ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಶಶಿ ಸಾಲಿ `ಕ್ಲಿಕ್' ಚಮತ್ಕಾರ ಪ್ರತಿಭೆ

02:16 PM May 18, 2024 IST | Samyukta Karnataka

ಫೊಟೊಗ್ರಾಫರ್ ಮತ್ತು ಲೇಖಕ ಶಶಿ ಸಾಲಿ, ಹಲವು ಅಸಾಧ್ಯ- ಅಗಾಧ ಶಕ್ತಿಮೂಲಗಳ, ಅಂತಃಸ್ರೋತಗಳ ಪ್ರತಿಭಾವಂತ. ತನ್ನಲ್ಲಿ ಈ ಅಂಶಗಳಿವೆ ಎಂಬ ಅರಿವು ಸ್ವತಃ ಶಶಿ ಸಾಲಿಗೇ ಇಲ್ಲ. ನಾನು ಸಹ ಅವನನ್ನು ಕಂಡ ಸೀಮಿತ ಸಂಗತಿಗಳ ಬಗ್ಗೆ ಮಾತ್ರ ಹೇಳಬಲ್ಲೆ: ಹಾಗೆ ಅವನ ಸಂಪರ್ಕದಲ್ಲಿರುವ ಬೇರೆ ಬೇರೆ ವ್ಯಕ್ತಿಗಳು ತಾವು ಕಂಡ ಅವನ ವಿಭಿನ್ನ ಭಾವಬಿಂಬಗಳ ಬಗ್ಗೆ ಮಾತ್ರ ಹೇಳಬಲ್ಲರು.
ಸ್ವತಃ ಪ್ರಕೃತಿಗೇ ಆಶ್ಚರ್ಯವೆನಿಸುವಂಥ ಪರಿಸ್ಥಿತಿಯನ್ನು, ಚರಿತ್ರೆಯನ್ನು, ಯೌವನವನ್ನು ಶಶಿ ತನ್ನ ಕೈಚಳಕದಿಂದ, ಚತುರ ಕಾರ್ಯಶೈಲಿಯಿಂದ ಅಮರಗೊಳಿಸಿದ್ದಾನೆ. ಶಶಿ ಸಾಲಿ ಉತ್ತರ ಕರ್ನಾಟಕದಲ್ಲಿ ಕಾಲಕಾಲಕ್ಕೆ ಮೂಡಿ/ಹೊಮ್ಮಿ ಬಂದ ಅಸಂಖ್ಯ ಫೋಟೊ ಕಲಾವಿದರಲ್ಲಿ ಅಪರೂಪದ ಸೃಜನಶೀಲ ಪ್ರತಿಭಾವಂತ, ತನ್ನ ಕ್ರಿಯಾಶೀಲತೆಯನ್ನು ನಿರಂತರವಾಗಿ ಉಳಿಸಿಕೊಂಡು, ಬೆಳೆಸಿಕೊಂಡು ಬಂದಿದ್ದಾನೆ; ಹೊರದೇಶಗಳ, ಭಾರತದ ಮತ್ತು ಕರ್ನಾಟಕದ ಎಲ್ಲ ಫೋಟೊ ಕಲಾವಿದರ ಜೊತೆ ಗೌರವ, ವಿನಯಪೂರ್ಣ ಸಹೃದಯ ಸಂಬಂಧ ಹೊಂದಿದ್ದಾನೆ. ಸದಾ ಮುನ್ನುಗ್ಗುತ್ತಿರುವ ಚಲನಶೀಲ ಮೌನ ಸಾಹಸಿ ಅವನು. ಶಶಿ ಸ್ವತಃ ಒಂದು ಸುವಿಶಾಲ ಕಲಾಶಾಲೆ.
ಶಶಿಯ ಲೆಕ್ಕಣಿಕೆಯಲ್ಲಿ ಮೂಡುವ ಒಂದೊಂದು ಪ್ರಸಂಗವೂ ಬೃಹತ್ ಸತ್ಯಾನ್ವೇಷಣೆಯ ಪತ್ತೇದಾರಿ ಕಾದಂಬರಿಯಂತೆ ಭಾಸವಾಗುತ್ತದೆ. ಸಾಮಾನ್ಯವಾಗಿ ಕುತೂಹಲದ ಶೋಧ ಕಥಾನಕಗಳಲ್ಲಿ ಕಲ್ಪಕತೆ, ರಂಜಕತೆ, ಹೊಂದಿಸಾಣಿಕೆ ಮೇಳವಿಸಿರುತ್ತದೆ. ಆದರೆ ಶಶಿಯ ಜೀವನಕಥೆಯಲ್ಲಿ ಸತ್ಯ, ಸಹಜತೆ, ರೋಚಕತೆಗಳು ಕಲಾತ್ಮಕ ಕೌದಿಯಂತೆ ಹಾಸು ಹೊಕ್ಕಾಗಿವೆ.
ಶಶಿಯ ಪ್ರತಿಭೆ, ಕಲಾಚೇತನಗಳನ್ನು ಬೆಳಗಿಸಲು ಮೊದಲಿನಿಂದಲೂ ಬೆಂಬಲಿಸಿ, ಹರಸಿದವರು ಗದುಗಿನ ತೋಂಟದಾರ್ಯ ಮಠದ ಪೂಜ್ಯ ಡಾ. ಸಿದ್ಧಲಿಂಗ ಶ್ರೀಗಳು. ಶಶಿ ಸಾಲಿಯ ಬಗ್ಗೆ ಏನಾದರೂ ಮಾಡಬೇಕು ಎಂದು ಅವರು ಅಪ್ಪಣಿಸಿದ್ದರು. ಬಹಿರಂಗವಾಗಿ ಕೆಲವು ಸಭೆಗಳಲ್ಲಿಯೂ ಹೇಳಿದ್ದರು. ಅದನ್ನು ಮನಗೊಂಡು, ಮಠದ ಈಗಿನ ಸ್ವಾಮೀಜಿ ಡಾ. ಸಿದ್ಧರಾಮ ಶ್ರೀಗಳು ಆ ಕಾರ್ಯವನ್ನು ಸಾಧ್ಯವಾಗಿಸಿದ್ದಾರೆ.

