ತಿರುಪತಿ ಲಡ್ಡು ಪ್ರಕರಣ: ಜಗನ್ ಮೋಹನ್ ರೆಡ್ಡಿ ಬಂಧನಕ್ಕೆ ಒತ್ತಾಯ
ವಿಜಯಪುರ: ತಿರುಪತಿಯ ಲಡ್ಡು ತಯಾರು ಮಾಡಲು ಪ್ರಾಣಿಜನ್ಯ ಕೊಬ್ಬು, ಮೀನಿನ ಎಣ್ಣೆ ಇರುವ ತುಪ್ಪವನ್ನು ಟಿ.ಟಿ.ಡಿ ಗೆ ಸರಬರಾಜು ಮಾಡಿ ಹಿಂದೂ ಭಾವನೆಗಳಿಗೆ ಧಕ್ಕೆ ತಂದ ಕಂಪನಿಯ ಮಾಲೀಕರ ಮೇಲೆ ಜಾಮೀನು ರಹಿತ ಕೇಸ್ ಹಾಕಿ ಬಂಧಿಸಬೇಕು. ಅವರ ಆಸ್ತಿಗಳನ್ನು ಸರ್ಕಾರ ವಶಕ್ಕೆ ಪಡೆದು ತಕ್ಕ ಪಾಠ ಕಲಿಸಲಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದ್ದಾರೆ.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಬಳಸಿರುವ ವಿಚಾರದ ಕುರಿತು ಕೇಂದ್ರ ಆರೋಗ್ಯ ಸಚಿವರು ವರದಿ ಕೇಳಿದ್ದಾರೆ. ಪ್ರಕರಣದಲ್ಲಿ ಯಾರು ತಪ್ಪಿತಸ್ಥರು ಇದ್ದಾರೆ ಅವರಿಗೆ ಗಲ್ಲು ಶಿಕ್ಷೆ ನೀಡಬೇಕು. ಇಲ್ಲವಾದರೆ ಹಿಂದೂ ಧರ್ಮದ ಮೇಲೆ ಏನೇ ಮಾಡಿದರು ನಡೆಯುತ್ತೆ ಎಂಬಂತಾಗುತ್ತದೆ. ಧಾರ್ಮಿಕ ದತ್ತಿ ಇಲಾಖೆಯಲ್ಲಿ ಹಿಂದೂಯೇತರ ನೌಕರರು ಇರಬಾರದು. ಸರ್ಕಾರಿ ವ್ಯಾಪ್ತಿಯಲ್ಲಿರುವ ದೇವಸ್ಥಾನಗಳನ್ನ ಮುಕ್ತ ಮಾಡಬೇಕು. ಆಂಧ್ರ ಪ್ರದೇಶ ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರನ್ನು ಬಂಧಿಸಬೇಕು, ಜಗನ್ ಮೋಹನ್ ರೆಡ್ಡಿ ಹಿಂದೂ ಅಲ್ಲ, ಮತಾಂತರ ಕ್ರಿಶ್ಚಿಯನ್ ಎಂದರು.