For the best experience, open
https://m.samyuktakarnataka.in
on your mobile browser.

೧ ದಿನ, ೯ ಖಾತೆ ಸೃಷ್ಟಿ, ೯೪ ಕೋಟಿ ರೂ. ಲೂಟಿ..!

04:53 AM Jun 01, 2024 IST | Samyukta Karnataka
೧ ದಿನ  ೯ ಖಾತೆ ಸೃಷ್ಟಿ  ೯೪ ಕೋಟಿ ರೂ  ಲೂಟಿ

ಶಿವಕುಮಾರ್ ಮೆಣಸಿನಕಾಯಿ
ಬೆಂಗಳೂರು:
ಇದೊಂದು ಪವಾಡವೇ ಸರಿ. ಏಕೆಂದರೆ ಸರಕಾರಿ ನಿಗಮವೊಂದು ಒಂದೇ ದಿನ ಆಡಳಿತ ಮಂಡಳಿ ಸಭೆ ನಡೆಸಿ, ೫೦ ಕೋಟಿ ರೂ.ಗಳನ್ನು ಬೆಂಗಳೂರಿನ ಎಂ.ಜಿ.ರಸ್ತೆಯ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ಠೇವಣಿ ಇಟ್ಟು ಅದೇ ದಿನ ೯೪ ಕೋಟಿ ರೂ.ಗಳನ್ನು ಸಾಲ ಪಡೆದು, ವಿವಿಧ ಖಾತೆಗಳಿಗೆ ಹಂಚಿಕೆ ಮಾಡಿ ರಾಜ್ಯದ ಪರಿಶಿಷ್ಟ ಪಂಗಡದ ಜನರ ಉದ್ಧಾರಕ್ಕೆ ಯುದ್ಧೋಪಾದಿಯಲ್ಲಿ ಕಲ್ಯಾಣ ಕೆಲಸ ಮಾಡಿದೆ. ಅಷ್ಟೇ ಅಲ್ಲ, ಅದೇ ದಿನ ೯ ಖಾತೆಗಳನ್ನು ಸೃಷ್ಟಿಸಿದೆ ಮತ್ತು ಹಣ ಬಟವಾಡೆ ಮಾಡಿದೆ..!
ಇದ್ಯಾವುದೋ ಸಿನಿಮಾ ಕಥೆ ಅಲ್ಲ, ಕರ್ನಾಟಕ ವಾಲ್ಮೀಕಿ ಮಹರ್ಷಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ಮತ್ತು ಎಂ.ಜಿ.ರಸ್ತೆಯ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ೨೦೨೪ರ ಮಾರ್ಚ್ ೩೧ರಂದು ನಡೆದ ನೂರಾರು ಕೋಟಿ ರೂಪಾಯಿಗಳ ಲೂಟಿಯ ನೈಜ ಘಟನೆ. ಇದಕ್ಕೆ ಸಂಬಂಧಿಸಿದ ಅತ್ಯಂತ ಮಹತ್ವದ ಕಡತಗಳು "ಸಂಯುಕ್ತ ಕರ್ನಾಟಕ"ಕ್ಕೆ ಲಭ್ಯವಾಗಿದ್ದು, ೨೪ ಗಂಟೆಗಳ ಅವಧಿಯಲ್ಲಿ ನೂರಾರು ಕೋಟಿ ಲೂಟಿ ಮಾಡಿದ ಸಂಪೂರ್ಣ ವಿವರ ಹೊರಬಿದ್ದಿದೆ.
