For the best experience, open
https://m.samyuktakarnataka.in
on your mobile browser.

ತಿರುಪತಿ ಲಡ್ಡು ಕಲಬೆರಕೆ ಭಕ್ತರ ಭಾವನೆ ಜತೆ ಚೆಲ್ಲಾಟ ಬೇಡ

02:31 AM Sep 21, 2024 IST | Samyukta Karnataka
ತಿರುಪತಿ ಲಡ್ಡು ಕಲಬೆರಕೆ ಭಕ್ತರ ಭಾವನೆ ಜತೆ ಚೆಲ್ಲಾಟ ಬೇಡ

ತಿರುಪತಿ ಬಾಲಾಜಿ ಲಡ್ಡು ಪ್ರಸಾದದಲ್ಲಿ ಪ್ರಾಣಿಜನ್ಯ ಕೊಬ್ಬಿನ ಅಂಶದ ಮಾತು ಕೇಳಿ ಬಂದಿರುವುದು ನಿಜಕ್ಕೂ ಕಳವಳಕಾರಿ ಅಂಶವಾಗಿದೆ. ಇದು ಭಾರತ ಮತ್ತು ವಿಶ್ವದೆಲ್ಲೆಡೆಯ ಕೋಟ್ಯಂತರ ಹಿಂದೂ ಭಕ್ತಾದಿಗಳ ಮನದಲ್ಲಿ ತಲ್ಲಣದ ಅಲೆಗಳನ್ನು ಸಹಜವಾಗಿ ಎಬ್ಬಿಸಿದೆ. ಇದು ಬಹುದೊಡ್ಡ ಭಾವನಾತ್ಮಕ ವಿಷಯವಾಗಿದ್ದು, ಭಕ್ತರ ನಂಬಿಕೆ ಮತ್ತು ಶ್ರದ್ಧೆಗಳೊಂದಿಗೆ ಆಟವಾಡಿರುವುದು ನೋವಿನ ಸಂಗತಿ.
೧೯೩೨ರಿಂದ ಜನರ ಭಾವನಾತ್ಮಕ ಬದುಕಿನ ಅವಿಭಾಜ್ಯ ಅಂಗವಾಗಿರುವ ಶ್ರೀ ವೆಂಕಟೇಶ್ವರ ಸ್ವಾಮಿ ಲಡ್ಡು ಪ್ರಸಾದದ ವಿಷಯದಲ್ಲಿ ಈತನಕ ಒಂದೇ ಒಂದು ಅಪಸ್ವರದ ಮಾತು ಇರಲಿಲ್ಲ. ಈಗ ಸ್ವತಃ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರೇ, ಹಿಂದಿನ ಸರ್ಕಾರದ ಅವಧಿಯಲ್ಲಿ ಪ್ರಸಾದಕ್ಕೆ ಬಳಸಲಾಗುತ್ತಿದ್ದ ತುಪ್ಪದಲ್ಲಿ ಪ್ರಾಣಿಜನ್ಯ ಕೊಬ್ಬಿನಂಶದ ಮಿಶ್ರಣವಾಗುತ್ತಿತ್ತು ಎಂದಿರುವುದು ದೇಶವನ್ನು ವಿಚಲಿತಗೊಳಿಸಿದೆ.
ಹಿಂದಿನ ಸರ್ಕಾರದ ವಿರುದ್ಧ ಟೀಕೆ ಮಾಡುವ ಸಂದರ್ಭದಲ್ಲಿ ವೆಂಕಟೇಶ್ವರ ಸ್ವಾಮಿ ವಿಷಯದಲ್ಲಿ ಅಕ್ರಮಗಳನ್ನು ಎಸಗಲಾಯಿತು ಎಂಬ ಟೀಕೆಯಲ್ಲಿ ರಾಜಕೀಯ ವಾಸನೆಯಂತೂ ಇದ್ದೇ ಇದೆ. ಆದರೆ ಇದು ಕೋಟ್ಯಂತರ ಭಾರತೀಯರ ಭಾವನೆಗಳಿಗೆ ಸಂಬಂಧಿಸಿದ ವಿಷಯವಾಗಿರುವುದರಿಂದ ರಾಜಕೀಯವನ್ನು ಬದಿಗಿಟ್ಟು ಸಂಪೂರ್ಣ ಪಾರದರ್ಶಕ ತನಿಖೆಯ ಅವಶ್ಯಕತೆ ಎದುರಾಗಿದೆ.
