For the best experience, open
https://m.samyuktakarnataka.in
on your mobile browser.

ತಿನ್ನುವುದಕ್ಕಿಂತ ತಿನ್ನಬೇಕೆನ್ನುವುದೇ ಹೆಚ್ಚು ರುಚಿ

02:30 AM Mar 05, 2024 IST | Samyukta Karnataka
ತಿನ್ನುವುದಕ್ಕಿಂತ ತಿನ್ನಬೇಕೆನ್ನುವುದೇ ಹೆಚ್ಚು ರುಚಿ

ಪ್ರಾರ್ಥನೆ ಅಂದರೇನು? ದೇವ! ನಿನ್ನ ಇಚ್ಛೆಯಂತೆಯೇ ನಡೆಯಲಿ! ಎಲ್ಲವೂ ನಿನ್ನಿಚ್ಛೆಯಂತೆಯೇ ನಡೆಯುತ್ತದೆ! ಎಂಬ ಆತ್ಮನಿವೇದನಾ ಭಾವಕ್ಕೆ ನಮ್ಮ ಮನಸ್ಸನ್ನು ಶ್ರುತಿಗೊಳಿಸುವುದೇ, ಹದಗೊಳಿಸುವುದೇ ಪ್ರಾರ್ಥನೆ. ಎಲ್ಲಾ ಬಯಕೆಗಳಿಂದ ಮೀರಿರುವ ಆ ಸ್ಥಿತಿಗೆ, ಸರ್ವಸಮರ್ಪಣ ಭಾವದಿಂದ ಏರುವುದೇ ಪ್ರಾರ್ಥನೆ. 'ನನ್ನದೇನೂ ಇಲ್ಲ' ಎಂಬ ಆತ್ಮಾರ್ಪಣ ಭಾವವೇ ಪ್ರಾರ್ಥನೆಯ ಜೀವಾಳ. ಕುಚೇಲನಲ್ಲಿದ್ದದು ಒಂದು ಹಿಡಿ ಅವಲಕ್ಕಿ. ಅದು ಹೇಗೆ ಅಕ್ಷಯವಾಯಿತು? 'ಕೃಷ್ಣಾರ್ಪಣ' ಎಂದದ್ದರಿಂದ. ಎಲ್ಲವನ್ನೂ ಕೃಷ್ಣಾರ್ಪಣ ಬುದ್ಧಿಯಿಂದ ನೋಡಬೇಕು. ಯಾವುದನ್ನು ಸ್ವೀಕರಿಸುತ್ತೇವೋ ಅದೆಲ್ಲ ಕೃಷ್ಣಾನುಗ್ರಹ ಎಂಬಂತಿರಬೇಕು. ಮಂತ್ರಗಳು ಅಥವಾ ಶ್ಲೋಕಗಳಲ್ಲಿ ಅಡಕವಾಗಿರುವ ಶಬ್ದಗಳ ಕ್ರಮವು ನಿರ್ಧಿಷ್ಟ ಶಕ್ತಿಯನ್ನು ಹೊಂದಿದ್ದು ನಿರ್ಧಿಷ್ಟ ಪರಿಣಾಮಗಳನ್ನು ಉಂಟುಮಾಡುತ್ತವೆ.