ನಡೆದದ್ದೇನು?: ಸರಕಾರದಲ್ಲಿ ಲಭ್ಯವಿರುವ ಮಾಹಿತಿಗಳ ಪ್ರಕಾರ, ವಾಲ್ಮೀಕಿ ನಿಗಮದ ನೂರಾರು ಕೋಟಿ ರೂ.ಗಳ ಅಕ್ರಮ ಕೇವಲ ಒಂದೇ ದಿನದಲ್ಲಿ ನಡೆದಿದೆ. ಕಳೆದ ಫೆಬ್ರವರಿಯಲ್ಲಿ ವಾಲ್ಮೀಕಿ ನಿಗಮದ ಅಧಿಕೃತ ಬ್ಯಾಂಕ್ ಖಾತೆಯನ್ನು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ವಸಂತನಗರ ಶಾಖೆಯಿಂದ ಎಂ.ಜಿ.ರಸ್ತೆಯ ಶಾಖೆಗೆ ವರ್ಗಾಯಿಸಲಾಗಿತ್ತು. ಈ ಖಾತೆಗೆ ವಿವಿಧ ಬ್ಯಾಂಕ್‌ಗಳು ಮತ್ತು ಕೆ-೨ ಖಾತೆಗಳಿಂದ ಸರಕಾರಿ ಯೋಜನೆಗಳ ವಿವಿಧ ಪ್ರಮಾಣದ ಮೊತ್ತವು ಒಂದು ತಿಂಗಳ ಅವಧಿಯಲ್ಲಿ ಒಟ್ಟು ೧೮೭.೩೩ ಕೋಟಿ ರೂ.ಗಳನ್ನು ವರ್ಗಾಯಿಸಲಾಗಿತ್ತು. ಅದಾದ ಬಳಿಕ ನಿಗಮದ ಅಧಿಕಾರಿಗಳ ಪ್ರಕಾರ, ಲೋಕಸಭೆ ಚುನಾವಣೆ ಅಧಿಸೂಚನೆ ಪ್ರಕಟಗೊಂಡಿತು. ಹೀಗಾಗಿ ಅಧಿಕಾರಿಗಳ ಕಾಲುಚಾಚಿ ಮನೆಯಲ್ಲಿ ಮಲಗಿದ್ದರು. ಬ್ಯಾಂಕ್ ಖಾತೆಯಲ್ಲಿ ಹಣ ಇದೆಯೇ ಇಲ್ಲವೇ ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ.
ಆದರೆ ಈ ಮಧ್ಯೆ ಆರ್ಥಿಕ ವರ್ಷದ ಕೊನೆ ಬಂದಿದ್ದರಿಂದ ಸರಕಾರದ ವಿವಿಧ ಯೋಜನೆಗಳ ೧೮೭.೩೩ ಕೋಟಿ ರೂ.ಗಳನ್ನು ಲಪಟಾಯಿಸಲು ಸಂಚು ಸಿದ್ಧಗೊಂಡಿತ್ತು. ನಿಗಮದ ಅಧಿಕಾರಿಗಳ ಪ್ರಕಾರ, ಈ ವಿಚಾರ ಅವರಿಗೆ ಗೊತ್ತಿಲ್ಲ. ಆದರೆ ಆರ್ಥಿಕ ವರ್ಷದ ಕೊನೆದ ದಿನವಾದ ಮಾರ್ಚ್ ೩೧ರಂದು ವಾಲ್ಮೀಕಿ ನಿಗಮದ ಆಡಳಿತ ಮಂಡಳಿ ಸಭೆ (ಬೋರ್ಡ್ ಮೀಟಿಂಗ್) ನಡೆಸಿ ೧೮೭.೩೩ ಕೋಟಿ ರೂ.ಗಳ ಪೈಕಿ ೫೦ ಕೋಟಿ ರೂ.ಗಳನ್ನು ೧೨ ತಿಂಗಳ ಅವಧಿಗೆ ಠೇವಣಿ ಇಡುವ ಠರಾವು ಮಾಡಲಾಯಿತು. ಆ ಠೇವಣಿ ಮೊತ್ತದ ಗ್ಯಾರಂಟಿ ಆಧಾರದ ಮೇಲೆ ೪೫ ಕೋಟಿ ರೂ.ಗಳನ್ನು ಅದೇ ಸಭೆಯಲ್ಲಿ ತೆಗೆದುಕೊಳ್ಳಲಾಯಿತು.
ಅದೇ ದಿನ ೯ ಫಲಾನುಭವಿಗಳು ಹೈದರಾಬಾದ್‌ನ ರತ್ನಾಕರ ಬ್ಯಾಂಕ್‌ನಲ್ಲಿ ಖಾತೆ ತೆರೆದರು. ಹೆಸರಿಗೆ ೯ ಖಾತೆಗಳನ್ನು ತೆರೆದದ್ದು ದೇಶದ ಪ್ರತಿಷ್ಠಿತ ಕಂಪನಿಗಳೇ ಆದರೂ ವಾಸ್ತವವಾಗಿ ಆ ಕಂಪನಿಗಳ ಹೆಸರಲ್ಲಿ ನಕಲಿ ವ್ಯಕ್ತಿಗಳು ಖಾತೆ ತೆರೆದಿದ್ದಾರೆ ಎಂದು ನಿಗಮದ ಅಧಿಕಾರಿಗಳು ಹೇಳಿಕೊಂಡಿದ್ದಾರೆ.