ಪ್ರಯೋಗಾಲಯದ ವರದಿ ಕೂಡ ಪ್ರಸಾದದಲ್ಲಿ ಬಳಸಲಾಗುತ್ತಿದ್ದ ಪ್ರಾಣಿಜನ್ಯ ಕೊಬ್ಬಿನಂಶವನ್ನು ದೃಢಪಡಿಸಿರುವುದರಿಂದ, ರಾಜಕೀಯ ಮತ್ತು ವೈಯಕ್ತಿಕ ಟೀಕೆಗಳನ್ನು ಮೀರಿ ಆಲೋಚನೆ ಮಾಡಬೇಕಾದುದು ಸರ್ಕಾರದ ಹೊಣೆಯಾಗಿದೆ.
ಶ್ರೇಷ್ಠ ಗುಣಮಟ್ಟದ ಕಾರಣಕ್ಕೆ ಶ್ರೀವಾರಿ ಲಡ್ಡು ಪ್ರಸಾದಕ್ಕೆ ಅಂದಿನ ಅವಿಭಿತ ಆಂಧ್ರಪ್ರದೇಶ ಸರ್ಕಾರ ಕರ್ನಾಟಕದ ನಂದಿನಿ ತುಪ್ಪವನ್ನೇ ಸುಮಾರು ಇಪ್ಪತ್ತು ವರ್ಷಗಳವರೆಗೆ ಸತತವಾಗಿ ಖರೀದಿ ಮಾಡುತ್ತಿತ್ತು. ಆದರೆ ನಿಕಟಪೂರ್ವ ಜಗನ್‌ಮೋಹನ್ ರೆಡ್ಡಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕಡಿಮೆ ಬೆಲೆ ನಿಗದಿ ಪಡಿಸಿ ತುಪ್ಪಕ್ಕೆ ಟೆಂಡರ್ ಕರೆಯಲಾಗಿತ್ತು. ತನಗೆ ನಷ್ಟ ಉಂಟು ಮಾಡುತ್ತಿದ್ದ ಈ ಕಡಿಮೆ ದರದ ಟೆಂಡರ್‌ನಲ್ಲಿ ಭಾಗವಹಿಸಲು ಕೆಎಂಎಫ್ ನಿರಾಕರಿಸಿ ಪ್ರಕ್ರಿಯೆಯಿಂದ ದೂರ ಉಳಿದದ್ದು ಸಹಜ ಮತ್ತು ನ್ಯಾಯಯುತವಾಗಿತ್ತು. ಇದೇ ಕಾರಣದಿಂದ ತಮಿಳುನಾಡು ಮತ್ತು ಉತ್ತರ ಪ್ರದೇಶದ ಎರಡು ಖಾಸಗಿ ಕಂಪನಿಗಳಿಗೆ ತುಪ್ಪ ಪೂರೈಸುವ ಟೆಂಡರ್ ಮಂಜೂರಾಗಿತ್ತು.
ಇಲ್ಲಿಯೇ ಅಕ್ರಮ ಶುರುವಾಗಿ ಪಾವಿತ್ರ್ಯಕ್ಕೆ ಧಕ್ಕೆ ಬಂದದ್ದು ಎಂಬುದು ಮುಖ್ಯಮಂತ್ರಿ ನಾಯ್ಡು ಅನಿಸಿಕೆ. ಆಂಧ್ರ ಮುಖ್ಯಮಂತ್ರಿಯ ಹೇಳಿಕೆಯ ನಂತರ ಕೇಂದ್ರ ಸರ್ಕಾರ ತೀವ್ರ ಕಳವಳ ವ್ಯಕ್ತಪಡಿಸಿದ್ದಲ್ಲದೇ, ವಿಷಯವಾಗಿ ಸರಿಯಾದ ತನಿಖೆಗೆ ಮುಂದಾಗಿರುವುದು ಸ್ವಾಗತಾರ್ಹ.
