For the best experience, open
https://m.samyuktakarnataka.in
on your mobile browser.

ಹಿಂದೂ ಜನಸಂಖ್ಯೆ ಕುಸಿತಕ್ಕೆ ಸಚಿವ ಜೋಶಿ ಕಳವಳ

09:14 PM May 10, 2024 IST | Samyukta Karnataka
ಹಿಂದೂ ಜನಸಂಖ್ಯೆ ಕುಸಿತಕ್ಕೆ ಸಚಿವ ಜೋಶಿ ಕಳವಳ

ಹುಬ್ಬಳ್ಳಿ: ದೇಶದಲ್ಲಿ ಹಿಂದೂಗಳ ಜನಸಂಖ್ಯೆ ಕುಸಿತ ತೀವ್ರ ಆತಂಕಕಾರಿ ಬೆಳವಣಿಗೆಯಾಗಿದೆ. ಸರ್ಕಾರ ಮತ್ತು ಸಮಾಜ ಗಂಭೀರವಾಗಿ ಚಿಂತಿಸಬೇಕಾದ ಸಂಗತಿ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಳವಳ ವ್ಯಕ್ತಪಡಿಸಿದರು.
ಶುಕ್ರವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಭಾರತದಲ್ಲಿ ಹಿಂದೂಗಳ ಜನಸಂಖ್ಯೆ ಕ್ಷಿಣಿಸುತ್ತಿರುವ ಬಗ್ಗೆ ತಕ್ಷಣಕ್ಕೆ ಯಾವುದೇ ನಿರ್ಧಾರಕ್ಕೆ ಬರಲಾಗುವುದಿಲ್ಲ. ಆದರೆ, ಸಮಗ್ರ ಅಧ್ಯಯನ ನಡೆಸಬೇಕಿದೆ. ದೇಶದಲ್ಲಿ ಹಿಂದೂಗಳ ಜನಸಂಖ್ಯೆ ಕಡಿಮೆಯಾದಂತೆ ಕಾಲಕ್ರಮೇಣ ಪ್ರಜಾಪ್ರಭುತ್ವವೇ ಬದಲಾಗುವ ಸ್ಥಿತಿ ಎದುರಾಗಲಿದೆ. ಅಲ್ಲದೇ, ಜಾತ್ಯತೀತವಾಗಿ ಉಳಿಯುವುದಿಲ್ಲ ಎಂದು ತೀವ್ರ ಆತಂಕ ವ್ಯಕ್ತಪಡಿಸಿದರು.
ಜಾತ್ಯತೀತತೆ ಎನ್ನುವುದು ಭಾರತೀಯರ ರಕ್ತ, ಸ್ವಭಾವದಲ್ಲೇ ಬಂದಿದೆ. ಮುಂದೊಂದು ದಿನ ಇದಕ್ಕೆ ಧಕ್ಕೆ ಉಂಟಾಗಬಹುದು. ಭಾರತ ವಿವಿಧತೆಯಲ್ಲಿ ಏಕತೆ ಕಂಡ ದೇಶ. ನಾನಾ ಧರ್ಮ, ಸಂಸ್ಕೃತಿ ಆಚರಣೆಗೆ ಮುಕ್ತ ಅವಕಾಶ ಕೊಟ್ಟ ರಾಷ್ಟ್ರ. ಈ ಪರಂಪರೆಯೇ ಮುಂದುವರಿಯಬೇಕು. ಪ್ರಮುಖವಾಗಿ ಹಿಂದೂಗಳ ದೇಶವೆಂದರೂ ಸರ್ವ ಧರ್ಮೀಯರನ್ನು ಒಳಗೊಂಡಿದೆ. ಆದರೆ, ಈಗ ಹಿಂದೂಗಳ ಸಂಖ್ಯೆಯೇ ಕುಸಿಯುತ್ತಿದೆ ಎಂದರೆ ಸರ್ಕಾರ ಮತ್ತು ಸಮಾಜ ಗಂಭೀರವಾಗಿ ಚಿಂತಿಸಬೇಕಾದ ಸಂಗತಿ ಎಂದರು.
ಕಾಂಗ್ರೆಸ್‌ನ ಸ್ಯಾಮ್ ಪಿತ್ರೋಡಾ ಹೇಳಿಕೆ ವಿಚಾರವಾಗಿ ಮಾತನಾಡಿ, ಜಾತಿಯ ಆಧಾರದ ಮೇಲೆ, ಆರ್ಥಿಕ ಹಾಗೂ ಸಾಮಾಜಿಕ ನೆಲೆಗಟ್ಟಿನ ಮೇಲೆ ದೇಶವನ್ನ ಒಡೆಯುವ ವಿಚಾರ ಕಾಂಗ್ರೆಸ್ ನಾಯಕರಲ್ಲಿದೆ. ಈ ಹಿಂದೆ ಡಿ.ಕೆ.ಸುರೇಶ್ ಹೇಳಿಕೆಯನ್ನೂ ನೋಡಿದ್ದೇವೆ. ಈಗ ಸ್ಯಾಮ್ ಪಿತ್ರೊಡಾ ಅವರ ಹೇಳಿಕೆ ಕೂಡ ಹಾಗೆಯೇ ಇದೆ. ಕಾಂಗ್ರೆಸ್‌ನವರು ಅಧಿಕಾರದಲ್ಲಿ ಇಲ್ಲವಾದರೂ ದೇಶ ಒಡೆಯುವಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದು ಕಿಡಿಕಾರಿದರು.