ಯಾಜ್ಯ ಸೇರದಂತೆ ತಡೆಯುವುದು ಅವಶ್ಯಕವಾಗಿದೆ. ಈ ಕಾರ್ಯವನ್ನು ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಮಾಡಬೇಕು. ಕೆರೆಗಳಿಗೆ ಚರಂಡಿ ನೀರು ಸೇರುತ್ತಿದ್ದರೆ ಕೆರೆಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಸಾಧ್ಯವಿಲ್ಲ. ಕೆರೆಗೆ ಕೇವಲ ಮಳೆ ನೀರು ಹರಿದು ಬರುವಂತೆ ಕ್ರಮ ಕೈಗೊಳ್ಳುವುದರೊಂದಿಗೆ ಕೆರೆಯ ದಡದಲ್ಲಿ ಉದ್ಯಾನ ನಿರ್ಮಿಸಿದರೆ ಕೆರೆಗಳನ್ನು ಸ್ವಚ್ಛವಾಗಿಟ್ಟುಕೊಳ್ಳಲು ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಸಾಧನಕೇರಿ ಕೆರೆಯ ದಡದಲ್ಲಿ ಸುಂದರ ಉದ್ಯಾನವನ್ನೇನೋ ನಿರ್ಮಿಸಲಾಯಿತು. ಆದರೆ ಕೆರೆಗೆ ತ್ಯಾಜ್ಯ ಸೇರುವುದನ್ನು ತಡೆಯದಿದ್ದರಿಂದ ಕೆರೆ ಕೊಳಚೆಮಯವಾಗಿದೆ. ಇನ್ನೊಂದೆಡೆ ಸುತ್ತಮುತ್ತಲಿನ ಬಡಾವಣೆಗಳ ಜನರು ತ್ಯಾಜ್ಯವನ್ನು ಕೆರೆಗೆ ಹಾಕುವುದರಿಂದ ಕೆರೆಯ ನೀರು ಬಳಕೆಗೆ ಅಯೋಗ್ಯವಾಗುತ್ತಿದೆ. ಕೆರೆಗಳು ಜಲಕಳೆಮಯವಾಗುತ್ತಿವೆ. ಕೆರೆಯಲ್ಲಿ ಜಲಕಳೆ ತುಂಬಿದ್ದರೆ, ದಡದಲ್ಲಿ ತ್ಯಾಜ್ಯ ತುಂಬಿರುತ್ತದೆ.
ಹಲವು ಕೆರೆಗಳ ಹೂಳೆತ್ತುವ ಕಾರ್ಯ ನಡೆದಿದ್ದು, ಇದೇ ಸಂದರ್ಭದಲ್ಲಿ ಕೆರೆಯ ದಡದಲ್ಲಿಯೂ ಸ್ವಚ್ಛತಾ ಕಾರ್ಯ ನಡೆಯುವುದು ಸೂಕ್ತ. ಕೆರೆಗಳನ್ನು ರಕ್ಷಿಸಲು ನಿಯಮಿತ ಶ್ರಮದಾನ ಅಗತ್ಯ. ಪರಿಸರ ರಕ್ಷಣೆಗಾಗಿಯೇ ಆರಂಭಗೊಂಡ ಸಂಘ ಸಂಸ್ಥೆಗಳು ಇತರ ಕೆರೆಗಳ ಸ್ವಚ್ಛತೆ ಬಗ್ಗೆ ಕೂಡ ಗಮನ ಹರಿಸುವುದು ಅವಶ್ಯಕವಾಗಿದೆ. ಕಾಲೇಜುಗಳು ಎನ್‌ಎಸ್‌ಎಸ್ ಶಿಬಿರಗಳನ್ನು ಕೆರೆಗಳ ಸ್ವಚ್ಛತೆಗಾಗಿ ಮಾಡಿದರೆ ಅನುಕೂಲವಾಗುತ್ತದೆ. ಕೆರೆಗಳ ರಕ್ಷಣೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ.
ಕೆರೆಗಳಿಂದ ಯಾವುದೇ ಪ್ರಯೋಜನವಿಲ್ಲ ಎಂದೇ ಹಲವರು ಭಾವಿಸಿದ್ದಾರೆ. ಆದರೆ ಕೆರೆಗಳ ಅಂತರ್ಜಲ ಹೆಚ್ಚಿಸುವ ಮೂಲಗಳು. ಕೆರೆಗಳ ಸುತ್ತಮುತ್ತ ಅಂತರ್ಜಲ ಮೇಲ್ಮಟ್ಟದಲ್ಲಿರುತ್ತದೆ ಎಂಬುದನ್ನು ಮನಗಾಣಬೇಕಿದೆ. ಶ್ರಮದಾನ ಅಭಿಯಾನ ನಿರಂತರವಾಗಿ ನಡೆಯಬೇಕು.

