For the best experience, open
https://m.samyuktakarnataka.in
on your mobile browser.

ಶಾಸಕ ಪೂಂಜ ಬಂಧನಕ್ಕೆ ಆಗಮಿಸಿದ ಪೊಲೀಸರು: ಶಾಸಕರ ಮನೆ ಮುಂದೆ ಹೈಡ್ರಾಮ

07:47 PM May 22, 2024 IST | Samyukta Karnataka
ಶಾಸಕ ಪೂಂಜ ಬಂಧನಕ್ಕೆ ಆಗಮಿಸಿದ ಪೊಲೀಸರು  ಶಾಸಕರ ಮನೆ ಮುಂದೆ ಹೈಡ್ರಾಮ

ಮಂಗಳೂರು: ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಬಂಧನ ಸಾಧ್ಯತೆ ಹಿನ್ನೆಲೆಯಲ್ಲಿ ಬೆಳ್ತಂಗಡಿ ಗರ್ಡಾಡಿಯಲ್ಲಿರುವ ಶಾಸಕರ ಮನೆ ಮುಂದೆ ಇಂದು ಹೈಡ್ರಾಮ ನಡೆದಿದೆ.
ಬಿಜೆಪಿ ಯುವ ನಾಯಕ ಶಶಿರಾಜ್ ಶೆಟ್ಟಿ ಬಂಧನಕ್ಕೆ ಸಂಬಂಧಿಸಿದಂತೆ ಶಾಸಕ ಹರೀಶ್ ಪೂಂಜ ಪೊಲೀಸರ ನಡುವೆ ಉಂಟಾದ ಮಾತಿನ ಚಕಮಕಿ ಹಾಗೂ ಪ್ರತಿಭಟನೆಗೆ ಸಂಬಂಧಿಸಿದಂತೆ ದಾಖಲಾದ ಎರಡು ಪ್ರಕರಣಗಳ ವಿಚಾರವಾಗಿ ಮುಂಜಾನೆಯಿಂದ ಸಂಜೆವರೆಗೆ ಬಂಧನ ಪ್ರಹಸನ ನಡೆದಿದೆ.
ಮೇ ೨೧ ರಂದು ಸಂಜೆ ಪ್ರಕರಣ ದಾಖಲಿಸಿದ ಪೊಲೀಸರು, ಮೇ ೨೨ ರಂದು ಮುಂಜಾನೆ ಬೆಳಗ್ಗೆ ನೋಟಿಸ್ ಜಾರಿ ಮಾಡದೆ ಶಾಸಕರ ಮನೆಗೆ ಪೊಲೀಸರು ಆಗಮಿಸಿದ್ದರು.  ವಿಚಾರ ತಿಳಿದು ಶಾಸಕರ ಪರ ವಕೀಲರು ಹಾಗೂ ಜಿಲ್ಲೆಯ ಶಾಸಕರು, ಮುಖಂಡರು, ಸಾವಿರಾರು ಕಾರ್ಯಕರ್ತರು ಜಮಾಯಿಸಿದ್ದರು.
ಪೊಲೀಸರು ಹಾಗೂ ನ್ಯಾಯವಾದಿಗಳ ನಡುವೆ ಒಂದು ತಾಸಿಗೂ ಅಧಿಕ ಕಾಲ ಮಾತುಕತೆ ನಡೆಯಿತು. ಪೊಲೀಸರು ರಾಜಕೀಯ ಒತ್ತಡಕ್ಕೆ ಒಳಗಾಗಿರುವ ಸಾಧ್ಯತೆ ಕುರಿತು ಕಾರ್ಯಕರ್ತರು ಆಕ್ರೋಶ ಹೊರ ಹಾಕಿ ಶಾಸಕರ ಮನೆಮುಂದೆ ಘೋಷಣೆ ಕೂಗಿದರು.
ಶಾಸಕರ ಬಂಧನ ಸಾಧ್ಯತೆ ಹಿನ್ನೆಲೆಯಲ್ಲಿ ಎದುರಾಗಬಹುದಾದ ಪರಿಸ್ಥಿತಿಯನ್ನು ನಿಭಾಯಿಸಲು ಸ್ಥಳದಲ್ಲಿ ನಾಲ್ಕು ಕೆ.ಎಸ್.ಆರ್.ಪಿ. ತಯಕಡಿಯನ್ನು ಗರ್ಡಾಡಿ ಪ್ರದೇಶದಲ್ಲಿ ಇರಿಸಲಾಗಿದೆ. ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗಳ ಎಸ್.ಐ., ವೃತ್ತ ನಿರೀಕ್ಷಕರನ್ನು ನಿಯೋಜಿಸಲಾಗಿದೆ. ಸ್ಥಳಕ್ಕೆ ದ.ಕ.ವರಿಷ್ಠಾಧಿಕಾರಿ ರಿಷ್ಯಂತ್ ಸಿಬಿ ಆಗಮಿಸಿದ್ದಾರೆ.
ಬಂಧನಕ್ಕೆ ಎಲ್ಲ ರೀತಿಯ ಸಿದ್ಧತೆ ಕೈಗೊಂಡಿದ್ದು, ಬಂಧನ ವಾರಂಟ್ ಇಲ್ಲದೆ ಬಂದ ಪೊಲೀಸರು ಇದೀಗ ಬಂಧನಕ್ಕೆ ಪೂರಕ ದಾಖಲೆ ಸಿದ್ಧಪಡಿಸಲು ಮುಂದಾಗಿದ್ದು, ನೋಟೀಸ್ ನೀಡಿದ್ದಾರೆ ಎನ್ನಲಾಗಿದೆ.

