ತುಂಗಭದ್ರಾ ಜಲಾಶಯದ ೧೯ನೇ ಕ್ರಸ್ಟ್ ಗೇಟ್ ಚೈನ್ ಲಿಂಕ್ ಕಟ್: ಬಳ್ಳಾರಿ ಜಿಲ್ಲಾಡಳಿತ ಹೈ ಅಲಟ್೯
ಬಳ್ಳಾರಿ: ತುಂಗಭದ್ರಾ ಜಲಾಶಯದದ ೧೯ ನೇ ಕ್ರಸ್ಟ್ ಗೇಟ್ ಚೈನ್ ಲಿಂಕ್ ಕಟ್ಟಾದ ಹಿನ್ನೆಲೆಯಲ್ಲಿ ನದಿಗೆ ಹೆಚ್ಚಿನ ಪ್ರಮಾಣದ ನೀರು ಹರಿ ಬಿಡಲಾಗುತ್ತಿದ್ದು, ಬಳ್ಳಾರಿ ಜಿಲ್ಲಾಡಳಿತ ಅಗತ್ಯ ಮುನ್ನೆಚ್ಚರಿಕೆ ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಪ್ರಶಾಂತಕುಮಾರ್ ಮಿಶ್ರ ತಿಳಿಸಿದ್ದಾರೆ.
ಈ ಬಗ್ಗೆ ಸಂಯುಕ್ತ ಕರ್ನಾಟಕ ಜತೆ ಮಾತಾನಾಡಿರುವ ಜಿಲ್ಲಾಧಿಕಾರಿಗಳು ಈ ಹಿಂದೆಯೂ ನದಿಗೆ ೧.೬೦ ಕ್ಯೂಸೆಕ್ ವರೆಗೆ ನೀರು ಹರಿಬಿಡಲಾಗಿತ್ತು. ನದಿಪಾತ್ರದ ಜನರಿಗೆ ಏನೂ ಸಮಸ್ಯೆಗಳಾಗಿಲ್ಲ. ಸರಕಾರದ ಉನ್ನತ ಮಟ್ಟದ ಅಧಿಕಾರಿಗಳು, ತುಂಗಭದ್ರಾ ಮಂಡಳಿ ಅಧಿಕಾರಿಗಳ ಜತೆ ಚರ್ಚೆ ಮಾಡಿರುವೆ. ಒಂದೇ ಬಾರಿಗೆ ನದಿಯಿಂದ ಯತೇಚ್ಚ ಪ್ರಮಾಣದ ನೀರು ಹರಿಬಿಡುವುದಿಲ್ಲ. ನಾಲ್ಕು ದಿನ ಹಂತ-ಹಂತವಾಗಿ ಪ್ರತಿ ದಿನ ೧-೧.೫೦ ಲಕ್ಷ ಕ್ಯೂಸೆಕ್ ವರೆಗೆ ನೀರು ಹರಿಬಿಡಲಾಗುತ್ತಿದೆ ಎಂದಿದ್ದಾರೆ. ಆದರೂ ೨ ಲಕ್ಷ ಕ್ಯೂಸೆಕ್ ವರೆಗೂ ನೀರು ಹರಿಬಿಟ್ಟರೂ ಜಿಲ್ಲೆಯ ಕಂಪ್ಲಿ, ಸಿರುಗುಪ್ಪ ತಾಲೂಕಿನ ನದಿಪಾತ್ರಕ್ಕೆ ಸದ್ಯ ಯಾವ ತೊಂದರೆ ಇಲ್ಲ. ಎಲ್ಲ ತಹಸೀಲ್ದಾರ್ ರಿಗೆ ಸೂಚನೆ ನೀಡಲಾಗಿದೆ. ನದಿಪಾತ್ರದಲ್ಲಿ ಅಗತ್ಯ ಮುನ್ನೆಚ್ಚರಿಕೆ ವಹಿಸಲಾಗಿದೆ. ೧.೪೦ ಲಕ್ಷ ಕ್ಯೂಸೆಕ್ ನೀರು ಹೊರ ಬಿಟ್ಟರೆ ಕಂಪ್ಲಿ ಹಳೆ ಸೇತುವೆ ಮುಳುಗಡೆಯಾಗಲಿದ್ದು, ಈ ಮಾರ್ಗದ ಸಂಚಾರ ಬಂದ್ ಮಾಡಲಾಗುತ್ತದೆ. ಕಂಪ್ಲಿ, ಸಿರುಗುಪ್ಪದಲ್ಲಿ ಕಾಳಜಿ ಕೇಂದ್ರ ತೆಗೆಯಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಹೆಚ್ಚಿದ ಆತಂಕ: ಕೊಪ್ಪಳ, ಬಳ್ಲಾರಿ, ರಾಯಚೂರು ಹಾಗೂ ವಿಜಯನಗರ ಜಿಲ್ಲೆಗಳಿಗೆ ಮಾತ್ರವಲ್ಲದೇ ನೆರೆಯ ಆಂಧ್ರ, ತೆಲಂಗಾಣ ರಾಜ್ಯಗಳ ಪಾಲಿಗೆ ತುಂಗಭದ್ರಾ ಜಲಾಶಯ ಜೀವನಾಡಿಯಾಗಿದೆ.
ಜಲಾಶಯದ ೧೯ ನೇ ಕ್ರಸ್ಟ್ ಗೇಟ್ ನಲ್ಲಿ ದಿಢೀರ್ ತಾಂತ್ರಿಕ ದೋಷ ಕಂಡು ಬಂದಿದ್ದಕ್ಕೆ ಈ ಬಾರಿ ಸಂಕಷ್ಟ ಎದುರಾಗಿದೆ.
ಗೇಟ್ ಸಮಸ್ಯೆ ಹಿನ್ನಲೆಯಲ್ಲಿ ತಡ ರಾತ್ರಿ ಬೆಂಗಳೂರಿಂದ ಮುನಿರಬಾದ್ ಗೆ ಆಗಮಿಸಿದ ಸಚಿವ ತಂಗಡಗಿ ಅಧಿಕಾರಿಗಳ ಸಭೆ ನಡೆಸಿದ್ದು, ೧೯ ಗೇಟ್ ದುರಸ್ಥಿಗಾಗಿ ಡ್ಯಾಂ ನಲ್ಲಿರುವ ಕನಿಷ್ಠ ೬೦ ಟಿಎಂಸಿ ನೀರು ಖಾಲಿ ಅನಿವಾರ್ಯ ಎನ್ನುವ ಸಂಗತಿ ರೈತರಲ್ಲಿ ಆತಂಕ ಉಂಟಾಗಿದೆ. ಸುಮಾರು ೬ ಲಕ್ಷ ಹೆಕ್ಟೇರ್ ಬೆಳೆದು ನಿಂತ ಬೆಳೆಗೆ ಆಪತ್ತು ಎದುರಾಗಿದೆ.