For the best experience, open
https://m.samyuktakarnataka.in
on your mobile browser.

೨ನೇ ಹಂತ: ಮೊದಲ ದಿನವೇ ೫೭ ನಾಮಪತ್ರ

10:21 PM Apr 12, 2024 IST | Samyukta Karnataka
೨ನೇ ಹಂತ  ಮೊದಲ ದಿನವೇ ೫೭ ನಾಮಪತ್ರ

ಬೆಂಗಳೂರು: ಮೇ೭ರಂದು ಮತದಾನ ನಡೆಯಲಿರುವ ೧೪ ಕ್ಷೇತ್ರಗಳ ೨ನೇ ಹಂತದ ಚುನಾವಣೆಗೆ ಅಧಿಸೂಚನೆ ಹೊರಬಿದ್ದ ಬೆನ್ನಲ್ಲೇ ಮೊದಲ ದಿನವೇ ೪೧ ಅಭ್ಯರ್ಥಿಗಳಿಂದ ಒಟ್ಟು ೫೭ ನಾಮಪತ್ರ ಸಲ್ಲಿಕೆಯಾಗಿವೆ. ಉಪಚುನಾವಣೆ ನಡೆಯಲಿರುವ ಸುರಪುರ ವಿಧಾನಸಭೆ ಕ್ಷೇತ್ರಕ್ಕೆ ಒಂದು ಉಮೇದುವಾರಿಕೆ ಸಲ್ಲಿಕೆಯಾಗಿದ್ದು, ಜನಸಾಗರದ ಮೆರವಣಿಗೆ ನಡೆಸಿ ಶಕ್ತಿ ಪ್ರದರ್ಶಿಸಲಾಗಿದೆ.
ಬೆಳಗಾವಿ, ಚಿಕ್ಕೋಡಿ, ಬೀದರ್, ವಿಜಯಪುರ, ಬಾಗಲಕೋಟೆ, ಕೊಪ್ಪಳ, ರಾಯಚೂರು, ಧಾರವಾಡ, ಹಾವೇರಿ, ಉತ್ತರಕನ್ನಡ, ದಾವಣಗೆರೆ, ಬಳ್ಳಾರಿ, ಶಿವಮೊಗ್ಗ ಹಾಗೂ ಕಲಬುರಗಿ ಕ್ಷೇತ್ರಗಳಿಗೆ ೨ನೇ ಹಂತದಲ್ಲಿ ಮತದಾನ ನಡೆಯಲಿದೆ. ಶುಕ್ರವಾರ ಚುನಾವಣಾ ಆಯೋಗ ಈ ಸಂಬಂಧ ಅಧಿಸೂಚನೆ ಹೊರಡಿಸಿತ್ತು. ಏಪ್ರಿಲ್ ೧೯ಕ್ಕೆ ನಾಮಪತ್ರ ಸಲ್ಲಿಕೆಗೆ ಅಂತಿಮ ದಿನವಾಗಿದ್ದು, ೨೦ರಂದು ಉಮೇದುವಾರಿಕೆ ಪರಿಶೀಲನೆ ನಡೆಯಲಿದೆ. ಏ.೨೨ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ.
ಅಖಾಡಕ್ಕಿಳಿದ ಪ್ರಮುಖರು: ಕಲಬುರಗಿ ಕ್ಷೇತ್ರದಿಂದ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯ ರಾಧಾಕೃಷ್ಣ ದೊಡ್ಡಮನಿ, ಬಿಜೆಪಿ ಅಭ್ಯರ್ಥಿ ಡಾ.ಉಮೇಶ್ ಜಾಧವ್, ಉತ್ತರಕನ್ನಡದಿಂದ ವಿಶ್ವೇಶ್ವರ ಹೆಗಡೆ ಕಾಗೇರಿ, ಬಳ್ಳಾರಿಯಿಂದ ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು, ಎದುರಾಳಿ ಕೈ ಹುರಿಯಾಳು ಇ.ತುಕಾರಾಂ, ದಾವಣಗೆರೆ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ, ವಿಜಯಪುರ ಕೈ ಅಭ್ಯರ್ಥಿ ಹೆಚ್.ಅಲಗೂರ, ಕೊಪ್ಪಳದಿಂದ ರಾಜಶೇಖರ ಹಿಟ್ನಾಳ್, ಬಿಜೆಪಿ ಅಭ್ಯರ್ಥಿ ಡಾ.ಬಸವರಾಜು ಕ್ಯಾವಟೂರ, ಪಕ್ಷೇತರ ವಿನಯ್‌ಕುಮಾರ್, ಶಿವಮೊಗ್ಗದಿಂದ ಪಕ್ಷೇತರರಾಗಿ ಕೆ.ಎಸ್.ಈಶ್ವರಪ್ಪ ಶುಕ್ರವಾರ ನಾಮಪತ್ರ ಸಲ್ಲಿಸಿದ ಪ್ರಮುಖರಾಗಿದ್ದಾರೆ.