ಒಂದೇ ದಿನದ ಇಷ್ಟೆಲ್ಲ ನಿಗಮದಲ್ಲಿ ನಡೆದಿದೆ, ಇದು ಅಚ್ಚರಿಯಲ್ಲ. ಆದರೆ ಅಚ್ಚರಿ ಏನೆಂದರೆ, ವಾಲ್ಮೀಕಿ ನಿಗಮ ಮಾರ್ಚ್ ೩೧ರಂದು ನಡೆದಿದೆ ಎನ್ನಲಾದ ಆಡಳಿತ ಮಂಡಳಿ ಸಭೆಯಲ್ಲಿ ಎಲ್ಲ ಠರಾವುಗಳನ್ನು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಕೂಡ ಅದೇ ದಿನ ಜಾರಿಗೊಳಿಸಿದೆ. ಅಂದರೆ, ೫೦ ಕೋಟಿ ರೂ. ಠೇವಣಿ ಇಟ್ಟುಕೊಂಡು ಪ್ರಮಾಣಪತ್ರ ಕೊಟ್ಟಿದೆ, ಅದೇ ಠೇವಣಿ ಆಧರಿಸಿ ೪೫ ಕೋಟಿ ರೂ.ಗಳನ್ನು ಅದೇ ದಿನ ಸಾಲ ಮಂಜೂರು ಮಾಡಿದೆ, ಸಾಲ ಮಂಜೂರು ಮಾಡಿದ ದಿನವೇ ಎಲ್ಲ ಖಾತೆಗಳನ್ನು ತೆರೆಯಲಾಗಿದೆ.
ಅದೇ ಖಾತೆಗಳಿಗೆ ಸರಿಸುಮಾರು ೯೪ ಕೋಟಿ ರೂ.ಗಳನ್ನು ವರ್ಗಾವಣೆ ಮಾಡಲಾಗಿದೆ.ಇಂತಹುದೊಂದು ಕಾರ್ಯಾಚರಣೆ ಜನಹಿತಕ್ಕೆ ನಡೆದು ಹೋಗಿದ್ದರೆ ರಾಜ್ಯದಲ್ಲಿ ಪರಿಶಿಷ್ಟ ಪಂಗಡದ ಜನರು ಚಿನ್ನದ ತಟ್ಟೆಯಲ್ಲಿ ಊಟ ಮಾಡುತ್ತಿದ್ದರೇನೋ? ಆದರೆ ಈ ಹಣ ಯಾವ ವ್ಯಕ್ತಿಗಳ ಖಾತೆಗೆ ಹೋಗಿದೆಯೋ ಆ ವ್ಯಕ್ತಿಗಳೇ ಅಸ್ತಿತ್ವದಲ್ಲಿ ಇಲ್ಲ ಎನ್ನುತ್ತಿವೆ ಬ್ಯಾಂಕ್ ಮೂಲಗಳು. ಅದೇ ಕಾರಣಕ್ಕೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಕೇಂದ್ರೀಯ ತನಿಖಾ ದಳದ (ಸಿಬಿಐ) ಮೊರೆಹೋಗಿದೆ.

ಯಾರು ಈ ಖತರ್ನಾಕ್ ಶಿವಕುಮಾರ್..?