ವಿಜ್ಞಾನ ಸೃಷ್ಟಿಗೆ ಸವಾಲೆಸೆಯುತ್ತಾ ಬಂದಿದ್ದರೆ; ಅಧ್ಯಾತ್ಮ ಸೃಷ್ಟಿಗೆ ಶರಣಾಗುತ್ತಾಲೇ ಬಂದಿದೆ. ಪ್ರಕೃತಿಯಂತೂ ಪರಿಪೂರ್ಣ ಸತ್ಯವನ್ನು ಯಾರಿಗೂ ಬಿಟ್ಟುಕೊಡುವುದಿಲ್ಲ. ಪರಿಪೂರ್ಣತೆಯ ಅನ್ವೇಷಣೆ ಸದಾ ನಡೆಯುತ್ತಿರಬೇಕಾದುದು ವಿಶ್ವನಿಯಮ. ವಿಜ್ಞಾನ ಹುಟ್ಟು ಮತ್ತು ಸಾವಿನ ಮಧ್ಯೆ ಸೀಮಿತವಾಗಿದ್ದರೆ; ಅಧ್ಯಾತ್ಮ ಹುಟ್ಟಿನಾಚೆಗೂ, ಸಾವಿನಾಚೆಗೂ ವಿಸ್ತರಿಸಿಕೊಂಡಿದೆ. ವ್ಯಕ್ತಿಗತ ಪ್ರಜ್ಞೆಯು ವಿಶ್ವಪ್ರಜ್ಞೆಗೆ ವಿಸ್ತರಿಸಲ್ಪಟ್ಟಾಗ ಅನ್ಯರ ಸಲುವಾಗಿ ನೋವನ್ನು ಅನುಭವಿಸುವುದರಲ್ಲಿಯೂ ತೃಪ್ತಿಸಿಗುತ್ತದೆ. ಅಧ್ಯಾತ್ಮದಲ್ಲಿ 'ಏಕಾಂಗಿ' ಅನ್ನೋದು 'ಎಲ್ಲವನ್ನೂ ಒಳಗೊಂಡಿರುವುದು' ಎಂದರ್ಥ. ಯಾರು ಯಾವ ಉದ್ದೇಶದಿಂದ ಧ್ಯಾನಾವಸ್ಥೆಗೆ ಹೋಗುತ್ತಾರೋ ಅವರು ಅದೇ ಆಗುತ್ತಾರೆ. ಉನ್ನತ ಪ್ರಜ್ಞಾವಲಯದಿಂದ ನಮ್ಮೊಳಗೆ ಹರಿದುಬರುವ ಮಾಹಿತಿ ನಮ್ಮ ದೇಹದೊಳಗಿನ ಶಕ್ತಿಯ ಹಲವು ವ್ಯವಸ್ಥೆಗಳು (ಭೌತಿಕ, ಬಾಹ್ಯಾಕಾಶ, ಭಾವನಾತ್ಮಕ, ಮಾನಸಿಕ ಮತ್ತು ಅಧ್ಯಾತ್ಮಿಕ) ಮತ್ತು ಆಯಾಮಗಳ ಮೂಲಕ ಹಾದುಬರುತ್ತದೆ. ವಾಹಿನಿಗಳು ತಡೆರಹಿತವಾಗಿದ್ದರೆ ಶಕ್ತಿಯು ಬಲವಾಗಿರುತ್ತದೆ ಹಾಗೂ ಹರಿದುಬರುವ ಮಾಹಿತಿಯು ಪರಿಶುದ್ಧ ರೂಪದಲ್ಲಿರುತ್ತದೆ. ಯಾವ ಜೀವನಕ್ರಮ ನಮ್ಮನ್ನು ಸಾಮಾನ್ಯರನ್ನಾಗಿಸಿ ಅದನ್ನೇ ಅಂತಃಶಕ್ತಿಯನ್ನಾಗಿ ಪರಿವರ್ತಿಸುತ್ತದೆಯೋ ಅದೇ ನಿಜವಾದ ಅಧ್ಯಾತ್ಮ. ಈ ಹೊತ್ತು ಅತಿಯಾದ ಆಧುನೀಕರಣದ ನಡುವೆಯೂ ಅಧ್ಯಾತ್ಮವು ತನ್ನಿಂದ ತಾನೇ ಶ್ರೀಮಂತ ಸ್ವರೂಪವನ್ನು ಪಡೆದಿದೆ. ಜ್ಞಾನಾರ್ಜನೆಯಲ್ಲಿ ಶರಣಾಗತಿ ಮತ್ತು ಮುಗ್ಧತೆ ಇರಬೇಕು.
