For the best experience, open
https://m.samyuktakarnataka.in
on your mobile browser.

ಶವ ಸಂಸ್ಕಾರದಲ್ಲಿ ಅಮಾನವೀಯ ಘಟನೆ

08:43 PM Jun 11, 2024 IST | Samyukta Karnataka
ಶವ ಸಂಸ್ಕಾರದಲ್ಲಿ ಅಮಾನವೀಯ ಘಟನೆ

ರಬಕವಿ-ಬನಹಟ್ಟಿ: ಶವ ಸಂಸ್ಕಾರದಲ್ಲಿ ಕೋವಿಡ್ ಸಂದರ್ಭ ಅಮಾನವೀಯ ಘಟನೆಗಳನ್ನು ನೋಡಿದ್ದೇವೆ. ಮಂಗಳವಾರ ಇಲ್ಲೊಂದು ಇಡೀ ಸಮಾಜಕ್ಕೆ ನೋವಾಗುವಂಥಹ ಕಾರ್ಯ ನಡೆದು ಕೊನೆಗೂ ಸಮಸ್ತ ದೈವ ಮಂಡಳಿಯ ಮಾನವೀಯತೆಯಿಂದ ಅಂತ್ಯ ಸಂಸ್ಕಾರ ಮಾಡಿದ ಘಟನೆ ನಡೆದಿದೆ.
ಆಗಿದ್ದೇನು: ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿಯ ಗುರು ಕಿತ್ತೂರ(೫೧) ಎಂಬಾತ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ. ಬೆಳಗಾವಿಯ ಖಾಸಗಿ ಆಸ್ಪತ್ರೆಯೊಂದಕ್ಕೆ ಸ್ವತಃ ತೆರಳಿದಾಗ, ಶಸ್ತ್ರಕ್ರಿಯೆ ಮಾಡಬೇಕು. ಸರ್ಕಾರದ ಯೋಜನೆಯಿಂದ ಉಚಿತವಾಗಿ ಮಾಡಲಾಗುವದೆಂದೂ ತಿಳಿಸಿದ್ದರು. ಇದಕ್ಕೆ ಕುಟುಂಬದವರ ಸಮರ್ಪಕ ಸಹಕಾರವಿಲ್ಲದ ಕಾರಣ ಚಿಕಿತ್ಸೆ ಗಗನಕುಸುಮವಾಗಿತ್ತು. ಕಳೆದೆರಡು ತಿಂಗಳಿಂದ ತನ್ನ ಹೆಂಡತಿಯ ಮನೆಯಲ್ಲಿದ್ದ ಮೃತ ಗುರು ಮನೆ ಬಿಟ್ಟು ಜಿಗುಪ್ಸೆಗೊಂಡಿದ್ದ.
ನಗರದ ವೈಭವ ಚಿತ್ರಮಂದಿರ ಬಳಿಯ ರಸ್ತೆ ಪಕ್ಕ ಮೃತನಾಗಿರುವದನ್ನು ಕಂಡು ಓಣಿಯ ಜನ ಮನೆಗೆ ಶವವನ್ನು ತಂದಾಗ, ಮನೆಯವರು ಅಮಾನವೀಯ ಕಾರ್ಯದಿಂದ ಮನೆಯೊಳಗೆ ಶವ ಕೂಡ್ರಿಸಬೇಡಿ ಎಂದಿದ್ದಾರೆ. ಇದರಿಂದ ಬೇಸತ್ತ ಸಹಾಯಕರು ಅನಿವಾರ್ಯವಾಗಿ ಮನೆ ಮುಂದಿರುವ ವಿದ್ಯುತ್ ಕಂಬ ಬಳಿ ಕೂಡಿಸುವಂತಾಯಿತು.
ಮಾನವೀಯತೆ ಮೆರೆದ `ಸಮಸ್ತ ದೈವ’: ಇದನ್ನು ಗಮನಿಸಿದ ಸೋಮವಾರ ಪೇಟೆ ಸಮಸ್ತ ದೈವ ಮಂಡಳಿಯ ಹಿರಿಯರು ಕೊನೆಗೂ ಕುಟುಂಬಸ್ಥರನ್ನು ಮನವೊಲಿಸಿ ಕೆಲ ಹೊತ್ತಿನ ನಂತರ ಶವವನ್ನು ಮನೆಯಲ್ಲಿ ಕೂಡ್ರಿಸುವ ವ್ಯವಸ್ಥೆ ಮಾಡಿ ಅಂತ್ಯ ಸಂಸ್ಕಾರ ಮಾಡಿದ ಘಟನೆ ನಡೆದಿದೆ.