ಜವಾಬ್ದಾರಿಯುತ ಮುಖ್ಯಮಂತ್ರಿಯ ಮಾತನ್ನು ಲಘುವಾಗಿ ಪರಿಗಣಿಸುವಂತಿಲ್ಲ ಎಂಬುದಾಗಿ ಕೇಂದ್ರ ಆಹಾರ ಖಾತೆ ಸಚಿವ ಪ್ರಲ್ಹಾದ ಜೋಶಿ ಪ್ರತಿಕ್ರಿಯಿಸಿರುವುದರ ಜೊತೆಗೆ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಆಂಧ್ರ ಸರ್ಕಾರದಿಂದ ವರದಿಯನ್ನು ಕೇಳಿದ್ದಾರೆ. ಇದು ಕೇವಲ ಪ್ರತಿಕ್ರಿಯೆ ಅಥವಾ ಕಳವಳದಿಂದ ಎದುರಿಸಬೇಕಾದ ವಿಷಯವಲ್ಲ. ಕಂಪನಿಗಳು ಯಾವ ಕಾರಣಕ್ಕೆ ಕಡಿಮೆ ದರಕ್ಕೆ ಗುತ್ತಿಗೆ ಪಡೆದುಕೊಂಡವು? ಒಂದು ಲಡ್ಡು ಪ್ರಸಾದ ಪಡೆದುಕೊಳ್ಳುವುದಕ್ಕೆ ಹರಸಾಹಸ ಮಾಡಬೇಕಿರುವ ಸಂದರ್ಭದಲ್ಲಿ ಕೋಟ್ಯಂತರ ಪ್ರಮಾಣದಲ್ಲಿ ಸಿದ್ಧಗೊಳ್ಳಬೇಕಾದ ಇವಕ್ಕೆ, ತುಪ್ಪವನ್ನು ಸರಬರಾಜು ಮಾಡುವಷ್ಟು ಕ್ಷಮತೆ ಈ ಕಂಪನಿಗಳಿಗೆ ಇತ್ತೇ? ಈ ಕಂಪನಿಗಳು ಕಳೆದ ಐದು ವರ್ಷದಲ್ಲಿ ಎಂತಹ ತುಪ್ಪವನ್ನು ಸರಬರಾಜು ಮಾಡಿದ್ದವು? ಮೂಲದಲ್ಲೇ ಪ್ರಾಣಿಜನ್ಯ ಕೊಬ್ಬನ್ನು ಸೇರಿಸಿ ಕಲಬೆರಕೆ ಮಾಡಿದ್ದು ಜವಾಬ್ದಾರಿಯುತ ಸರ್ಕಾರದ ಗಮನಕ್ಕಾಗಲೀ, ಇಡೀ ತಿರುಮಲ ವ್ಯವಸ್ಥೆಯ ಹೊಣೆ ಹೊತ್ತಿರುವ ತಿರುಪತಿ- ತಿರುಮಲ ದೇವಸ್ಥಾನಂ ಟ್ರಸ್ಟ್‌ನ (ಟಿಟಿಡಿ) ಯಾರೊಬ್ಬ ಅಧಿಕಾರಿಗಾಗಲೀ ಏಕೆ ಗಮನಕ್ಕೆ ಬರಲಿಲ್ಲ? ಖಾಸಗಿ ಕಂಪನಿಗಳಿಗೆ ತುಪ್ಪ ಪೂರೈಕೆ ಹೊಣೆ ವಹಿಸುವಾಗ ನಡೆದ ವ್ಯವಹಾರವೇನು? ಇವೆಲ್ಲ ಅಂಶಗಳನ್ನು ತನಿಖೆಗೆ ಒಳಪಡಿಸಬೇಕಿದೆ.