ಏನಿದ್ದರೂ ಅಂತರ್ಮುಖಿ ಮತ್ತು ಬಹಿರ್ಮುಖಿಗಳ ಪ್ರಯಾಣ ಪ್ರಾರಂಭವಾಗುವುದು ತಮ್ಮ ಸ್ವಂತ ದೇಹದಿಂದಲೇ. ಬಹಿರ್ಮುಖಿಗೆ ಶ್ವಾಸ ಕೇವಲ ಗಾಳಿಯಾಗಿದ್ದರೆ ಅಂತರ್ಮುಖಿಗೆ ಅದು ಪ್ರಾಣವಾಯು. ಬಹಿರ್ಮುಖಿಗೆ ನಾಲಿಗೆ ಕೇವಲ ಒಂದು ಮಾಂಸದ ತುಂಡಾಗಿದ್ದರೆ ಅಂತರ್ಮುಖಿಗೆ ಅದೊಂದು ಅದ್ಭುತ ಚಟುವಟಿಕೆಯ ಕೇಂದ್ರ. ಬಹಿರ್ಮುಖಿ ಬಾಹ್ಯಪ್ರಪಂಚದ ಸೌಂದರ್ಯವನ್ನು ಆಸ್ವಾದಿಸಿದರೆ ಅಂತರ್ಮುಖಿಗೆ ದೇಹದೊಳಗಿನ ಚಲನವಲನಗಳ ಮೇಲೆ ಆಸಕ್ತಿ. ವರ್ತಮಾನವನ್ನಷ್ಟೇ ಯೋಚಿಸುವಾಗ ನಮ್ಮ ಸುತ್ತಮುತ್ತಲಿನ ಪ್ರಪಂಚದಲ್ಲಿ ತೊಡಕುಗಳು ಗೋಚರವಾಗುತ್ತವೆ. ದೂರದೃಷ್ಟಿಯಿಂದ ಈ ಭೂಮಿಯನ್ನು ಅವಲೋಕಿಸಿದರೆ 'ಕಾರಣವಿಲ್ಲದೆ ಇಲ್ಲಿ ಏನೂ ನಡೆಯುವುದಿಲ್ಲ' ಎಂಬ ತಿಳುವಳಿಕೆ ಮೂಡುತ್ತದೆ. ದುರ್ಯೋಧನನ ದುರ್ಬುದ್ಧಿಗೋಸ್ಕರ ಭಗವದ್ಗೀತೆ ದೊರೆಯಿತು. ಹಿರಣ್ಯಕಶಿಪು, ರಾವಣ, ಕಂಸ, ಶಿಶುಪಾಲಾದಿಗಳೂ ಕಾಲಾನುಕಾಲಕ್ಕೆ ಭಗವದ್ದರ್ಶನವನ್ನು ಪಡೆದವರು. ಇದೇ ಉಪನಿಷತ್ತಿನ ತಾತ್ಪರ್ಯ.
ತಾನು ಜೀವಮಾನದಲ್ಲಿ ಯಾರನ್ನೂ ನೋಯಿಸಿಲ್ಲ ಎನ್ನುವವನೂ ತನ್ನ ತಾಯಿಯನ್ನು ನೋಯಿಸಿಯೇ ಭೂಮಿಗೆ ಬಂದಿರುತ್ತಾನೆ! ಮನುಷ್ಯನ ಹೊರತಾಗಿ ಉಳಿದೆಲ್ಲಾ ಜೀವರಾಶಿಗಳ ಪ್ರಕೃತಿ ಸಹಜ ಬದುಕು ಅವುಗಳಿಗೆ ಅಸ್ತಿತ್ವವನ್ನು ಉಳಿಸಿಕೊಳ್ಳಲು ಬೇಕಾದ ಜ್ಞಾನವನ್ನು ನೀಡಿ ಸಲಹಿದೆ. ಅವೆಲ್ಲವೂ ಹುಟ್ಟುಧ್ಯಾನಿಗಳು. ಹುಟ್ಟಿಬರುವ ಪ್ರತಿಯೊಂದು ಮಗುವೂ ಯಾವುದೋ ಒಂದುರೀತಿಯ ಪರಿಪೂರ್ಣತೆಯನ್ನು ಪಡೆದೇ ಹುಟ್ಟುತ್ತದೆ. ಅದು ವ್ಯಕ್ತವಾಗಲು ಅನುಕೂಲಕರ ವಾತಾವರಣವನ್ನು ಒದಗಿಸಿಕೊಟ್ಟಲ್ಲಿ ಆ ಶಕ್ತಿ ಎಚ್ಚೆತ್ತುಕೊಂಡು ಕಾರ್ಯನಿರತವಾಗುತ್ತದೆ. ನೈಸರ್ಗಿಕ ವಿದ್ಯಾಭ್ಯಾಸ ಮತ್ತು ಆಹಾರಕ್ರಮವನ್ನು ಕಳಕೊಂಡ ಇಂದಿನ ಪೀಳಿಗೆ ಮುಂದೆ ಬೆಳೆದುಬರುತ್ತಲೇ ಮಾನಸಿಕ ಹಾಗೂ ದೈಹಿಕವಾದ ಅಸಮತೋಲನದಿಂದ ನರಳುತ್ತದೆ.
