ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಶೆಟ್ಟರ್ ಘರ್‌ವಾಪ್ಸಿ?

02:47 AM Jan 25, 2024 IST | Samyukta Karnataka

ಹೊಸದಿಲ್ಲಿ: ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಟಿಕೆಟ್ ನಿರಾಕರಣೆಯಿಂದ ಬೇಸತ್ತು ಬಿಜೆಪಿ ತ್ಯಜಿಸಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹಾಗೂ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಅವರನ್ನು ಪಕ್ಷಕ್ಕೆ ವಾಪಸ್ ಕರೆ ತರುವ ಪ್ರಯತ್ನಗಳು ಆರಂಭವಾಗಿವೆ.
ಕೆಲ ದಿನಗಳ ಹಿಂದೆ ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವೀಸ್ ಅವರು ಶೆಟ್ಟರ್ ಜತೆಗೆ ಮಾತುಕತೆ ನಡೆಸಿದ್ದಾರೆ ಎಂಬ ವರ್ತಮಾನಗಳಿದ್ದು, ಸವದಿ ಕೂಡ ಫಡ್ನವೀಸ್ ಮೂಲಕವೇ ಬಿಜೆಪಿ ಹೈಕಮಾಂಡ್ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ. ಅಲ್ಲದೇ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರೂ ಶೆಟ್ಟರ್ ಜತೆ ಈಗಾಗಲೇ ಎರಡು ಬಾರಿ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಕೆಲ ದಿನಗಳ ಹಿಂದೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಶೆಟ್ಟರ್ ಭೇಟಿ ಮಾಡಿದ ಬಳಿಕ ಈ ಎಲ್ಲ ಬೆಳವಣಿಗೆ ನಡೆದಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಈ ಮಧ್ಯೆ ಮಂಗಳವಾರ ರಾತ್ರಿ ಮಾಜಿ ಸಿಎಂ ಶೆಟ್ಟರ್ ಅವರು ತಮ್ಮ ಆಪ್ತ, ಮಾಜಿ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಅವರೊಂದಿಗೆ ದೆಹಲಿಗೆ ಬಂದಿಳಿದಿರುವುದು ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕೂಡ ದೆಹಲಿಯಲ್ಲಿರುವುದು ಈ ಬೆಳವಣಿಗೆ ಭಾಗ ಎಂದೇ ವಿಶ್ಲೇಷಿಸಲಾಗುತ್ತಿದೆ. ಆದರೆ ಶೆಟ್ಟರ್ ಈ ಬೆಳವಣಿಗೆ ಅಲ್ಲಗಳೆದು, `ರಾಜ್ಯ ಬಿಜೆಪಿಯ ಹಲವಾರು ನಾಯಕರು ನನ್ನ ಜೊತೆ ವಾಪಸ್ ಪಕ್ಷಕ್ಕೆ ಬರುವಂತೆ ಕೋರಿದ್ದಾರೆ. ರಾಷ್ಟ್ರೀಯ ನಾಯಕರು ನನ್ನನ್ನು ಸಂಪರ್ಕಿಸಿಲ್ಲ. ಆ ಬಗ್ಗೆ ನಾನು ಯೋಚನೆ ಮಾಡಿಲ್ಲ' ಎಂದಿದ್ದಾರೆ.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮತ್ತು ಬಸವರಾಜ ಬೊಮ್ಮಾಯಿ ಅವರು ಧಾರವಾಡ, ಹಾವೇರಿ ಮತ್ತು ಉತ್ತರ ಕನ್ನಡ ಲೋಕಸಭಾ ಕ್ಷೇತ್ರಗಳಿಂದ ಸ್ಪರ್ಧಿಸುವ ಬಗೆಗೆ ಪಕ್ಷದ ರಾಷ್ಟ್ರೀಯ ವರಿಷ್ಠರು ಚರ್ಚೆಗೆ ಮುಂದಾಗಿದ್ದಾರೆ ಎಂಬ ಮಾತುಗಳು ಪಕ್ಷದ ವಲಯದಲ್ಲಿ ಕೇಳಿಬರುತ್ತಿವೆ. ಚುನಾವಣೆ ಸಂದರ್ಭದಲ್ಲಿ ಸಾಧ್ಯಾಸಾಧ್ಯತೆಗಳ ಬಗೆಗೆ ಚರ್ಚೆ ನಡೆಯುವುದು ಸಾಮಾನ್ಯವಾದರೂ ಸದ್ಯ ಕಾಂಗ್ರೆಸ್‌ನಲ್ಲಿರುವ ಮಾಜಿ ಸಿಎಂ ಶೆಟ್ಟರ್ ಹೆಸರು ಬಿಜೆಪಿ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಸೇರ್ಪಡೆಗೊಂಡಿರುವುದು ಕುತೂಹಲ ಹೆಚ್ಚಿಸಿದೆ.

Next Article