For the best experience, open
https://m.samyuktakarnataka.in
on your mobile browser.

ತಾವು ಓದಿದ ಶಾಲೆಗೆ 10 ಲಕ್ಷ ರೂಪಾಯಿ ದೇಣಿಗೆ ನೀಡಿದ ಸಿಎಂ

12:53 PM Mar 05, 2024 IST | Samyukta Karnataka
ತಾವು ಓದಿದ ಶಾಲೆಗೆ 10 ಲಕ್ಷ ರೂಪಾಯಿ ದೇಣಿಗೆ ನೀಡಿದ ಸಿಎಂ

ಬೆಂಗಳೂರು: ಎಮ್ಮೆ ಮೇಯಿಸುತ್ತಿದ್ದ ನನ್ನನ್ನು ರಾಜಪ್ಪ ಎಂಬ ಮೇಷ್ಟ್ರು ಮನೆಗೆ ಬಂದು ನೇರವಾಗಿ 5ನೇ ತರಗತಿಗೆ ಸೇರಿಸಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಅವರು 'ನಮ್ಮ ಶಾಲೆ ನಮ್ಮ ಜವಾಬ್ದಾರಿ' - ಸರ್ಕಾರಿ ಶಾಲೆಗಳ ಅಭಿವೃದ್ಧಿ ಹಾಗೂ ಬಲವರ್ಧನೆ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಿ, ಶಾಲಾ ಮಕ್ಕಳೊಂದಿಗೆ ಸಂವಾದ ನಡೆಸಿ ಮಾತನಾಡಿರುವ ಅವರು ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕು. ವೈಚಾರಿಕತೆ, ವೈಜ್ಞಾನಿಕತೆ ಬೆಳೆಸಿಕೊಳ್ಳಬೇಕು. ಜ್ಞಾನದ ವಿಕಾಸವಾಗಬೇಕು.

ಮಕ್ಕಳು ಸಂವಿಧಾನವನ್ನು ಕೇವಲ ಕಂಠಪಾಠ ಮಾಡಿದರೆ ಸಾಲದು, ಅದರ ತಿರುಳನ್ನು ಅರಿತು ಅದರಂತೆ ನಡೆಯಬೇಕು.
ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಸಂವಿಧಾನದ ತಿರುಳು. ಅಸಮಾನತೆ ಇಲ್ಲದ ಸಮಸಮಾಜ ನಿರ್ಮಾಣವಾಗಬೇಕು. ಬುದ್ಧ, ಬಸವ, ಅಂಬೇಡ್ಕರ್ ಅವರು ಇದನ್ನೇ ಹೇಳಿಕೊಂಡು ಬಂದಿದ್ದಾರಾದರೂ ಅಸಮಾನತೆ ಪೂರ್ಣವಾಗಿ ಹೋಗಿಲ್ಲ. ಇದೆಲ್ಲ ಓದಿ ಅರ್ಥ ಮಾಡಿಕೊಂಡು ಮಕ್ಕಳು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು.

ಸರ್ಕಾರಿ ಶಾಲೆಗಳಲ್ಲಿ ಕೆಲವು ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಶಾಲೆಯ ಅಭಿವೃದ್ಧಿಗೆ ಸರ್ಕಾರ ಉಚಿತ ಶಿಕ್ಷಣ ನೀಡುತ್ತಿದೆ. ಸಂವಿಧಾನ ಜಾರಿಗೆ ಬಂದ ನಂತರ ಉಚಿತ ಶಿಕ್ಷಣವನ್ನು ಮೂಲಭೂತ ಹಕ್ಕನ್ನಾಗಿ ಮಾಡಲಾಗಿದೆ. ಹಾಗಾಗಿ ಎಲ್ಲರಿಗೂ ಶಿಕ್ಷಣ ಕಡ್ಡಾಯವಾಗಿದೆ.

"ನಾನು ಓದುವಾಗ ಸಂವಿಧಾನ ಜಾರಿಗೆ ಬಂದಿತ್ತು. ನಾನು ಹುಟ್ಟಿದ್ದು ಸ್ವಾತಂತ್ರ್ಯ ಪೂರ್ವದಲ್ಲಿ. ನಂಜೇಗೌಡ ಎಂಬುವರು ನನಗೆ ಅಕ್ಷರಾಭ್ಯಾಸ ಮಾಡಿಸಿದರು. ಕನ್ನಡ ಓದು ಬರೆಯುವುದು, ಲೆಕ್ಕ ಮಾಡುವುದನ್ನು ಹೇಳಿಕೊಟ್ಟಿದ್ದರು. ಶಾಲೆ ಬಿಟ್ಟ ನಂತರ ಎಮ್ಮೆ ಮೇಯಿಸುತ್ತಿದ್ದ ನನ್ನನ್ನು ರಾಜಪ್ಪ ಎಂಬ ಮೇಷ್ಟ್ರು ಮನೆಗೆ ಬಂದು ನೇರವಾಗಿ 5ನೇ ತರಗತಿಗೆ ಸೇರಿಸಿದ್ದರು. 8ನೇ ತರಗತಿ ಓದಲು ಕುಪ್ಪೆಗಾಲಕ್ಕೆ ಹೋಗುತ್ತಿದ್ದೆ. ಪ್ರೌಢ ಶಾಲೆಗೆ ವಿದ್ಯಾವರ್ಧಕ ಶಾಲೆಗೆ ಸೇರಿದ್ದೆ. ನಿಮಗಿರುವ ಸೌಲಭ್ಯ ನಮಗಿರಲಿಲ್ಲ. ಶಾಲೆಯ ದಾಖಲೆಗಳಲ್ಲಿ ನನ್ನ ಹುಟ್ಟಿದ ದಿನಾಂಕ 3-8- 1947 ಎಂದು ನಮೂದಾಗಿದೆ.

ಈಗ ಸರ್ಕಾರ ಹಾಲು, ಮೊಟ್ಟೆ, ಚಿಕ್ಕಿ, ಬಿಸಿಯೂಟ, ಸಮವಸ್ತ್ರ ನೀಡುತ್ತಿದೆ. ನಮ್ಮ ಕಾಲದಲ್ಲಿ ಶಿಕ್ಷಕರಿಂದ ಏಟನ್ನೂ ತಿನ್ನುತ್ತಿದ್ದೆವು. ಅಂದಿನ ಹೆಣ್ಣು ಮಕ್ಕಳು ಹೆಚ್ಚಾಗಿ ಓದುತ್ತಿರಲಿಲ್ಲ ಆದರೆ ಇಂದು ಈ ಸ್ಥಿತಿ ಬದಲಾಗಿದೆ. ಈಶ್ವರಾಚಾರ್ ಎಂಬ ಮೇಸ್ಟ್ರು ಹೇಳಿಕೊಟ್ಟಿದ್ದ ಕನ್ನಡ ವ್ಯಾಕರಣವನ್ನು ನಾನು ಈಗಲೂ ಮರೆತಿಲ್ಲ ಎಂದರು.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ, ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್‌, ಕಂದಾಯ ಸಚಿವ ಕೃಷ್ಣಭೈರೇಗೌಡ,, ಉನ್ನತ ಶಿಕ್ಷಣ ಸಚಿವ ಸುಧಾಕರ್, ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಅಭಿವೃದ್ಧಿ ಆಯುಕ್ತರು ಹಾಗೂ ಅಪರ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.