ನಾಳೆ ಅಭಿನಂದನೆ: ಛಾಯಾಗ್ರಾಹಕ ಮತ್ತು ಲೇಖಕ ಶಶಿ ಸಾಲಿ ಅವರ ಅಭಿನಂದನಾ ಸಮಾರಂಭ ಮೇ ೧೯ರಂದು ಧಾರವಾಡದ ಸೃಜನಾ ರಂಗಮಂದರಿದಲ್ಲಿ ಸಂಜೆ ೫ಕ್ಕೆ ನಡೆಯಲಿದೆ. ಶಶಿ ಸಾಲಿ ಅಭಿನಂದನಾ ಸಮಿತಿ, ಡಾ. ಎಂ.ಎಂ.ಕಲಬುರ್ಗಿ ಅಧ್ಯಯನ ಸಂಸ್ಥೆ ಮತ್ತು ಗದುಗಿನ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಲಿದೆ. ಇದೇ ಸಂದರ್ಭದಲ್ಲಿ `ನೆನಪು ಹರಿಗೋಲು' ಅಭಿನಂದನಾ ಗ್ರಂಥವನ್ನು ಸಭಾಪತಿ ಬಸವರಾಜ ಹೊರಟ್ಟಿ ಲೋಕಾರ್ಪಣೆ ಮಾಡುವರು.
ಸಾನ್ನಿಧ್ಯವನ್ನು ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ವಹಿಸಲಿದ್ದಾರೆ. ಅಭಿನಂದನಾ ಗ್ರಂಥದ ಪ್ರಧಾನ ಸಂಪಾದಕ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ, ಡಾ. ಶಾಂತಿನಾಥ ದಿಬ್ಬದ, ಪ್ರೊ. ಶಿವಾನಂದ ಎಸ್. ಪಟ್ಟಣಶೆಟ್ಟಿ, ಸಂಗೀತಾ ಕಟ್ಟಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಪ್ರೊ. ಶಶಿಧರ ತೋಡಕರ್ ಪ್ರಾಸ್ತಾವಿಕ ಮಾತುಗಳನ್ನಾಡುವರು. ಆಶಾ ಸಾಲಿ ಮತ್ತು ಶಶಿ ಸಾಲಿ ಉಪಸ್ಥಿತರಿರುವರು. ಕಾರ್ಯಕ್ರಮಕ್ಕೆ ಮೊದಲು ಪಂಡಿತ್ ಎಂ. ವೆಂಕಟೇಶಕುಮಾರ್ ಮತ್ತು ಸುಜಾತಾ ಗುರವ್ ಅವರಿಂದ ವಚನ ಗಾಯನ ನಡೆಯಲಿದೆ.

Next Article