ಅನುಭವಿ ರೈತನಿಗೆ ಇದೇ ಮಣ್ಣು ಮುತ್ತಿನಂಥ ಬೆಳೆಯನ್ನು ಬೆಳೆಯುವ ಚಿನ್ನ. ಅರಿಯದ ಅಜ್ಞಾನಿಗೆ ಭೂತಾಯಿ ಬರೀ ಕಲ್ಲು, ಮಣ್ಣು. ನಂಬಿಕೆ ತಿಳುವಳಿಕೆಯನ್ನು ಗಟ್ಟಿಗೊಳಿಸುತ್ತದೆ. ನಂಬಿಕೆ ತಿಳುವಳಿಕೆಯ ಗಟ್ಟಿಯಾದ ಮೆಟ್ಟಿಲು. ತಿಳಿವು ಬೇಕಾದರೆ ಹತ್ತಿರ ಹೋಗಿ ಬಾಗಿ ಕೇಳಬೇಕು. ಬಲ್ಲವರು ತಿಳಿವನ್ನು ನೀಡಲೆಂದೇ ಇರುತ್ತಾರೆ. ಬದುಕಿನಲ್ಲಿ ತಿಳುವಳಿಕೆಯನ್ನು ಬಿಟ್ಟು ಯಾವುದು ದೊಡ್ಡದಿದೆ? ಕಾಲಕ್ಕೆ ಯಾರ ನೆಂಟಸ್ಥಿಕೆಯೂ ಬೇಕಿಲ್ಲ. ಅದು ಯಾರ ಹಾದಿಯನ್ನೂ ಕಾಯುವುದಿಲ್ಲ. ಬಿಸಿಲು-ನೆರಳಿನ ಅನುಭವ ಪಡೆಯುತ್ತಾ ಅದರ ರಥ ನಿರಂತರ ಓಡುತ್ತಲೇ ಇರುತ್ತದೆ. ಸಂತೋಷವು ತೀವ್ರತೆಯ ವಿಷಯವಲ್ಲ; ಆದರೆ ಕ್ರಮ, ಲಯ ಮತ್ತು ಸಾಮರಸ್ಯದ ಸಮತೋಲನ. ಮಾರುವ, ಕೊಳ್ಳುವ ವಸ್ತುಗಳು ಅಂಗಡಿಯಲ್ಲಿ ಒಂದು ಮಿತಿಗೆ ಒಳಪಟ್ಟಿವೆ. ಅಂಗಡಿಯಿಂದ ಬಟ್ಟೆಯನ್ನೋ, ಚಿನ್ನವನ್ನೋ ಕೊಳ್ಳಬಹುದು. ಆದರೆ ಪ್ರೀತಿಯನ್ನೋ, ಕೋಪವನ್ನೋ ಅಲ್ಲಿ ಹಣಕೊಟ್ಟು ಪಡೆಯಲಾರೆವು. ಕಣ್ಣಿಗೂ ಎದೆಗೂ ತುಂಬಾ ಹತ್ತಿರದ ಸಂಬಂಧ. ಎದೆ ಇಲ್ಲದವನಿಗೆ ಕಣ್ಣು ಸರಿಕಾಣಿಸದು. ಕಲ್ಲಿನಂತಹುದಿದ್ದರೆ ಕಣ್ಣಿನಿಂದ ಕೆಂಡ. ಪ್ರಕೃತಿಯೆದುರು ಶರಣಾಗುವ ಪ್ರಕ್ರಿಯೆಯೇ ಅಧ್ಯಾತ್ಮದ ಆರಂಭ.