ಜಿಲ್ಲೆ ಬಂದ್ ಎಚ್ಚರಿಕೆ: ಶಾಸಕರ ಮನೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲು, ಕ್ಯಾ. ಬ್ರಿಜೇಶ್ ಚೌಟ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ಶಾಸಕರಾದ ವೇದವ್ಯಾಸ ಕಾಮತ್, ರಾಜೇಶ್ ನಾಯ್ಕ್,  ಉಮಾನಾಥ ಕೋಟ್ಯಾನ್, ಭಗೀರಥಿ ಮುರುಳ್ಯ, ಪ್ರತಾಪಸಿಂಹ ನಾಯಕ್, ಮಾಜಿ ಶಾಸಕರಾದ ಸಂಜೀವ ಮಠಂದೂರು ಗಣೇಶ್ ಕಾರ್ಣಿಕ್ ನಾಯಕರಾದ ಶ್ರೀನಿವಾಸ ಪುಟಾಣಿ, ಪ್ರಸಾದ್ ಕುಮಾರ್, ಕುಶಾಲಪ್ಪ ಗೌಡ ಸೇರಿ ಸಭೆ ನಡೆಸಿದರು.
ಬಳಿಕ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ಹರೀಶ್ ಪೂಂಜ ಅವರನ್ನು ಕಾನೂನು ಮೀರಿ ಬಂಧಿಸಿದರೆ ನಾಳೆ ದ.ಕ. ಜಿಲ್ಲೆ ಬಂದ್ ಮಾಡಲಾಗುವುದು ಎಂದಿದ್ದಾರೆ.
ನ್ಯಾಯ ಕೇಳಿದ ಶಾಸಕರ ಮೇಲೆ ಕಾಂಗ್ರೆಸ್ ಸರಕಾರದ ಒತ್ತಡದಿಂದಾಗಿ ಹಲವು ಪ್ರಕರಣಗಳನ್ನು ದಾಖಲಿಸಲಾಗಿದೆ. ಯಾವುದೇ ಕಾರಣಕ್ಕೂ ಶಾಸಕರನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದ ಸಂಸದರು, ಶಾಸಕರನ್ನು ಬಂಧಿಸುವ ದುಸ್ಸಾಹಸಕ್ಕೆ ಪೊಲೀಸರು ಕೈಹಾಕಬಾರದು ಎಂದು ಎಚ್ಚರಿಕೆ ನೀಡಿದರು.

ಖಂಡನೀಯ: ಶಾಸಕ ಹರೀಶ್ ಪೂಂಜಾ ಬಂಧನ ಯತ್ನ ಖಂಡನೀಯವಾಗಿದ್ದು, ಕೂಡಲೇ ಇದನ್ನು ಇಲ್ಲಿಗೆ ನಿಲ್ಲಿಸಬೇಕು. ನಮ್ಮ ಶಾಸಕರು, ಕಾರ್ಯಕರ್ತರ ಬಂಧನ ಮುಂದುವರೆದರೆ ಮುಂದಾಗುವ ವಿಚಾರಗಳಿಗೆ ಪೊಲೀಸರೇ ಹೊಣೆಯಾಗಬೇಕಾಗಲಿದೆ” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಎಚ್ಚರಿಕೆ ನೀಡಿದ್ದಾರೆ.

ಬಿಗುವಿನ ವಾತಾವರಣ:
ಶಾಸಕರ ಪೂಂಜ ಮನೆಯ ಸುತ್ತುಮತ್ತು ನೂರಾರು ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಜಮಾಯಿಸಿದ್ದು, ಶಾಸಕರ ಬಂಧಿಸದಂತೆ ‘ಗೋ ಬ್ಯಾಕ್’ ಪೊಲೀಸ್ ಘೋಷಣೆ ಕೂಗಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸ್ ಹಾಗೂ ಕಾರ್ಯಕರ್ತರ ನಡುವೆ ತಳ್ಳಾಟ, ನೂಕಾಟ ನಡೆದಿದೆ. ಶಾಸಕ ಪೂಂಜ ಮನೆಯೊಳಗಿದ್ದು, ಸಂಸದರು, ಶಾಸಕರು ಜತೆಗಿದ್ದಾರೆ.