ವಾಲ್ಮೀಕಿ ನಿಗಮದ ಹಗರಣದ ಕಿಂಗ್‌ಪಿನ್ ಎಂದರೆ ಅದು ಶಿವಕುಮಾರ್ ಎಂಬ ವ್ಯಕ್ತಿ. ನಿಗಮದ ವ್ಯವಸ್ಥಾಪಕ ನಿರ್ದೇಶಕರ ಖಾತೆ ನಿರ್ವಹಣೆಯ ಅಧಿಕಾರವನ್ನು ಈ ಹೆಸರಿಗೆ ಬರೆದುಕೊಟ್ಟ ನಕಲಿ ಒಪ್ಪಿಗೆ ಪತ್ರ ಸೃಷ್ಟಿಸಲಾಗಿದೆ ಎಂಬುದು ನಿಗಮದ ವ್ಯವಸ್ಥಾಪಕ ನಿರ್ದೇಶಕರ ಅಳಲು. ಆದರೆ ಬ್ಯಾಂಕ್ ಅಧಿಕಾರಿಗಳು ನಿಗಮದ ಲೆಕ್ಕ ಸಹಾಯಕ ಎಂದು ಹೇಳಿಕೊಂಡ ಶಿವಕುಮಾರ್ ಎಂಬ ವ್ಯಕ್ತಿಯನ್ನು ಏಕಾಏಕಿ ಹೇಗೆ ನಂಬಿ ನೂರಾರು ಕೋಟಿ ರೂ.ಗಳ ವ್ಯವಹಾರ ನಡೆಸಿದರು ಎಂಬುದೇ ಈಗ ಯಕ್ಷಪ್ರಶ್ನೆ. ಶಿವಕುಮಾರ್ ಎಂಬ ವ್ಯಕ್ತಿ ಮತ್ತು ಲೆಕ್ಕ ಸಹಾಯಕ ಎಂಬ ಹುದ್ದೆ ವಾಲ್ಮೀಕಿ ನಿಗಮದಲ್ಲಿ ಇಲ್ಲವೇ ಇಲ್ಲ ಎಂದು ನಿಗಮದ ಹಿರಿಯ ಅಧಿಕಾರಿಗಳು ಈಗಾಗಲೇ ಸಿಐಡಿಗೆ ಹೇಳಿದ್ದಾರೆ. ಹಾಗಾದರೆ ಬ್ಯಾಂಕ್ ಮತ್ತು ನಿಗಮದ ಸಿಸಿಟಿವಿ ಕ್ಯಾಮರಾದಲ್ಲಿ ಈ ವ್ಯಕ್ತಿ ಸೆರೆ ಆಗಿಲ್ಲವೇ ಎಂಬುದು ಕೂಡ ಕುತೂಹಲದ ಸಂಗತಿ.

ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ
ವಿಶ್ವಸನೀಯ ಮೂಲಗಳ ಪ್ರಕಾರ, ವಾಲ್ಮೀಕಿ ನಿಗಮದಲ್ಲಿ ನಡೆದಿರುವ ಹಗರಣದ ಹಣವನ್ನು ಪ್ರಭಾವಿ ರಾಜಕಾರಣಿಯೊಬ್ಬರು ಸ್ವಂತಕ್ಕೆ ಬಳಸಿಕೊಂಡಿದ್ದಾರೆ ಎಂಬ ಗುಸುಗುಸು ಕೇಳಿಬರುತ್ತಿದೆ. ಅಧಿಕಾರಿಗಳ ಮೇಲೆ ಒತ್ತಡ ಹೇರಿ ಬೇನಾಮಿ ಕಂಪನಿಗಳ ಬೇನಾಮಿ ಖಾತೆಗಳಿಗೆ ಬೇನಾಮಿ ವ್ಯಕ್ತಿಗಳಿಂದ ಹಣ ಡ್ರಾ ಮಾಡಿಕೊಂಡಿದ್ದಾರೆ. ಆ ಹಣವನ್ನು ಚಿತ್ರದುರ್ಗ ನಗರದ ಬಳಿ ೧೬ ಎಕರೆ ಜಮೀನು ಖರೀದಿಸಿ, ಲೇಔಟ್ ನಿರ್ಮಿಸಲು ಉದ್ಯಮಿಯೊಬ್ಬರ ಬಳಿ ಹೂಡಿಕೆ ಮಾಡಿದ್ದಾರೆ ಎಂಬ ಮಾಹಿತಿ ಇದೆ. ಈ ಪ್ರಭಾವಿ ರಾಜಕಾರಣಿ ಕಳೆದ ೩ ತಿಂಗಳಲ್ಲಿ ೫ ಬಾರಿ ಖಾಸಗಿ ವಿಮಾನದ ಮೂಲಕ ಹೈದರಾಬಾದ್‌ಗೆ ಹೋಗಿ ಬಂದಿದ್ದಾರೆ ಎಂದೂ ಹೇಳಲಾಗುತ್ತಿದೆ. ಹೀಗಾಗಿ ಸಿಬಿಐ ತನಿಖೆ ಎತ್ತ ಸಾಗುತ್ತದೆ ಹಾಗೂ ಸಿಐಡಿ ತನಿಖೆ ಯಾವ ದಿಕ್ಕಿನಲ್ಲಿ ತನಿಖೆ ಮುಂದುವರಿಸುತ್ತದೆ ಎಂಬುದನ್ನು ಕಾದು ನೋಡಬೇಕು.