For the best experience, open
https://m.samyuktakarnataka.in
on your mobile browser.

ಶಿವಾನಂದ ಪಾಟೀಲರಿಗೆ ರೈತರನ್ನು ನಿಂದಿಸುವ ಉಸ್ತುವಾರಿ ಕೊಟ್ಟಂತಿದೆ

07:52 PM Dec 25, 2023 IST | Samyukta Karnataka
ಶಿವಾನಂದ ಪಾಟೀಲರಿಗೆ ರೈತರನ್ನು ನಿಂದಿಸುವ ಉಸ್ತುವಾರಿ ಕೊಟ್ಟಂತಿದೆ

ಬೆಂಗಳೂರು: ಪದೇ ಪದೇ ಅನ್ನದಾತರನ್ನು ಅವಮಾನಿಸುವುದು, ರೈತರ ಜೀವನವನ್ನು ಹಂಗಿಸುವುದು, ರೈತರ ಮೇಲೆ ದೌರ್ಜನ್ಯ ನಡೆಸುವುದು, ಕಾಂಗ್ರೆಸ್ ತನ್ನ ಸಂಸ್ಕೃತಿಯನ್ನಾಗಿ ಅಳವಡಿಸಿಕೊಂಡಂತಿದೆ. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಸರ್ಕಾರದ ಸಚಿವ ಶಿವಾನಂದ ಪಾಟೀಲರಿಗೆ ರೈತರನ್ನು ನಿಂದಿಸಿ ಅವಹೇಳನ ಮಾಡುವ ಉಸ್ತುವಾರಿ ವಹಿಸಿಕೊಟ್ಟಂತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಟೀಕಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅವರು, ಈ ಹಿಂದೆಯೂ ಶಿವಾನಂದ ಪಾಟೀಲರು 'ರೈತರು ಪರಿಹಾರಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ'
ಎಂದು ಅಮೂಲ್ಯ ರೈತ ಜೀವಗಳನ್ನು ಹಗುರವಾಗಿ ಪರಿಗಣಿಸಿ ಅಮಾನವೀಯ ಹೇಳಿಕೆ ನೀಡಿದ್ದ ನೆನಪು ಇನ್ನೂ ಹಸಿರಾಗಿರುವಾಗಲೇ, ಮತ್ತೆ ಅದೇ ದಾಟಿಯ ಅವರ ರೈತ ದ್ವೇಷಿ ಮಾತುಗಳು ಸರ್ಕಾರದ ರೈತ ವಿರೋಧಿ ಧೋರಣೆಯನ್ನು ಸ್ಪಷ್ಟವಾಗಿ ಪ್ರತಿನಿಧಿಸುತ್ತದೆ. 'ಬರಗಾಲ ಬರಲೆಂದೇ ಅಪೇಕ್ಷಿಸುತ್ತಾರೆ' ಎಂಬ ವಂಗ್ಯದ ಮಾತುಗಳು ರೈತರ ಮೇಲಿನ ಕ್ರೌರ್ಯದ ಮನಸ್ಥಿತಿ ಪ್ರತಿಬಿಂಬಿಸುತ್ತಿದೆ ಎಂದಿದ್ದಾರೆ.
'ಪುಕ್ಸಟ್ಟೆ ಆಶ್ವಾಸನೆ' ನೀಡಿ ಅಧಿಕಾರಕ್ಕೆ ಬಂದವರು ನೀವು, ರೈತರಿಗೆ ಸರ್ಕಾರ ಏನೇ ನೀಡಿದರೂ ಅದು ಈ ರಾಜ್ಯದ ಅಭಿವೃದ್ಧಿಯ ಕಾಳಜಿಯೇ ಹೊರತೂ ಭಿಕ್ಷೆಯಲ್ಲ, ನಮ್ಮ ರೈತರು ಸ್ವಾಭಿಮಾನಿಗಳು, ಅವರು ಪರಿಹಾರಕ್ಕಾಗಿ ಕಾಯುವುದಿಲ್ಲ, ಬದಲಿಗೆ ರೈತರ ಕಷ್ಟಗಳಿಗೆ ಸ್ಪಂದಿಸುವ ಸರ್ಕಾರಗಳನ್ನ ಬಯಸುತ್ತಾರೆ, ಆದರೆ ಆಮಿಷಗಳನ್ನೊಡ್ಡಿ, ಅಧಿಕಾರಕ್ಕೆ ಬಂದು ನಿತ್ಯವೂ ಬೆಲೆ ಏರಿಕೆಯ ಬರೆ ಎಳೆಯುವ ನಿಮ್ಮನ್ನು ಶಾಶ್ವತವಾಗಿ ತಿರಸ್ಕರಿಸುವ ಕಾಲ ಹತ್ತಿರದಲ್ಲಿದೆ. ಈ ಕಾಂಗ್ರೆಸ್ ಸರ್ಕಾರ ‘ನಿರ್ದಯ ಸರ್ಕಾರ, ದಪ್ಪ ಚರ್ಮದ ಮಂತ್ರಿಗಳನ್ನು ಪೋಷಿಸುತ್ತಿರುವ ಸರ್ಕಾರ'. ಸಚಿವ ಶಿವಾನಂದ ಪಾಟೀಲರು ಈ ಕೂಡಲೇ ಕ್ಷಮೆ ಕೋರಬೇಕೆಂದು ಆಗ್ರಹಿಸಿದ್ದಾರೆ.