For the best experience, open
https://m.samyuktakarnataka.in
on your mobile browser.

ಹನುಮಧ್ವಜ ಕೆಳಗಿಳಿಸಿದ ಪೊಲೀಸರು: ಸ್ಥಳೀಯರ ಮೇಲೆ ಲಾಠಿ ಚಾರ್ಜ್‌, ಗ್ರಾಮ ಉದ್ವಿಗ್ನ

03:29 PM Jan 28, 2024 IST | Samyukta Karnataka
ಹನುಮಧ್ವಜ ಕೆಳಗಿಳಿಸಿದ ಪೊಲೀಸರು  ಸ್ಥಳೀಯರ ಮೇಲೆ ಲಾಠಿ ಚಾರ್ಜ್‌  ಗ್ರಾಮ ಉದ್ವಿಗ್ನ

ಮಂಡ್ಯ: 108 ಅಡಿ ಎತ್ತರದಲ್ಲಿದ್ದ ಹನುಮಧ್ವಜವನ್ನು ಪೊಲೀಸರು ಕೆಳಗಿಳಿಸಿದ್ದು. ಇದರಿಂದ ಆಕ್ರೋಶಗೊಂಡ ಗಾಮಸ್ಥರು ಪ್ರತಿಭಟನೆಗೆ ಮುಂದಾಗಿದ್ದಾರೆ. ಇದರಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಜಿಲ್ಲಾಡಳಿತ ಸೆಕ್ಷನ್ 144 ನಿಷೇಧಾಜ್ಞೆ ಜಾರಿಗೊಳಿಸಿದ ಘಟನೆ ಮಂಡ್ಯ ತಾಲೂಕಿನ ಕೆರೆಗೋಡು ಗ್ರಾಮದಲ್ಲಿ ಗ್ರಾಮದಲ್ಲಿ ನಡೆದಿದೆ.
ಜನವರಿ 22ರಂದು ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಬಾಲರಾಮ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನೆರವೇರಿತು. ಇದರ ನೆನೆಪಾಗಿ ಕೆರಗೋಡು ಗ್ರಾಮದಲ್ಲಿ 108 ಅಡಿ ಎತ್ತರ ಧ್ವಜಸ್ತಂಭದ ಮೇಲೆ ಹನುಮ ಧ್ವಜ ಹಾರಿಸಲು ಗ್ರಾಮಸ್ಥರು ನಿರ್ಧರಿಸಿದ್ದರು. ಧ್ವಜ ಹಾರಿಸಲು ನಿಶ್ಚಯಿಸಿದ ಜಾಗ ಗ್ರಾಮ ಪಂಚಾಯಿತಿಗೆ ಸೇರಿದೆ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಹನುಮ ಧ್ವಜ ಹಾರಿಸಲು ಅನುಮತಿ ನೀಡಿ ಎಂದು ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದ್ದರು.
ಈ ವಿಚಾರ ಗ್ರಾಪಂ ಸಾಮಾನ್ಯ ಸಭೆಯಲ್ಲಿ ಚರ್ಚೆಯಾಗಿ 22 ಸದಸ್ಯ ಬಲದ ಗ್ರಾಪಂನಲ್ಲಿ ಹನುಮ ಧ್ವಜ ಹಾರಾಟಕ್ಕೆ 20 ಸದಸ್ಯರು ಬೆಂಬಲ ವ್ಯಕ್ತಪಡಿಸಿದರು. ಆದರೆ ಸರ್ಕಾರಿ ಜಾಗದಲ್ಲಿ ಹನುಮ ಧ್ವಜ ಹಾರಿಸಲಾಗಿದೆ ಇದನ್ನು ತೆರವುಗೊಳಿಸುವಂತೆ ಜಿಲ್ಲಾಡಳಿತ ಮೌಖಿಕ ಆದೇಶ ಹೊರಡಿಸಿತ್ತು. ಅದರಂತೆ ಇಂದು (ಜ.28) ಗ್ರಾಮಕ್ಕೆ ಮತ್ತೆ ಆಗಮಿಸಿದ ಅಧಿಕಾರಿಗಳು ಮತ್ತು ಪೊಲೀಸರು ಹನುಮ ಧ್ವಜ ತೆರವುಗೊಳಿಸಲು ಮುಂದಾದರು ಈ ವೇಳೆಯೂ ವಿರೋಧ ವ್ಯಕ್ತವಾಯಿತು. ಅಧಿಕಾರಿಗಳು ಪ್ರತಿಭಟನಾಕಾರರ ಮನವೊಲಿಸಲು ಯತ್ನಿಸಿದರು. ಆದರೆ ಪ್ರತಿಭಟನಾಕಾರರು ಇದಕ್ಕೆ ಬಗ್ಗಲಿಲ್ಲ. ಕೂಡಲೆ ಗ್ರಾಮದಲ್ಲಿ 144 ಸೆಕ್ಷನ್​ ಜಾರಿ ಮಾಡಲಾಯಿತು. ಪ್ರತಿಭಟನಾಕಾರರನ್ನು ಚದುರಿಸಲು ಲಾಠಿ ಚಾರ್ಜ್​ ಮಾಡಲಾಯಿತು. ಕೊನೆಗೂ ಪೊಲೀಸರು ಹನುಮ ಧ್ವಜವನ್ನು ತೆರವುಗೊಳಿಸಿದರು.
ಹನುಮ ಧ್ವಜ ಕೆಳಗಿಳಿಸುತ್ತಿದ್ದಂತೆ ಜಿಲ್ಲಾಡಳಿತ ಹಾಗೂ ಪೊಲೀಸರ ವಿರುದ್ಧ ಜನ ತಿರುಗಿಬಿದ್ದಿದ್ದಾರೆ. ಸ್ವಯಂಪ್ರೇರಿತವಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಪ್ರತಿಭಟನೆಗೆ ಧುಮುಕಿದ್ದಾರೆ. ಈ ಹಿನ್ನೆಲೆಯಲ್ಲಿ ಕೆರಗೋಡಿನಲ್ಲಿ 144 ಸೆಕ್ಷನ್ ಜಾರಿಗೊಳಿಸಿದ್ದು, ಸ್ಥಳದಲ್ಲಿ ನೂರಕ್ಕೂ ಹೆಚ್ಚು ಪೊಲೀಸರನ್ನ ಭದ್ರತೆಗೆ ನಿಯೋಜಿಸಲಾಗಿದೆ.