ಆಂಧ್ರದ ಚಂದ್ರಬಾಬು ನಾಯ್ಡು ಸರ್ಕಾರ ಮಾಡಿರುವ ಈ ಗಂಭೀರ ಆರೋಪಕ್ಕೆ ಈ ಎಲ್ಲ ಆಯಾಮಗಳಿಂದ ತನಿಖೆಯಾಗಬೇಕಿದೆ. ಅನಾಚಾರ ಆರೋಪ ಸಾಬೀತಾಗಿದ್ದೇ ಆದಲ್ಲಿ ಕಠಿಣ ಕಾನೂನು ಕ್ರಮವನ್ನು ಎಲ್ಲ ತಪ್ಪಿತಸ್ಥರ ಮೇಲೂ ಕೈಗೊಳ್ಳಬೇಕಾಗಿದೆ. ಇದಕ್ಕೆ ಪೂರಕವಾಗಿ ಪಾರದರ್ಶಕ ಮತ್ತು ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆಸಬೇಕಾಗಿದೆ. ಏಕೆಂದರೆ ತಿರುಪತಿ ಹಾಗೂ ಇಲ್ಲಿನ ದೇವರ ಪ್ರಸಾದಕ್ಕೆ ಅಸಂಖ್ಯ ಭಕ್ತಾದಿಗಳ ಮನದ ಪಾವಿತ್ರ್ಯ ತಳಕು ಹಾಕಿಕೊಂಡಿದೆ. ಭಾವನಾತ್ಮಕವಾಗಿ ಜನರನ್ನು ಕಂಗೆಡೆಸಿರುವ ಈ ಸಂಗತಿಯಲ್ಲಿ ರಾಜಕೀಯ ಮಾಡದೇ ತನಿಖೆ ಮತ್ತು ಶಿಕ್ಷೆಯಾಗಬೇಕಿವೆ.
ವಿಷಯ ಬೆಳಕಿಗೆ ಬರುತ್ತಿದ್ದಂತೇ, ಕೆಎಂಎಫ್ ಸರಬರಾಜು ಮಾಡುತ್ತಿದ್ದ ತುಪ್ಪದಲ್ಲಿ ಯಾವ ರೀತಿಯ ಕಲಬೆರಕೆಯೂ ಇರಲಿಲ್ಲ. ಈಗಲೂ ಇಲ್ಲ ಎಂಬುದಾಗಿ ರಾಜ್ಯ ಸರ್ಕಾರ ಸ್ಪಷ್ಟ ನುಡಿಗಳಲ್ಲಿ ಹೇಳಿದೆ. ಪೂರಕವೆಂಬಂತೆ ಪುನಃ ನಂದಿನಿ ತುಪ್ಪವನ್ನೇ ಬಳಸಬೇಕು ಎಂಬುದಾಗಿ ಆಂಧ್ರ ಸರ್ಕಾರ ಮಾಡಿರುವ ಆದೇಶ ರಾಜ್ಯದ ಉತ್ಪನ್ನವನ್ನು ಪ್ರಮಾಣೀಕರಿಸುತ್ತದೆ. ಹಾಗೆಯೇ, ಘಟನೆ ಹಿನ್ನೆಲೆಯಲ್ಲಿ ಕರ್ನಾಟಕದ ಎಲ್ಲ ಮುಜರಾಯಿ ದೇವಾಲಯಗಳ ಪ್ರಸಾದಕ್ಕೆ ನಂದಿನಿ ತುಪ್ಪವನ್ನೇ ಬಳಸುವಂತೆ ರಾಜ್ಯ ಮಾಡಿರುವ ಆದೇಶ ಕೂಡ ಸರಿಯಾಗಿದೆ.