ಮದುವೆಯು ಸಮಾಜದ ಉಳಿಯುವಿಕೆ ಮತ್ತು ಬೆಳೆಯುವಿಕೆಗೆ ಆಧಾರ. ಧರ್ಮವು ಉಳಿಯಲೂ ಮದುವೆ ಅಗತ್ಯ. ಆದ್ದರಿಂದ ವಿವಾಹವು ದೇಹಧರ್ಮದ ಅಗತ್ಯ ಮಾತ್ರವಾಗಿರದೆ ಸಾಮಾಜಿಕ ಮತ್ತು ಧಾರ್ಮಿಕ ಅಗತ್ಯವೂ ಆಗಿದೆ. ಮದುವೆಯು ವ್ಯಕ್ತಿಗತವಾದ ಅಗತ್ಯ ಎಂದು ಭಾವಿಸುವುದು ಅಜ್ಞಾನವೇ. ಯಾರು ಕಷ್ಟಪಡುವುದಿಲ್ಲವೋ ಅವನ ಮೂಳೆ ಬಲಿಯುವುದಿಲ್ಲ. ಯಾರು ಯುದ್ಧಕ್ಕೆ ಸಿದ್ಧನಿಲ್ಲವೋ ಅವನು ಧರ್ಮವನ್ನು ಸಂರಕ್ಷಿಸಲಾರ. ಎಲ್ಲಿವರೆಗೆ ಮನುಷ್ಯನಲ್ಲಿ ತಾನು ಮಾಡುತ್ತಿರುವ ಕರ್ಮದ ಪ್ರತಿನಿಧಿ ತಾನು ಮತ್ತು ಆ ಕರ್ಮಫಲ ತನ್ನದು ಎಂಬ ಪ್ರಜ್ಞೆ ಇದೆಯೋ ಅಲ್ಲಿವರೆಗೂ ಅವನು ಸುಮ್ಮನೆ ಸೋಮಾರಿಯಾಗಿ ಕೆಲಸಮಾಡದೆ ಇರಲು ಸಾಧ್ಯವಿಲ್ಲ. ಮಾನವ ಸ್ವಭಾವದಲ್ಲಿ ಕರ್ಮ ರಕ್ತಗತವಾಗಿದೆ. ಮನುಷ್ಯನಿಗೆ ಬುದ್ಧಿ ತಿಳಿದಾಗಿನಿಂದ ಕರ್ಮಸಂಗ್ರಹ ಪ್ರಾರಂಭವಾಗುತ್ತದೆ. ಕಳಂಕಭರಿತ ಮನಸ್ಸೇ ಎಲ್ಲಾ ರೋಗರುಜಿನಗಳ ಮೂಲ. ದುಃಖದಲ್ಲಿರುವವರ ರಕ್ತದಲ್ಲಿ ಬಿಳಿರಕ್ತಕಣಗಳು ಬೇಗಬೇಗನೆ ಸಾಯುತ್ತವೆ. ವಸ್ತುಸ್ಥಿತಿಯ ಅರಿವಿಲ್ಲದವನಿಗೆ ಬದುಕು ಯಾವಾಗಲೂ ಸರಾಗವಾಗುತ್ತದೆ. ವಿಮರ್ಶೆಗೆ ಇಳಿದವರು ಇಲ್ಲಿ ಸಂಕಟಕ್ಕೆ ಒಳಗಾಗುತ್ತಾರೆ.