ಬಂಧಿಸದೆ ನಿರ್ಗಮಿಸಿದ ಪೊಲೀಸರು:
ವಿಚಾರಣೆಗೆ ಹಾಜರಾಗಲು ಮೂರು ದಿನದ ಕಾಲಾವಕಾಶ ಕೋರಿದ ಶಾಸಕರ ಪೂಂಜ ಮನವಿ ಹಾಗೂ ಕಾನೂನು ಸುವ್ಯವಸ್ಥೆ ಹಿನ್ನೆಲೆಯಲ್ಲಿ ಪೊಲೀಸರು ಶಾಸಕರನ್ನು ಬಂಧಿಸದೆ ಸ್ಥಳದಿಂದ ನಿರ್ಗಮಿಸಿದ್ದಾರೆ.

ಏನಿದು ಪ್ರಕರಣ: ಬೆಳ್ತಂಗಡಿ ಮೇಲಂತಬೆಟ್ಟುವಿನಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲಿನ ಕೋರೆಯ ಪ್ರಕರಣದಲ್ಲಿ ಬೆಳ್ತಂಗಡಿ ಪೊಲೀಸರುಆರೋಪಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿ ಅವರನ್ನು ಬಂಧಿಸಿದ ವೇಳೆ ಶಾಸಕ ಹರೀಶ್ ಪೂಂಜ ಕೆಲವು ಇತರರೊಂದಿಗೆ ಠಾಣೆಗೆ ಬಂದ ಶಾಸಕರು ಬಿಜೆಪಿ ಕಾರ್ಯಕರ್ತ ಶಶಿರಾಜ್ ಶೆಟ್ಟಿಯನ್ನು ಬಿಡುಗಡೆ ಮಾಡುವಂತೆ ಪೊಲೀಸ್ ಅಧಿಕಾರಿಗಳನ್ನು ಒತ್ತಾಯಿಸಿದ್ದರು. ಈ ಸಂದರ್ಭ ಶಾಸಕರು ಪೊಲೀಸ್ ನಿರೀಕ್ಷರನ್ನು ಅವಾಚ್ಯವಾಗಿ ಬೈದು ಬೆದರಿಸಿದ್ದಾರೆ ಹಾಗೂ ಕರ್ತವ್ಯಕ್ಕೆ ಅಡ್ಡಿಪಡಿಸಿ ಪೊಲೀಸ್ ಇಲಾಖೆಗೆ ಮತ್ತು ಪೊಲೀಸ್ ಅಧಿಕಾರಿಗಳ ಬಗ್ಗೆ ಅಸಂವಿಧಾನಿಕ ಶಬ್ದಗಳಲ್ಲಿ ಮಾತನಾಡಿ ದುರ್ವರ್ತನೆ ತೋರಿದ್ದಾರೆ ಎಂದು ಶಾಸಕರ ಪೂಂಜ ವಿರುದ್ದ ಬೆಳ್ತಂಗಡಿ ಠಾಣೆಯಲ್ಕಿ ಅ.ಕ್ರ.೫೭/೨೦೨೪, ಕಲಂ ೩೫೩, ೫೦೪,ಐಪಿಸಿಯಂತೆ ಪ್ರಕರಣ ದಾಖಲಾಗಿತ್ತು..
ನಂತರ ಮೇ ೨೦ರಂದು ನಡೆದ ಪ್ರತಿಭಟನೆಯಲ್ಲಿ ವಶಾಸಕರು ಬಂಧಿತ ಕಾರ್ಯಕರ್ತರಿಗಾಗಿ ಪೊಲೀಸರ ಕಾಲರ್ ಹಿಡಿಯಲು ಸಿದ್ಧ  ಡಿಜೆ ಹಳ್ಳಿ ಕೆಜೆ ಹಳ್ಳಿ ಪೊಲೀಸ್ ಠಾಣೆಗೆ ಆದ ಗತಿಯನ್ನು ಬೆಳ್ತಂಗಡಿ ಠಾಣೆಗೂ ಕಾಣಿಸುತ್ತೇನೆ ಎಂದು ಬೆದರಿಕೆ ಒಡ್ಡಿರುವ ರೀತಿಯಲ್ಲಿ ಮಾತನಾಡಿದ್ದರು. ಈ ಕುರಿತು ಶಾಸಕರ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿತ್ತು.