ಸಮುದಾಯ ಆಧಾರಿತ ಸಹಭಾಗಿತ್ವದ ಜಲ ಸಂರಕ್ಷಣೆ
ಸರಕಾರ ಹಾಗೂ ಸಮುದಾಯ ಕೈಜೋಡಿಸಿದರೆ ಮಾತ್ರ ಕೆರೆಗಳ ಅಭಿವೃದ್ಧಿ ಸಾಧ್ಯವಾಗುತ್ತದೆ. ಸರಕಾರ ಇಲಾಖೆಗಳ ಅಧಿಕಾರಿಗಳು, ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು, ಪರಿಸರ ಕಾರ್ಯಕರ್ತರು, ಸಮುದಾಯ ಮುಖಂಡರ ದಕ್ಷ ತಂಡ ರಚನೆಯಾಗಬೇಕು. ಬಲಿಷ್ಠ ಸಂಘಟನೆ ಇದ್ದರೆ ಯಾವುದೇ ಕಾರ್ಯ ಯಶಸ್ವಿಯಾಗಲು ಸಾಧ್ಯ. ಪರಿಸರ ಹೋರಾಟಗಾರರೆಂದು ಫೋಟೊಕ್ಕೆ ಪೋಸ್ ನೀಡಲು ಸೀಮಿತರಾಗಿ ಪರಿಸರ ಚಳವಳಿಯ ಹೆಸರು ಹಾಳು ಮಾಡುವವರಿಂದ ಯಾವುದೇ ಪ್ರಯೋಜನವಿಲ್ಲ. ಇದು ಒಂದು ವಾರಕ್ಕೆ ಸೀಮಿತವಾಗದೇ ಕೆರೆಗಳ ಅಭವೃದ್ಧಿ ನಿರಂತರ ಪ್ರಕ್ರಿಯೆಯಾಗಬೇಕು. ಸುರಕ್ಷಾ ಸಾಧನಗಳನ್ನು ಬಳಕೆ ಮಾಡಿಕೊಂಡು ಮುಂಜಾಗ್ರತಾ ಕ್ರಮ ಕೈಗೊಂಡು ಶ್ರಮದಾನ ನಡೆಸಬೇಕು. ಕೆರೆಯ ಮಾಲಿಕತ್ವ ಯಾರದೆಂಬದನ್ನು ತಿಳಿದುಕೊಂಡು ಅನುಮತಿ ಪಡೆದುಕೊಂಡು ಕಾರ್ಯ ಕೈಗೊಳ್ಳುವುದು ಸೂಕ್ತ. ಇದರೊಂದಿಗೆ ಕೆರೆ ಅಭಿವೃದ್ಧಿ ಎಲ್ಲರ ಹೊಣೆ ಎಂಬ ಜಾಗೃತಿ ಜನರಲ್ಲಿ ಮೂಡುವುದು ಅವಶ್ಯಕವಾಗಿದೆ. ಕೆಲಗೇರಿ ಕೆರೆಯ ಶ್ರಮದಾನದಿಂದ ಸ್ಫೂರ್ತಿ ಪಡೆದು ಇತರ ಕೆರೆಗಳ ಅಭಿವೃದ್ಧಿಗೆ ಜನರು ಕಾರ್ಯೋನ್ಮುಖರಾಗಬೇಕು. ಕೆರೆ ಸಂರಕ್ಷಣೆ ಅಭಿಯಾನ ನಿರಂತರ ನಡೆಯಬೇಕು.

- ಡಾ. ರಾಜೇಂದ್ರ ಪೊದ್ದಾರ, ಜಲ ಮತ್ತು ನೆಲ ನಿರ್ವಹಣಾ ಸಂಸ್ಥೆ (ವಾಲ್ಮಿ) ನಿರ್ದೇಶಕರು.

Next Article