ಬಹಳ ಸಿಹಿಯಾದುದನ್ನು ಹೆಚ್ಚು ತಿನ್ನಲಾಗುವುದಿಲ್ಲ. ತಿನ್ನುವುದಕ್ಕಿಂತ ತಿನ್ನಬೇಕೆನ್ನುವುದೇ ಹೆಚ್ಚು ರುಚಿ. ಪ್ರವಾಹಿಯಾದ ಮನಸ್ಸು ಒಮ್ಮೊಮ್ಮೆ ಘನವಾಗುವುದೂ ಇದೆ. ಪ್ರತಿಯೊಂದು ಬಗೆಯ ಪ್ರಚೋದನೆಗೆ ನೀಡುವ ಪ್ರತಿಕ್ರಿಯೆಯ ಮೂಲಕ ಮನಸ್ಸಿನ ಚಟುವಟಿಕೆಯನ್ನು ಗ್ರಹಿಸಬಹುದು. ಪ್ರಚೋದನೆ ಹಾಗೂ ಪ್ರತಿಕ್ರಿಯೆಗಳು ಎಲ್ಲ ಹಂತಗಳಲ್ಲಿ ಕಂಡುಬರುವ ಸಂಬಂಧಗಳು. ಬೆಂಕಿಯ ಕಾವೂ, ಚಮ್ಮಟಿಗೆಯ ಪೆಟ್ಟೂ ತಟ್ಟಿದಾಗ ಲೋಹ ನಾಣ್ಯವಾಗಿ ಬದಲಾಗುತ್ತದೆ. ಲೋಕದ ಏಟುಪೋಟುಗಳೂ ಮನುಷ್ಯಸ್ವಭಾವವನ್ನು ತಿದ್ದಿ ಹದಗೊಳಿಸಿ ಲೋಕಪ್ರಯೋಜನಕ್ಕೆ ಒದಗಿಸುತ್ತವೆ. ಸಮುದ್ರದಲ್ಲಿ ನೀರು ಬೇರೆ, ಅಲೆ ಬೇರೆ ಅಲ್ಲ. ಎರಡೂ ಒಂದೇ. ಆದರೂ ಅಲೆಯು ಅಲೆಯಾಗಿರುವಷ್ಟರ ಮಟ್ಟಿಗಷ್ಟೇ ಬೇರೆ. ನಗರವನ್ನು ಮನುಷ್ಯ ಸೃಷ್ಟಿಸಿದ; ಗ್ರಾಮವನ್ನು ದೇವರು ನಿರ್ಮಿಸಿದ.
ಭರ್ತೃಹರಿ ಕವಿ ತನ್ನ ನೀತಿಶತಕದಲ್ಲಿ ಕಾರ್ಯೋನ್ಮುಖನ ಗುಣಸ್ವಭಾವವನ್ನು ಹೀಗೆ ವಿವರಿಸಿದ್ದಾನೆ: “ಸ್ವೀಕೃತ ಮಾರ್ಗದಲ್ಲಿ ಮುನ್ನಡೆಯುವಾಗ ಒಂದು ಕಡೆ ಬರಿ ನೆಲದ ಮೇಲೆ ಮಲಗಬೇಕಾಗಿ ಬಂದರೆ; ಬೇರೊಂದು ಕಡೆ ಸುಪ್ಪತ್ತಿಗೆಯ ಶಯನಸುಖ. ಒಂದು ಕಡೆ ಸೊಪ್ಪುಸದೆಯೇ ಆಹಾರ; ಮತ್ತೊಂದು ಕಡೆ ಮೃಷ್ಟಾನ್ನ ಭೋಜನ, ಆದರಾತಿಥ್ಯ. ಒಮ್ಮೆ ಚಿಂದಿ ಉಡುಪು; ಮತ್ತೊಮ್ಮೆ ಕಣ್ಕೋರೈಸುವ ದಿವ್ಯಾಂಬರ. ಸುಖವಿರಲಿ ದುಃಖವಿರಲಿ ಮನಸಾರೆ ಕಾರ್ಯವನ್ನು ಸ್ವೀಕರಿಸಿದ ಸಾಧಕ ಅದನ್ನೆಂದೂ ಲೆಕ್ಕಿಸುವುದಿಲ್ಲ.”